By Election Results 2024: ಎಲ್ಲಾ ರಾಜ್ಯದ ಉಪಚುನಾವಣೆಯ ಫಲಿತಾಂಶದ ಸಂಪೂರ್ಣ ವಿವರ
ಬೆಂಗಳೂರು, ನವೆಂಬರ್ 23: ಕರ್ನಾಟಕ ಸೇರಿದಂತೆ ದೇಶದಲ್ಲಿ ಇಂದು ಹಲವು ರಾಜ್ಯಗಳ ಉಪ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಎರಡು ಲೋಕಸಭಾ ಸ್ಥಾನಗಳಾದ ವಯನಾಡ್ ಮತ್ತು ನಾಂದೇಡ್ ಹಾಗೂ ಕರ್ನಾಟಕ, ಉತ್ತರ ಪ್ರದೇಶ, ಪಂಜಾಬ್, ಕೇರಳ, ಉತ್ತರಾಖಂಡ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಒಟ್ಟು 46 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ.
ಕರ್ನಾಟಕದ ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ಒಟ್ಟು ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಜಯ ಕಂಡಿರುವುದು ಬಿಜೆಪಿ-ಜೆಡಿಎಸ್ ಮೈತ್ರಿಗೆ ತೀವ್ರ ಮುಖಭಂಗವಾಗಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. 20 ಸುತ್ತಿನಲ್ಲಿ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಒಟ್ಟು 1,12,642 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಸಾಧಿಸಿದ್ದಾರೆ. ಈ ಮೂಲಕ 25,413 ಮತಗಳ ಅಂತರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಮತ್ತೊಮ್ಮೆ ಸೋಲುಣಿಸಿದ್ದಾರೆ.
ಮತಗಳ ವಿವರ
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್- 1,12,642
ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ-87,229
ಅಂತರ- 25,413
ಸಂಡೂರು ವಿಧಾನಸಭಾ ಕ್ಷೇತ್ರ
ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಈ ತುಕಾರಾಮ್ ಗೆಲುವು ಸಾಧಿಸಿದ್ದಾರೆ. ಅನ್ನಪೂರ್ಣ ಈ ತುಕಾರಾಮ್ 93,616 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿಯ ಬಂಗಾರು ಹನುಮಂತು ಅವರನ್ನು 9,649 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಮತಗಳ ವಿವರ
ಅನ್ನಪೂರ್ಣ ಈ ತುಕಾರಾಮ್-93,616
ಬಂಗಾರು ಹನುಮಂತು- 83,967
ಅಂತರ- 9,649
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ
ಶಿಗ್ಗಾಂವಿ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಯಾಸಿರ್ ಅಹ್ಮದ್‌ಖಾನ್ ಒಟ್ಟು 1,00,756 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಭರತ್ ಬೊಮ್ಮಾಯಿ ಅವರನ್ನು 13,448 ಮತಗಳ ಅಂತದಲ್ಲಿ ಸೋಲಿಸಿದ್ದಾರೆ.
ಮತಗಳ ವಿವರ
ಪಠಾಣ್ ಯಾಸಿರ್ ಅಹ್ಮದ್‌ಖಾನ್- 1,00,756
ಭರತ್ ಬೊಮ್ಮಾಯಿ- 87,308
ಅಂತರ- 13,448

ವಯನಾಡು ಲೋಕಸಭಾ ಫಲಿತಾಂಶ
ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾದ ಕೇರಳದ ವಯನಾಡ್ ಲೋಕಸಭಾ ಸ್ಥಾನಕ್ಕೆ ನವೆಂಬರ್ 13 ರಂದು ಉಪಚುನಾವಣೆಗೆ ಮತದಾನ ನಡೆದಿತ್ತು. ಇಂದು ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಪ್ರಿಯಾಂಕಾ ಗಾಂಧಿ ಸುಮಾರು 4 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಿಪಿಐನ ಸತ್ಯನ್ ಮೊಕೇರಿ ಹಾಗೂ ಬಿಜೆಪಿಯ ನವ್ಯಾ ಹರಿದಾಸ್ ವಿರುದ್ಧ ಪ್ರಿಯಾಂಕಾ ಗಾಂಧಿ ಗೆಲುವು ಸಾಧಿಸಿದ್ದಾರೆ.
ಉಳಿದ ಫಲಿತಾಂಶಗಳ ವಿವರ
ಇನ್ನು ನಾಂದೇಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪಂಜಾಬ್ ರಾಜ್ಯದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಎಎಪಿ ಮೂರು ಹಾಗೂ ಕಾಂಗ್ರೆಸ್ ಪಕ್ಷ ಒಂದು ಸ್ಥಾನದಲ್ಲಿ ಗೆಲುವು ದಾಖಲಿಸಿದೆ. ಮಧ್ಯಪ್ರದೇಶದ 2 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಸಿಕ್ಕಿಂನ ಎರಡರಲ್ಲೂ ಎಸ್‌ಕೆಎಂ ಪಕ್ಷ ಜಯ ಸಾಧಿಸಿದೆ. ಗುಜರಾತ್, ಛತೀಸ್‌ಗಢ ಉತ್ತರಾಖಂಡ್ ರಾಜ್ಯಗಳ ದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅಸ್ಸಾಂ, ಪಂಜಾಬ್, ಮಧ್ಯಪ್ರದೇಶ, ಸಿಕ್ಕಿಂ ರಾಜ್ಯಗಳ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಎಎಪಿ ಪಕ್ಷಗಳು ಜಯ ಸಾಧಿಸಿವೆ.












Click it and Unblock the Notifications