ಯಡಿಯೂರಪ್ಪ ಜನಾದೇಶದಿಂದ ಮುಖ್ಯಮಂತ್ರಿಯಾಗಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಜುಲೈ 29: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವ ಬಿಜೆಪಿ ಸರ್ಕಾರವು ಸೋಮವಾರ ವಿಧಾನಸಭೆಯಲ್ಲಿ ಬಹುಮತ ಗಳಿಸಿದೆ. ವಿಶ್ವಾಸಮತ ಯಾಚನೆ ಬಗ್ಗೆ ಚರ್ಚೆ ನಡೆಯದೆ ಧ್ವನಿಮತದ ಮೂಲಕ ಯಡಿಯೂರಪ್ಪ ವಿಶ್ವಾಸಮತ ಉಳಿಸಿಕೊಂಡಿದ್ದಾರೆ. ಈ ನಡುವೆ ಸದನದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ಯಡಿಯೂರಪ್ಪ ಜನಾದೇಶದಿಂದ ಮುಖ್ಯಮಂತ್ರಿಯಾಗಿಲ್ಲ, ಅವರಿಗೆ ಒಮ್ಮೆಯೂ ಸರ್ಕಾರ ರಚಿಸಲು ಜನಾದೇಶ ಸಿಕ್ಕಿಲ್ಲ" ಎಂದು ವಾದಿಸಿದರು.
"ಯಡಿಯೂರಪ್ಪ ಪ್ರತಿಬಾರಿಯೂ ಬಹುಮತದ ಕೊರತೆಯೊಂದಿಗೆ ಸರಕಾರ ರಚಿಸಿದ್ದಾರೆ. ನೀವು ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಇರಬೇಕೆನ್ನುವುದು ನನ್ನ ಆಶಯ. ಅತೃಪ್ತರನ್ನು ಕಟ್ಟಿಕೊಂಡು ಸ್ಥಿರ ಸರಕಾರ ನೀಡಲು ಸಾಧ್ಯವೇ? ನೀವು ಬಹುದಿನ ಮುಖ್ಯಮಂತ್ರಿಯಾಗಿ ಇರುತ್ತೀರೆಂಬ ಖಾತ್ರಿ ನನಗಿಲ್ಲ. ಕಾರಣ ಬಿಜೆಪಿಗೆ ಬಹುಮತವೇ ಇಲ್ಲ. ಅತೃಪ್ತರ ಮೂಲಕ ಸರ್ಕಾರ ರಚನೆಯಾಗಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಅಧಿಕಾರಕ್ಕೇರಿರುವ ಬಿಜೆಪಿಯ ವಿಶ್ವಾಸ ಮತಕ್ಕೆ ನಾವು ಬೆಂಬಲ ನೀಡುವುದಿಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.
"2008ರಲ್ಲಿ ನಿಮಗೆ ಜನಾದೇಶ ಇರಲಿಲ್ಲ, 2018ರಲ್ಲೂ ಇಲ್ಲ, ಈಗಲೂ ಇಲ್ಲ, ಪ್ರಮಾಣ ವಚನ ಸ್ವೀಕರಿಸಿದಾಗ 222 ಶಾಸಕರಿದ್ದರು, ಬಹುಮತ ಸಾಬೀತುಪಡಿಸಲು ಬಿಜೆಪಿ ಬಳಿ 112 ಸಂಖ್ಯೆ ಎಲ್ಲಿತ್ತು? 105 ಸಂಖ್ಯೆ ಇಟ್ಟುಕೊಂಡು ಸರ್ಕಾರ ರಚಿಸಿದ್ದೀರಿ, ಇದು ಜನಾದೇಶವಲ್ಲ" ಎಂದು ಸಿದ್ದರಾಮಯ್ಯ ಲೆಕ್ಕ ಹೇಳಿದರು.

"ಯಡಿಯೂರಪ್ಪ ಉತ್ತಮ ಆಡಳಿತ ನೀಡುವ ಮಾತಾಡಿದ್ದಾರೆ. ನಾನು ಸ್ವಾಗತಿಸುತ್ತೇನೆ. ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಅದನ್ನೂ ಸ್ವಾಗತಿಸುತ್ತೇನೆ. ಜನಸೇವೆ ಮಾಡಲು ಪ್ರಾಮಾಣಿಕವಾಗಿರಬೇಕು. ನನ್ನ ಅವಧಿಯಲ್ಲಿ ನಾನು ಆ ಪ್ರಯತ್ನ ಮಾಡಿದ್ದೇನೆ. ಕುಮಾ ಸ್ವಾಮಿಯವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿತ್ತು ಎಂಬ ಆರೋಪಗಳು ಸುಳ್ಳು. ಮೈತ್ರಿ ಸರಕಾರ ಉತ್ತಮವಾಗಿತ್ತು. ಕೆಲಸ ಮಾಡಿತ್ತು ಎಂದು ಸಿದ್ದರಾಮಯ್ಯ ತಿಳಿಸಿದರು.












Click it and Unblock the Notifications