Budget 2025: ಕೇಂದ್ರ ಬಜೆಟ್‌: ಕರ್ನಾಟಕದ ಬೇಡಿಕೆಗಳೇನು?: ಪಟ್ಟಿ ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು, ಜನವರಿ 31: 2025-26ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸು ಮಾಡಿರುವ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಫಲಾನುಭವಿಗಳಾಗಿರುವರೆಲ್ಲರಿಗೂ ಆರೋಗ್ಯ ಯೋಜನೆಯನ್ನು ವಿಸ್ತರಿಸಬೇಕು ಮೊದಲಾದ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದ ಮುಂದಿಟ್ಟಿದ್ದಾರೆ.

ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಅನುಸರಿಸುತ್ತಿರುವ ತಾರತಮ್ಯ ಧೋರಣೆ ಜಗಜ್ಜಾಹೀರಾಗಿದೆ. ನಮ್ಮ ರಾಜ್ಯಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ನಿರಂತರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಲು ಮುಂದಾಗಬೇಕೆಂದು ನಮ್ಮ ಸರ್ಕಾರ ಒತ್ತಾಯಿಸುತ್ತಲೇ ಬಂದಿದೆ. ಇದೇ ಫೆಬ್ರವರಿಯ ಎರಡರಂದು ಕೇಂದ್ರ ಹಣಕಾಸು ಸಚಿವರು 2025-26ನೇ ಸಾಲಿನ ಬಜೆಟ್ ಮಂಡಿಸಲಿರುವ ಹಿನ್ನೆಲೆಯಲ್ಲಿ ಅದರಲ್ಲಿ ಸೇರಿಸಬೇಕಾಗಿರುವ ರಾಜ್ಯದ ಬೇಡಿಕೆಗಳ ಪಟ್ಟಿಯನ್ನು ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇನೆ ಎಂದು ರಾಜ್ಯದ ಬೇಡಿಕೆಗಳ ಕುರಿತು ಸಿದ್ದರಾಮಯ್ಯ ಅವರು ಹಂಚಿಕೊಂಡಿದ್ದಾರೆ.

Budget 2025 Siddaramaiah Appeal For Release Of Grants Announced For The State

1. 15ನೇ ಹಣಕಾಸು ಆಯೋಗದ ಅವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದ್ದರೂ ಇಲ್ಲಿಯ ವರೆಗೆ ಆಯೋಗವೇ ಶಿಫಾರಸು ಮಾಡಿರುವ ವಿಶೇಷ ಅನುದಾನ ರೂ.5495 ಕೋಟಿ ಮತ್ತು ರಾಜ್ಯ ಕೇಂದ್ರಿತ ರೂ.6000 ಕೋಟಿ ಮೊತ್ತದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಲ್ಲ.

ಕೇಂದ್ರ ಹಣಕಾಸು ಆಯೋಗ ತಾನು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ಮೊತ್ತದ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಾ ಬಂದಿದೆ. 2021-22, 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ 1311 ಕೋಟಿ, ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ರೂ.775 ಕೋಟಿ ಕಡಿಮೆ ಅನುದಾನ ನೀಡಲಾಗಿದೆ. 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ, ಆರೋಗ್ಯ ಅನುದಾನದಲ್ಲಿ ರೂ.826 ಕೋಟಿ, ಎಸ್ ಡಿ ಆರ್ ಎಫ್ ಅಡಿಯಲ್ಲಿ ರೂ.340 ಕೋಟಿ ಹಣವನ್ನು ಕಡಿತ ಮಾಡಲಾಗಿದೆ. ಈ ಒಟ್ಟು ಬಾಕಿ ರೂ.3,300 ಕೋಟಿ ರೂಪಾಯಿ ಮತ್ತು 2024-25 ಮತ್ತು 2025-26ರ ಅವಧಿಯಲ್ಲಿ ಆಯೋಗ ಶಿಫಾರಸು ಮಾಡಿರುವ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು.

2. ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ವಸೂಲು ಮಾಡುತ್ತಿರುವ ಸೆಸ್ ಮತ್ತು ಸರ್ಚಾರ್ಜ್ ಗಳಲ್ಲಿ ರಾಜ್ಯಗಳಿಗೆ ಪಾಲು ನೀಡಲಾಗುತ್ತಿಲ್ಲ. 2010-11ರಲ್ಲಿ ಒಟ್ಟು ತೆರಿಗೆಯ ಶೇಕಡಾ 8.1ರಷ್ಟಿದ್ದ ಸೆಸ್ ಮತ್ತು ಸರ್ಚಾರ್ಜ್ ನ ಪ್ರಮಾಣ 2024-25ರಲ್ಲಿ ಶೇಕಡಾ 14ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಬರುವ ತೆರಿಗೆ ಪಾಲಿನಲ್ಲಿ ಕಡಿತ ಉಂಟಾಗಿದೆ. ಇದರ ಜೊತೆಯಲ್ಲಿ ಕೇಂದ್ರದ ಸಹಾಯ ಧನ ಕೂಡಾ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಸೆಸ್ ಮತ್ತು ಸರ್ಚಾರ್ಜ್ ಅನ್ನು ರದ್ದುಗೊಳಿಸಬೇಕು ಇಲ್ಲವೆ ಅದನ್ನು ಒಟ್ಟು ತೆರಿಗೆಯ ನಿಧಿಗೆ ಸೇರಿಸಿ ಅದನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕು.

3. ಜಿಎಸ್ ಟಿ ಅನುಷ್ಠಾನದಿಂದಾಗಿ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಲು ಜಿಎಸ್ ಟಿ ಪರಿಹಾರ ಸೆಸ್ ಜಾರಿಗೊಳಿಸಲಾಗಿತ್ತು. 2022ರ ಜುಲೈ ತಿಂಗಳಲ್ಲಿಯೇ ಪರಿಹಾರ ನೀಡುವುದನ್ನು ನಿಲ್ಲಿಸಿದರೂ 2026ರ ವರೆಗೆ ಸೆಸ್ ಸಂಗ್ರಹವನ್ನು ಮುಂದುವರಿಸಲಾಗಿದೆ.. ಈ ಸೆಸ್ ಬದಲಿಗೆ ಹೆಚ್ಚುವರಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್ ಜಿಎಸ್ ಟಿ) ಸಂಗ್ರಹಕ್ಕೆ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಬೇಕು.

4. 1985ರಿಂದ ಸೇವಾ ತೆರಿಗೆಯನ್ನು ಪರಿಷ್ಕರಿಸಿಲ್ಲ, ಈ ದೀರ್ಘಾವಧಿಯಲ್ಲಿ ನಡೆದಿರುವ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸೇವಾ ತೆರಿಗೆಯ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿಮಾಡಬೇಕು.

5. ಬಂಡವಾಳ ವೆಚ್ಚಕ್ಕೆ ವಿಶೇಷ ನೆರವು ನೀಡುವ ಯೋಜನೆ ಸ್ವಾಗತಾರ್ಹವಾದುದು. ಆದರೆ ತೆರಿಗೆ ಹಂಚಿಕೆಯಲ್ಲಿ ಸಿಗುವ ಪಾಲಿನ ಆಧಾರದಲ್ಲಿಯೇ ಈ ವಿಶೇಷ ನೆರವು ನೀಡುತ್ತಿರುವ ಕಾರಣದಿಂದಾಗಿ ಈಗಾಗಲೇ ತೆರಿಗೆ ಹಂಚಿಕೆಯಲ್ಲಿ ಅನ್ಯಾಯಕ್ಕೀಡಾಗಿರುವ ಕರ್ನಾಟಕಕ್ಕೆ ಅತಿ ಕಡಿಮೆ ನೆರವು ಸಿಗುತ್ತಿದೆ. ಈ ಕಾರಣಕ್ಕಾಗಿ ವಿಶೇಷ ನೆರವು ಯೋಜನೆಯ ಮಾನದಂಡವನ್ನು ಬದಲಾಯಿಸಬೇಕು.

6. ಆಯುಷ್ಮಾನ್ ಭಾರತ್ -ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ಸುಮಾರು 69 ಲಕ್ಷ ಬಡ ಕುಟುಂಬಗಳನ್ನು ಮಾತ್ರ ಫಲಾನುಭವಿಗಳಾಗಿ ಗುರುತಿಸಿ ನೆರವು ನೀಡುತ್ತಿದೆ. ಇದರಿಂದಾಗಿ ಆರೋಗ್ಯ ಕರ್ನಾಟಕ ಯೋಜನೆಯ ಶೇಕಡಾ 60ರಷ್ಟು ಕುಟುಂಬಗಳಿಗೆ ಮಾತ್ರ ಕೇಂದ್ರ ಸರ್ಕಾರ ಅನುದಾನ ನೀಡುವಂತಾಗಿದ್ದು ಉಳಿದ ಕುಟುಂಬಗಳ ಹೊಣೆಯನ್ನು ರಾಜ್ಯ ಸರ್ಕಾರ ಹೊರಬೇಕಾಗಿದೆ. ಆದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ 1.14 ಕುಟುಂಬಗಳನ್ನು ಫಲಾನುಭವಿಗಳೆಂದು ಗುರುತಿಸಿದೆ... ಈ ನಿಯಮಾವಳಿಗಳನ್ನು ಬದಲಾಯಿಸಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಫಲಾನುಭವಿಗಳಾಗಿರುವರೆಲ್ಲರಿಗೂ ಆರೋಗ್ಯ ಯೋಜನೆಯನ್ನು ವಿಸ್ತರಿಸಬೇಕು.

7. ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಅನುಗುಣವಾಗಿ ಕರ್ನಾಟಕ ಸರ್ಕಾರ ರೈತರಿಂದ ಉತ್ಪನ್ನಗಳನ್ನು ಖರೀದಿ ಮಾಡುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರು ರೂ.2,461.49 ಕೋಟಿ ಹಣವನ್ನು ಬಾಕಿ ಇರಿಸಿರುವುದರಿಂದಾಗಿ ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಹಣ ಬಿಡುಗಡೆ ಮಾಡಬೇಕಾಗಿದೆ. ಈ ಬಾಕಿ ಹಣವನ್ನು ಶೀಘ್ರ ಬಿಡುಗಡೆಗೊಳಿಸಬೇಕು.

8. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಗೌರವಧನ ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಹಣ ಅತಿ ಕಡಿಮೆ ಮೊತ್ತದಾಗಿದ್ದು ಕಳೆದ ಕೆಲವು ವರ್ಷಗಳಿಂದ ಅದನ್ನು ಪರಿಷ್ಕರಿಸಿಲ್ಲ. ಈ ಪರಿಸ್ಥಿತಿಯಲ್ಲಿ ಕೇಂದ್ರದ ಪಾಲನ್ನು ರಾಜ್ಯ ಸರ್ಕಾರವೇ ನೀಡಬೇಕಾದ ಪರಿಸ್ಥಿತಿ ಇದೆ. ಇದರಿಂದ ರಾಜ್ಯದ ಖಜಾನೆ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ರಾಜ್ಯದ ಅಂಗನವಾಡಿ ಕಾರ್ಯಕರ್ತರರಿಗೆ ಮಾಸಿಕ ರೂ,10000 ಗೌರವಧನ ನೀಡಲಾಗುತ್ತಿದ್ದು ಇದರಲ್ಲಿ ಕೇಂದ್ರದ ಪಾಲು 2700 ರೂಪಾಯಿ ಮಾತ್ರ. ಆಶಾ ಕಾರ್ಯಕರ್ತರಿಗೆ ನೀಡುವ 7000 ರೂ. ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲು ರೂ. 2000. ಅಂಗನವಾಡಿಯ ಅಡುಗೆ ಕೆಲಸಗಾರರು ಮತ್ತು ಸಹಾಯಕರಿಗೆ ರಾಜ್ಯ ಸರ್ಕಾರ ರೂ.3100 ವೇತನ ನೀಡುತ್ತಿದ್ದು ಇದರಲ್ಲಿ ಕೇಂದ್ರ ಸರ್ಕಾರ ಪಾಲು ರೂ.600 ಮಾತ್ರ. ಈ ಕಾರ್ಯಕರ್ತರ ವೇತನದ ಬಾಕಿಮೊತ್ತವನ್ನು ಭರಿಸುವುದು ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ.ಅಂಗನವಾಡಿ ಮತ್ತು ಆಶಾಕಾರ್ಯಕರ್ತರ ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ರೂ.5000ಕ್ಕೆ ಮತ್ತು ಅಡುಗೆ ಕೆಲಸಗಾರರು ಮತ್ತು ಕಾರ್ಯಕರ್ತರ ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ಕನಿಷ್ಠ ರೂ.5000 ಹೆಚ್ಚಿಸಬೇಕು.

9. ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯಡಿ ಕೇಂದ್ರ ಸರ್ಕಾರ ಪ್ರತಿಯೊಂದು ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ರೂ.1.50 ಲಕ್ಷ ಮತ್ತು ರಾಜ್ಯ ಸರ್ಕಾರ 1.80 ಲಕ್ಷ ಸಹಾಯ ಧನ ನೀಡುತ್ತಿದೆ. ಆದರೆ ಮನೆನಿರ್ಮಾಣ ವೆಚ್ಚ ವಿಪರೀತ ಏರಿಕೆಯಾಗುವುದರಿಂದ ಕೇಂದ್ರ ಸರ್ಕಾರ ತನ್ನ ಪಾಲನ್ನು ಕನಿಷ್ಠ ಐದು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು.

10. ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ) ಪ್ರತಿ ಮನೆಗೆ ಕೇಂದ್ರ ಸರ್ಕಾರ 72 ಲಕ್ಷ ರೂಪಾಯಿ ಮತ್ತು ರಾಜ್ಯ ಸರ್ಕಾರ 42 ಲಕ್ಷ ರೂಪಾಯಿ ಸಹಾಯಧನ ನೀಡುತ್ತಿದೆ. ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತನ್ನ ಪಾಲನ್ನು ಕನಿಷ‍್ಠ ಮೂರು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು.

11. 2023ರಲ್ಲಿ ಕರ್ನಾಟಕದ 236 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದ್ದ ಕಾರಣದಿಂದಾಗಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿ ರೂ.35,162 ಕೋಟಿ ನಷ್ಟ ಉಂಟಾಗಿತ್ತು. ಇದಕ್ಕಾಗಿ ಕರ್ನಾಟಕ ರೂ.18,171 ಕೋಟಿ ಪರಿಹಾರ ಕೇಳಿದ್ದರೂ ಎನ್ ಡಿಆರ್ ಎಫ್ ನಿಂದ ಬಿಡುಗಡೆಯಾಗಿದ್ದು ಕೇವಲ ರೂ.3454 ಕೋಟಿ ಮಾತ್ರ. 2024ರಲ್ಲಿ ಅತಿವೃಷ್ಟಿಯಿಂದ ರಾಜ್ಯದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಆಗಿರುವ ಹಾನಿಗೆ ಎನ್ ಡಿಎಂಎಫ್ ನಿಂದ ಪರಿಹಾರ ಕೇಳಿದ್ದರೂ ಇಲ್ಲಿಯ ವರೆಗೆ ಚಿಕ್ಕಾಸು ಸಿಕ್ಕಿಲ್ಲ.

12. ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ (ಎನ್ ಡಿಆರ್ ಎಫ್) ಮತ್ತು ಎಸ್ ಡಿಆರ್ ಎಫ್ ನಿಧಿಗಳಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಷ್ಟಕ್ಕೆ ಸರಿಸಮನಾಗಿ ಪರಿಹಾರ ನೀಡಲು ಸಹಾಯವಾಗುವಂತೆ ಮತ್ತು ಪರಿಹಾರ ನೀಡುವ ಪ್ರಕ್ರಿಯೆ ಪಾರದರ್ಶಕವಾಗಿ ಹಾಗೂ ತ್ವರಿತಗತಿಯಲ್ಲಿ ನಡೆಯುವಂತೆ ಎನ್ ಡಿಆರ್ ಎಫ್ ಅನ್ನು ಸುಧಾರಣೆಗೊಳಪಡಿಸಬೇಕು. ಪರಿಹಾರ ನೀಡಿಕೆಯ ಮಾನದಂಡಗಳನ್ನು ಬರಪೀಡಿತ ರಾಜ್ಯಗಳಿಗೆ ನೆರವಾಗುವ ರೀತಿಯಲ್ಲಿ ಪರಿಹಾರ ನೀಡಿಕೆಯ ಮಾನದಂಡಗಳನ್ನು ಬದಲಾವಣೆ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+