By-Elections: "ವಯನಾಡಿನಲ್ಲಿ ಕನ್ನಡಿಗರ ದುಡ್ಡಲ್ಲಿ ಪ್ರಿಯಾಂಕಾ ಗಾಂಧಿ ಜಾತ್ರೆ!"
ದೇಶದ ವಿವಿಧ ರಾಜ್ಯಗಳ ವಿಧಾನಸಭೆಯ ಉಪ ಚುನಾವಣೆ ದಿನಾಂಕ ಸಮೀಪಿಸುತ್ತಿದೆ. ಆದರೆ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದು, ಇಲ್ಲೂ ಕರ್ನಾಟಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಷಯ ಚರ್ಚೆಯಾಗುತ್ತಿದೆ. ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಅವರು ಚುನಾವಣಾ ಕಣದಲ್ಲಿ ಇದ್ದಾರೆ. ಪ್ರಿಯಾಂಕಾ ಅವರು ಇದೇ ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಪ್ರಚಾರಕ್ಕೆಂದು ಕನ್ನಡಿಗರ ...
ದುಡ್ಡನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಆರ್. ಅಶೋಕ್ ಅವರು, ಕೇರಳದ ವಯನಾಡಿನಲ್ಲಿ 'ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ' ಎನ್ನುವಂತೆ ಕನ್ನಡಿಗರ ದುಡ್ಡಲ್ಲಿ ಪ್ರಿಯಾಂಕಾ ಗಾಂಧಿ ಜಾತ್ರೆ! ಎನ್ನುವಂತೆ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಹೋದಾರಿ ಪ್ರಿಯಾಂಕ ಗಾಂಧಿ ಅವರು, ವಯನಾಡು ಕ್ಷೇತ್ರದಿಂದ ಇದೇ ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದಾರೆ. ವಯನಾಡಿನಲ್ಲಿ ಕಾಂಗ್ರೆಸ್‌ನಿಂದ ಭರ್ಜರಿ ಚುನಾವಣೆ ಪ್ರಚಾರ ಸಭೆಗಳು, ಚರ್ಚೆಗಳು ಹಾಗೂ ರ್‍ಯಾಲಿಗಳು ನಡೆಯುತ್ತಿವೆ. ಆದರೆ, ಇಲ್ಲಿ ನಡೆಯುತ್ತಿರುವ ಚುನಾವಣೆ ಪ್ರಚಾರಕ್ಕೆ ಕರ್ನಾಟಕದ ತೆರಿಗೆಯ ಹಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಫೋಟೋ ಇರುವ ಆಹಾರಧಾನ್ಯಗಳ ಕಿಟ್ ವಿತರಿಸಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಹೇಗೆ ATM ಮಾಡಿಕೊಂಡಿದೆ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ದೂರಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ತೆಲಂಗಾಣ ಚುನಾವಣೆಗೆ ಸಾಗಿಸಿದ್ದ #ATMSarkara, ಈಗ ಇನ್ಯಾವ ಇಲಾಖೆಯಲ್ಲಿ, ನಿಗಮ, ಮಂಡಳಿಯಲ್ಲಿ ಲೂಟಿ ಹೊಡೆದು ಪ್ರಿಯಾಂಕಾ ಗಾಂಧಿ ಅವರ ಉಪಚುನಾವಣೆಗೆ ಕೇರಳಕ್ಕೆ ಸಾಗಿಸಿದೆಯೋ ಗೊತ್ತಿಲ್ಲ. ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗಾಗಿ ಹೈಕಮಾಂಡ್ ಗೆ ಕಪ್ಪ ಸಲ್ಲಿಸಲು ಇನ್ನೆಲ್ಲೆಲ್ಲಿ ಇನ್ನೆಷ್ಟು ಲೂಟಿ ಹೊಡೆದಿದ್ದಾರೋ ಗೊತ್ತಿಲ್ಲ ಎಂದು ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.
ಒಟ್ಟಿನಲ್ಲಿ ದೇಶದ ಯಾವ ಮೂಲೆಯಲ್ಲಿ ಚುನಾವಣೆ ನಡೆದರೂ ನಷ್ಟ ಆಗುವುದು ಮಾತ್ರ ಕನ್ನಡಿಗರಿಗೆ. 'ಕನ್ನಡಿಗರ ತೆರಿಗೆ, ಕಾಂಗ್ರೆಸ್ ಹೈಕಮಾಂಡ್ ಹಕ್ಕು' ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವರಸೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮೊದಲ ಬಾರಿ ಚುನಾವಣೆ ಅಖಾಡಕ್ಕೆ: ಇನ್ನು ಕಾಂಗ್ರೆಸ್‌ನಲ್ಲಿ ಅಧಿಕಾರ ಹಾಗೂ ಆಡಳಿತದಿಂದ ದೂರವೇ ಉಳಿದಿದ್ದ ಪ್ರಿಯಾಂಕಾಗಾಂಧಿ ಅವರು ಇದೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡು ಹಾಗೂ ರಾಯ್ ಬರೇಲಿಯಲ್ಲಿ ಸ್ಪರ್ಧೆ ಮಾಡಿದ್ದರು. ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಅವರು ಜಯಿಸಿದ್ದರು. ರಾಹುಲ್ ಗಾಂಧಿ ಅವರು, ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ, ವಯನಾಡ್ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‌ನಿಂದ ಪ್ರಿಯಾಂಕಾಗಾಂಧಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ.












Click it and Unblock the Notifications