ಕೇಂದ್ರ ಬಜೆಟ್ 2022: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ಏನು?
ಬೆಂಗಳೂರು, ಫೆಬ್ರವರಿ 1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು. ಈ ಕುರಿತು ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಸರ್ಕಾರದ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಮಂಡಿಸಿದ 2022-23ನೇ ಸಾಲಿನ ಆಯವ್ಯಯವು ಕೋವಿಡ್-19ರಿಂದ ಉಂಟಾದ ಆರ್ಥಿಕ ಹಿಂಜರಿತವನ್ನು ಸರಿಪಡಿಸುವ ದೃಷ್ಟಿಯಲ್ಲಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು, ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ ಎಂದಿದ್ದಾರೆ.

ಪ್ರತಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತಾರ್ಹ ವಿಷಯ.
Koo Appವಿಶೇಷವಾಗಿ ಕಾವೇರಿ ಸೇರಿದಂತೆ ನದಿಗಳ ಜೋಡಣೆ, ಉದ್ಯೋಗ ಸೃಷ್ಟಿ, 3.8 ಕೋಟಿ ಕುಟುಂಬಗಳಿಗೆ ನಲ್ಲಿನೀರು ಸಂಪರ್ಕ ಕಲ್ಪಿಸಲು 60,000 ಕೋಟಿ ರೂ, ಕೃಷಿ, ಪಿಎಂ ಗತಿಶಕ್ತಿ, ಆರೋಗ್ಯ ಸೇವೆ, ಹೂಡಿಕೆ ಉತ್ತೇಜನ ವಲಯಗಳಿಗೆ ಆದ್ಯತೆ ನೀಡಿರುವುದು ರಾಜ್ಯದ ಬೆಳವಣಿಗೆಗೆ ಗಣನೀಯ ನೆರವು ನೀಡಲಿದೆ. (2/2) #Budget2022 #AtmaNirbharBharatKaBudget - BS Yediyurappa (@bsybjp) 1 Feb 2022
ದೇಶದ ಪ್ರಮುಖ ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿರುವುದು, 2023ರ ವರ್ಷವನ್ನು "ಅಂತರಾಷ್ಟ್ರೀಯ ಸಿರಿಧಾನ್ಯ" ವರ್ಷವೆಂದು ಘೋಷಣೆ ಮಾಡಿದ್ದು, ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಮಂಡಿಸಿರುವ ವಿತ್ತ ಸಚಿವರನ್ನು ಹಾಗೂ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications