ಬಿಜೆಪಿ ಸೇರಿದ ಸ್ವಾಭಿಮಾನಿ ಶ್ರೀರಾಮುಲು
ಬೆಂಗಳೂರು, ಮಾ. 14 : ಮಾಜಿ ಸಚಿವ ಮತ್ತು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ಅಧಿಕೃತವಾಗಿ ಮಾತೃಪಕ್ಷ ಬಿಜೆಪಿಗೆ ಮರಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ರಾಮುಲು ಅವರಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದರು.
ಶುಕ್ರವಾರ ಮಧ್ಯಾಹ್ನ ಶ್ರೀರಾಮುಲು ನೂರಾರು ಕಾರ್ಯಕರ್ತರ ಜೊತೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಶ್ರೀರಾಮುಲು ಅವರನ್ನು ಬರಮಾಡಿಕೊಂಡರು.

ಬಿಜೆಪಿ ಸೇರಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಶ್ರೀರಾಮುಲು, ಅಂದು ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಪಕ್ಷವನ್ನು ತೊರೆದಿದ್ದೆ. ಇಂದು ದೇಶಭಕ್ತ ನರೇಂದ್ರಮೋದಿ ಅವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಪಕ್ಷಕ್ಕೆ ಮರಳಿದ್ದೇನೆ ಎಂದು ತಿಳಿಸಿದರು. [ಬಿಜೆಪಿಗೆ ಶ್ರೀರಾಮುಲು]
ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ, ನನಗೆ ಯಾವುದೇ ಹುದ್ದೆ ಬೇಕಾಗಿಲ್ಲ ಎಂದು ಶ್ರೀರಾಮುಲು ಹೇಳಿದರು. ಬಿಜೆಪಿ ಅಭ್ಯರ್ಥಿಗಳ ಪರವಾಗಿ ರಾಜ್ಯದ ತುಂಬಾ ಸುತ್ತಾಡಿ ಪ್ರಚಾರ ಮಾಡುತ್ತೇನೆ ಎಂದರು.
ಸುಷ್ಮಾ ತಾಯಿಯಂತೆ : ನಾನು ಬಿಜೆಪಿ ಸೇರುವುದಕ್ಕೆ ಪಕ್ಷದ ರಾಷ್ಟ್ರೀಯ ನಾಯಕರು ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ. ಸುಷ್ಮಾ ಸ್ವರಾಜ್ ಅವರನ್ನು ಈಗಲೂ ನನ್ನ ತಾಯಿಯಂತೆ ಕಾಣುತ್ತೇನೆ ಅವರು ಸಹ ನಾನು ಪಕ್ಷಕ್ಕೆ ಸೇರ್ಪಡೆಗೊಳ್ಳಲು ಸಂಪೂರ್ಣವಾಗಿ ಒಪ್ಪಿಗೆ ನೀಡಿದ್ದಾರೆ, ನಾನು ಬಿಜೆಪಿಗೆ ಮರಳಲು ಅವರು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ಶ್ರೀರಾಮುಲು ಹೇಳಿದರು.
ವಿಲೀನವಾಗಲಿದೆ : ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಎಸ್ಆರ್ ಕಾಂಗ್ರೆಸ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಲಿದೆ. ಈ ಕುರಿತು ಯಾವುದೇ ಗೊಂದಲಗಳಿಲ್ಲ. ವಿಲೀನ ಪ್ರಕಿಯಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಎರಡು ದಿನದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications