ಡಿ.ಕೆ ಶಿವಕುಮಾರ್ ತರ ಲೂಟಿ ಮಾಡಿದ್ದರೆ ನಾನೂ ಆ ಕೆಲಸ ಮಾಡ್ತಿದ್ದೆ: ಎಚ್.ಡಿ ಕುಮಾರಸ್ವಾಮಿ!
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ನಡುವೆ ಮತ್ತೆ ವಾಕ್ಸಮರ ಜೋರಾಗಿದೆ. ಈ ಬಾರಿ ಇಬ್ಬರು ನಾಯಕರು ಇನ್ನೊಂದು ಹಂತದ ವಾಕ್ಸಮರವನ್ನು ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರ ರೀತಿ ನಾನು ಲೂಟಿ ಮಾಡಿಲ್ಲ ಅಂತ ಎಚ್.ಡಿ ಕುಮಾರ ಸ್ವಾಮಿ ಅವರು ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ನಾಯಕರ ನಡುವೆ ವಾಕ್ಸಮರ ಜೋರಾಗಿದೆ.
ಇದೀಗ ಡಿ.ಕೆ ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟಿರುವ ಎಚ್.ಡಿ ಕುಮಾರಸ್ವಾಮಿ ಅವರು, ನಾನೇನಾದ್ರು ಡಿ.ಕೆ ಶಿವಕುಮಾರ್ ತರ ಲೂಟಿ ಮಾಡಿದಿದ್ದರೆ, ನಾನು ಕೂಡ ಕರ್ನಾಟಕದ ಪ್ರತಿ ತಾಲ್ಲೂಕಿಗೆ 10 ಎಕರೆ ಜಾಗವನ್ನು ಉಚಿತವಾಗಿ ಕೊಡ್ತಾ ಇದ್ದೆ. ನಾನು ಆ ತರ ಲೂಟಿ ಮಾಡಿಲ್ಲ ಅಂತ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಡಿ.ಕೆಶಿಗೆ ತಿರುಗೇಟು ಕೊಟ್ಟಿದ್ದಾರೆ. ಈಚೆಗೆ ಡಿ.ಕೆ ಶಿವಕುಮಾರ್ ಅವರು ನನ್ನ ತಾಲ್ಲೂಕಿನಲ್ಲಿರುವ ಶಾಲೆಗಳಿಗೆ 25 ಎಕರೆ ಭೂಮಿ ಕೊಟ್ಟಿದ್ದೇನೆ. ಕುಮಾರಸ್ವಾಮಿ ಏನ್ಮಾಡಿದ್ದಾರೆ, ಎಷ್ಟು ಭೂಮಿ ಕೊಟ್ಟಿದ್ದಾರೆ ಹೇಳಲಿ ಅಂತ ಕೇಳಿದ್ದರು. ಇದಕ್ಕೆ ಈಗ ಕುಮಾರಸ್ವಾಮಿ ಅವರು ಈ ರೀತಿ ಟಾಂಗ್ ಕೊಟ್ಟಿದ್ದಾರೆ.

ನಾನೆಂದೂ ಅವರ ರೀತಿ ಲೂಟಿ ಮಾಡಿಲ್ಲ. ಡಿ.ಕೆಶಿ ಅವರೇ ನಿಮ್ಮತರ ಲೂಟಿ ಮಾಡಿದಿದ್ದರೆ, ಕೇವಲ ಒಂದು ತಾಲ್ಲೂಕಿಗೆ ಮಾತ್ರವೇಕೆ ರಾಜ್ಯದ ಎಲ್ಲಾ ತಾಲ್ಲೂಕಿಗೂ ನಾನು ತಲಾ 10 ಎಕರೆ ಜಾಗವನ್ನು ಫ್ರೀಯಾಗಿ ಹಂಚಿಕೆ ಮಾಡ್ತಿದ್ದೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇರುವವರು ಬೇರೆಯವರಿಗೆ ಜಾಗ ಕೊಟ್ಟಿಲ್ಲ. ಬೇರೆಯವರ ಜಾಗವನ್ನೇ ಇರುವ ಲೂಟಿ ಮಾಡ್ತಾ ಇದ್ದಾರೆ ಅಷ್ಟೇ. ರಾಜ್ಯ ಕಾಂಗ್ರೆಸ್ ನಾಯಕರು ಇಡೀ ರಾಜ್ಯವನ್ನೇ ಲೂಟಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಒಕ್ಕಲಿಗ ನಾಯಕ ಸಿ.ಎಂ: ಕರ್ನಾಟಕದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ವಿಷಯದಿಂದ ಬಿಜೆಪಿ ಹಾಗೂ ಜೆಡಿಎಸ್‌ನ ಒಕ್ಕಲಿಗ ನಾಯಕರು ಅಂತರ ಕಾಪಾಡಿಕೊಂಡಿದ್ದಾರೆ. ಒಂದೊಮ್ಮೆ ಈ ಬಗ್ಗೆ ಏನಾದರೂ ಮಾತನಾಡಿದರೆ, ಈ ಬಾರಿಯ ವಿಧಾನಸಭೆ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಹಿನ್ನಡೆಯಾಗಲಿದೆ. ಅಲ್ಲದೇ ಸಮುದಾಯದ ಮತದಾರರಲ್ಲಿ ತಪ್ಪು ಸಂದೇಶ ಹೋಗಲಿದೆ ಎನ್ನುವ ಕಾರಣಕ್ಕೆ ಈ ಬಗ್ಗೆ ಯಾವ ಒಕ್ಕಲಿಗರ ನಾಯಕರೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಲಾಗಿದೆ.
ಇನ್ನು ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಕಣವೂ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಆದರೆ, ಕೊನೆಯ ಹಂತದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಲಾಗುತ್ತಿದೆ. ನಿಖಿಲ್ ಕುಮಾರಸ್ವಾಮಿ ಅವರು ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.












Click it and Unblock the Notifications