Startup: ಸ್ಟಾರ್ಟಪ್ ಕ್ಷೇತ್ರಕ್ಕೆ 3 ಹೊಸ ಕಾರ್ಯಕ್ರಮ ಘೋಷಿಸಿದ ಸಿಎಂ: ಏನೇನಿರಲಿದೆ?
ಬೆಂಗಳೂರು, ಫೆಬ್ರವರಿ 16: ಕರ್ನಾಟಕ ಸರ್ಕಾರ ಬರುವ ದಿನಗಳಲ್ಲಿ ರಾಜ್ಯದಲ್ಲಿ ಸ್ಟಾರ್ಟಪ್ ವಲಯದಲ್ಲಿ ಮುಂಚೂಣಿ ಕಾಯ್ದುಕೊಳ್ಳಲು ಮೂರು ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಂದ ಪ್ರಾರಂಭವಾದ ನವೀನ ಪ್ರಯತ್ನಗಳು, ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ರಾಜೀವ್ ಗಾಂಧಿ ವಾಣಿಜ್ಯೋದ್ಯಮ ಕಾರ್ಯಕ್ರಮಗಳಡಿ ಜ್ಞಾನಾಧಾರಿತ ಮತ್ತು ತಂತ್ರಜ್ಞಾನ ಚಾಲಿತ ಪರಿಕಲ್ಪನೆಗಳು ಮತ್ತು ನಾವೀನ್ಯತೆಗಳನ್ನು ಪೋಷಿಸಲಾಗುವುದು.

ಸಿ-ಕ್ಯಾಂಪ್‌ನ ಅಗ್ರಿ ಇನ್ನೋವೇಶನ್ ಪಾರ್ಕ್
ಅಲ್ಲದೇ ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ಮಹಿಳಾ ಉತ್ಕೃಷ್ಟತೆ ಮತ್ತು ಉದ್ಯಮಶೀಲತೆಯಲ್ಲಿ ಬೆಂಬಲ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಆರಂಭಿಸಲಿದೆ. ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಅಗ್ರಿ ಇನ್ನೋವೇಶನ್ ಸ್ಟಾರ್ಟಪ್‌ಗಳನ್ನು ಸ್ಥಾಪಿಸಲು ಸಿ-ಕ್ಯಾಂಪ್‌ನ ಅಗ್ರಿ ಇನ್ನೋವೇಶನ್ ಪಾರ್ಕ್‌ಗೆ 5 ಎಕರೆ ಭೂಮಿಯನ್ನು ಮೀಸಲಿಡಲು ಉದ್ದೇಶಿಸಲಾಗಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಈ ಸ್ಥಾನವನ್ನು ಬಲಪಡಿಸಲು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲು ಫಿನ್ಟೆಕ್, ಸ್ಪೇಸ್ಟೆಕ್ ಮತ್ತು ಆಟೋಮೋಟಿವ್ ಟೆಕ್‌ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಉದ್ಯಮಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಸ್ಥಾಪಿಸಲಾಗುವುದು ಎಂದು ಸಿಎಂ ತಿಳಿಸಿದರು.

ಜಾಗತಿಕ ಸಾಮರ್ಥ್ಯ ಕೇಂದ್ರಗಳ ನೀತಿ
ಬೆಂಗಳೂರು ನಗರವು 400ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳ (Global Capability Centres) ನೆಲೆಯಾಗಿದೆ. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿನಲ್ಲಿ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳ ನೀತಿಯನ್ನು ಜಾರಿಗೊಳಿಸುವ ಮೂಲಕ ಕರ್ನಾಟಕಕ್ಕೆ ಪ್ರಮುಖ ವಲಯಗಳಲ್ಲಿ ಹೂಡಿಕೆ ಆಕರ್ಷಿಸಲು ಆದ್ಯತೆ ನೀಡಲಾಗುವುದು.
ಸ್ಟಾರ್ಟಪ್ ಉದ್ಯಮಕ್ಕೆ ಆದ್ಯತೆ ನೀಡುವ ಮೂಲಕ ಹೊಸಬರಿಗೆ, ಹೊಸ ಅವಕಾಶಗಳಿಗೆ ಒತ್ತು ಸಿಗಲಿದೆ. ಇದರಿಂದ ಉದ್ಯೋಗ ಸೃಷ್ಟಿ ಸಹ ಸಾಧ್ಯವಾಗಲಿದೆ.












Click it and Unblock the Notifications