ಕೇಂದ್ರ ಬಜೆಟ್: ಆತ್ಮನಿರ್ಭರ ಬಜೆಟ್ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ 1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು. ಈ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಟ್ವೀಟ್‌ನಲ್ಲಿ ಏನಿದೆ?
ಕೇಂದ್ರ ಸರ್ಕಾರದ ಆತ್ಮನಿರ್ಭರ ಬಜೆಟ್‌ನಲ್ಲಿ ವಿವಿಧ ಘೋಷಣೆಗಳೊಂದಿಗೆ ಕರ್ನಾಟಕದ ಅಭಿವೃದ್ಧಿ ಚಟುವಟಿಕೆಗಳು ಭಾರಿ ಉತ್ತೇಜನವನ್ನು ಪಡೆಯುತ್ತವೆ ಮತ್ತು ಹಂಚಿಕೆ ಮಾಡಲಾದ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರದ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಧ್ಯೇಯವಾಕ್ಯವನ್ನು ಅಂತರ್ಗತ ಮಾಡಿಕೊಂಡು ಆತ್ಮನಿರ್ಭರ ಬಜೆಟ್ ಮಂಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರ ಇಂದಿನ #AatmaNirbharBharatKaBudget (ಆತ್ಮನಿರ್ಭರ ಬಜೆಟ್) ನಲ್ಲಿ ವಿವಿಧ ಘೋಷಣೆಗಳೊಂದಿಗೆ ನಮ್ಮ ಅನ್ನದಾತರ ಕಲ್ಯಾಣಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದರು.
ದೇಶಾದ್ಯಂತ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಕಿಸಾನ್ ಡ್ರೋನ್‌ಗಳ ಬಳಕೆ ಮತ್ತು ಗೋಧಿ ಮತ್ತು ಭತ್ತದ ಖರೀದಿ ಉತ್ತೇಜನಕ್ಕಾಗಿ 163 ಲಕ್ಷ ರೈತರ ಖಾತೆಗಳಿಗೆ 2.37 ಲಕ್ಷ ಕೋಟಿ ರೂ.ಗಳ ನೇರ ಪಾವತಿಯಾಗಿದೆ.

ಕೃಷಿ ಮತ್ತು ಗ್ರಾಮೀಣ ಉದ್ಯಮಗಳಿಗೆ ಸ್ಟಾರ್ಟ್-ಅಪ್‌ಗಳಿಗೆ ಹಣಕಾಸು ಒದಗಿಸಲು, ಕೃಷಿ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳ ಪರಿಷ್ಕರಣೆ, ನಬಾರ್ಡ್‌ನಿಂದ ಸುಗಮಗೊಳಿಸಲ್ಪಟ್ಟ ನಿಧಿ, ನಮ್ಮ ಸರ್ಕಾರವು ನಿಜವಾಗಿಯೂ ನಮ್ಮ ಆರ್ಥಿಕತೆಯ ಬೆನ್ನೆಲುಬನ್ನು ಸಶಕ್ತಗೊಳಿಸಲು ಬೇಕಾದ ಎಲ್ಲವನ್ನೂ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ನಮ್ಮ ರಾಜಧಾನಿ ಬೆಂಗಳೂರು ದೇಶದ ಸ್ಟಾರ್ಟ್-ಅಪ್ ಹಬ್ ಆಗಿದ್ದು, #Budget2022 ಸ್ಟಾರ್ಟ್‌ಅಪ್‌ಗಳಿಗೆ ತೆರಿಗೆ ಪ್ರೋತ್ಸಾಹವನ್ನು 3ರಿಂದ 4 ವರ್ಷಗಳ ಸಂಯೋಜನೆಗೆ ವಿಸ್ತರಿಸಿದೆ ಎಂದು ಸಂತೋಷವಾಗಿದೆ. ಆರ್ಥಿಕ ಬೆಳವಣಿಗೆಯ ಈ ಚಾಲಕರಿಗೆ ಈ ಸಾಂಕ್ರಾಮಿಕ ಯುಗದಲ್ಲಿ ಇದು ಒಂದು ದೊಡ್ಡ ಪರಿಹಾರವಾಗಿದೆ.
ಆರ್ಥಿಕ ಸುಧಾರಣೆ, ಸ್ಥಿರೀಕರಣ ಮತ್ತು ಬೆಳೆವಣಿಗೆಗೆ ಪೂರಕವಾದ ಕೇಂದ್ರ ಬಜೆಟ್
ಮುಂಬರುವ ವರ್ಷದಲ್ಲಿ ಆರ್ಥಿಕ ಸುಧಾರಣೆ, ಸ್ಥಿರೀಕರಣ ಮತ್ತು ಬೆಳೆವಣಿಗೆಗೆ ಪೂರಕವಾದ ಕೇಂದ್ರ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
2022-23ನೇ ಸಾಲಿನ ಕೇಂದ್ರ ಮುಂಗಡ ಪತ್ರಕ್ಕೆ ಸಂಬಂಧಿಸಿದಂತೆ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ನೆರಳಿನಲ್ಲಿ ಭಾರತದ ಆರ್ಥಿಕತೆಯನ್ನು ಶೇ.9.2 ಹೆಚ್ಚಿಸುವ ಗುರಿಯಯನ್ನು ಹೊಂದಿದೆ. ಬಂಡವಾಳ ಹೂಡಿಕೆ ಹಾಗೂ ಬಳಕೆ ಎರಡೂ ಹೆಚ್ಚಿಸುವ ದೂರದೃಷ್ಟಿಯಿಂದ ಈ ಬಾರಿಯ ಬಜೆಟ್ ಮಂಡಿಸಲಾಗಿದೆ ಎಂದರು.
ಬಂಡವಾಳ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯ ಮುಖಾಂತರ ಆರ್ಥಿಕತೆ ಹೆಚ್ಚುತ್ತದೆ. ಉತ್ಪಾದನೆ ಹಚ್ಚಿ ಬಳಕೆ ಜಾಸ್ತಿಯಾದಾಗ ಆರ್ಥಿಕತೆ ಹೆಚ್ಚುತ್ತದೆ. ಮೂಲಸೌಕರ್ಯಗಳ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಡಿಜಿಟಲ್ ಆರ್ಥಿಕತೆ ಮತ್ತು ರಾಜ್ಯಗಳಿಗೆ ಬಹುಮಾದರಿ ಸಂಪರ್ಕಗಳ ಕ್ಷೇತ್ರದಲ್ಲಿ ಹೂಡಿಕೆಯಾಗಲಿದೆ ಎಂದು ತಿಳಿಸಿದರು.
ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯ ಬಜೆಟ್
ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಜೆಟ್. ಜಲಜೀವನ ಮಿಷನ್, ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಸಡಕ್ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದೆ. ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯ ಬಜೆಟ್. ಜನಸಾಮಾನ್ಯರ ನಿರೀಕ್ಷೆಗೆ ತಕ್ಕುದಾದ ಹಾಗೂ ಅವರ ಅವಶ್ಯಕತೆಗೆ ಪೂರಕವಾಗಿ ಕುಡಿಯುವ ನೀರು, ರಸ್ತೆ, ಮನೆ ನಿರ್ಮಾಣ ಮಾಡಲು ಬಹಳ ಒತ್ತು ನೀಡಿರುವ ಬಜೆಟ್ ಇದಾಗಿದೆ ಎಂದು ಹೇಳಿದರು.
ನಗರಾಭಿವೃದ್ಧಿಗೆ ಹೊಸತನ
ಡಿಜಿಟಲೈಶೇಷನ್, ಟೌನ್ ಪ್ಲಾನ್ ತಜ್ಞರ ಬಳಕೆಗೆ ಒತ್ತು ನೀಡಲಾಗಿದ್ದು, ನಗರ ಸಾರಿಗೆಗೆ ದೊಡ್ಡ ಪ್ರಮಾಣ ಅನುದಾನ ಮೀಸಲಿಡಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಸಮಾನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಮ್ಮ ದೇಶದ ಕೃಷಿಯಲ್ಲಿ ಸ್ವಾವಲಂಬನೆಯ ಗುರಿ ಹೊಂದಲಾಗಿದೆ. ನೈಸರ್ಗಿಕ ಕೃಷಿ ಮತ್ತು ಎಣ್ಣೆ ಬೀಜಗಳಿಗೆ ಒತ್ತು ನೀಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಕ್ಷಣಾ ವಲಯದಲ್ಲಿ ದೇಶೀಯ ಉತ್ಪನ್ನಗಳಿಗೆ ಒತ್ತು
ರಕ್ಷಣಾ ವಲಯದಲ್ಲಿ ಆತ್ಮನಿರ್ಭರ್ ಭಾರತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದ್ದು, ಶೇಕಡಾ 68ರಷ್ಟು ದೇಶೀಯವಾಗಿ ಉತ್ಪಾದಿಸಿರುವ ಶಸ್ತ್ರಾಸ್ತ್ರಗಳು, ಸ್ಪೇರ್ ಪಾರ್ಟ್‍ಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಆರ್ಥಿಕತೆಯನ್ನು ಬೆಂಬಲಿಸುವ ಹಾಗೂ ಆಸ್ತಿಗಳನ್ನು ನಿರ್ಮಿಸಲು ಪೂರಕವಾಗುವಂತೆ ಬಂಡವಾಳ ಹೂಡಿಕೆಯನ್ನು ಶೇ.35ರಷ್ಟು ಹೆಚ್ಚಿಸಿ 7.50 ಲಕ್ಷ ಕೋಟಿ ಮೀಸಲಿರಿಸಲಾಗಿದೆ ಎಂದು ಮಾತನಾಡಿದರು.
'ನಮ್ಮ ಮೆಟ್ರೋ'ಗೆ ಹೆಚ್ಚಿನ ಅನುದಾನದ ಸಾಧ್ಯತೆ
ಬಂಡವಾಳ ಹೂಡಿಕೆಯ ಹೆಚ್ಚಳದಿಂದಾಗಿ ರಾಜ್ಯಕ್ಕೆ 3,500 ಕೋಟಿ ರೂ.ಗಳ ಹೆಚ್ಚಿನ ಅನುದಾನ ರಾಜ್ಯದ ಬಂಡವಾಳ ಖಾತೆಗೆ ದೊರೆಯಲಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳು, ಮೂಲಭೂತಸೌಕರ್ಯ ಯೋಜನೆಗಳಿಗೆ ಒತ್ತು ನೀಡಲಾಗಿದೆ. ನಗರ ಸಾರಿಗೆಯಲ್ಲಿ ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನ ಸಿಗುವ ಸಾದ್ಯತೆ ಇದೆ ಎಂದರು.
ಎಂ.ಎಸ್.ಎಂ.ಇಗಳ ಪುನಶ್ಚೇತನ
ಇಸಿಎಲ್‍ಜಿಎಸ್ ಯೋಜನೆಯನ್ನು ಘೋಷಿಸುವ ಮೂಲಕ ಕೋವಿಡ್ ಸಾಂಕ್ರಾಮಿಕದಿಂದ ನಷ್ಟಕ್ಕೊಳಗಾಗಿರುವ ಎಂ.ಎಸ್.ಎಂ.ಇ ಪುನಶ್ಚೇತನಕ್ಕೆ 50 ಸಾವಿರ ಕೋಟಿ ಇದ್ದುದ್ದನ್ನು 5 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಆತಿಥ್ಯ ಉದ್ಯಮವನ್ನೂ ಇದು ಒಳಗೊಂಡಿರುವುದರಿಂದ ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಗೆ ಬಹಳ ದೊಡ್ಡ ಪರಿಣಾಮವನ್ನು ಉಂಟು ಮಾಡಲಿದೆ. ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಬಜೆಟ್ ಹೆಚ್ಚಾಗಿರುವುದರಿಂದ ಕರ್ನಾಟಕಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಒನ್ ನೇಷನ್- ಒನ್ ಪ್ರಾಪರ್ಟಿ
ದೇಶದಾದ್ಯಂತ ನೋಂದಣಿ ವ್ಯವಸ್ಥೆ ಒಂದೇ ಮಾದರಿಯಲ್ಲಿ ಇರಬೇಕು ಎಂದು ಒನ್ ನೇಷನ್- ಒನ್ ಪ್ರಾಪರ್ಟಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಬಹಳಷ್ಟು ರಾಜ್ಯಗಳಲ್ಲಿ ನೋಂದಣಿ ವ್ಯವಸ್ಥೆಯಲ್ಲಿ ವ್ಯತ್ಯಾಸಗಳಿರುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು, ಇವುಗಳನ್ನು ನಿವಾರಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.












Click it and Unblock the Notifications