ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ
ತುಮಕೂರು: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂಬ ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಅಬ್ಬರದ ಪ್ರಚಾರ
ಇಂದು ಮತ್ತು ನಾಳೆ ನಾನು ದಾವಣಗೆರೆಯಲ್ಲಿ ಪ್ರಚಾರ ನಡೆಸಲಿದ್ದೇನೆ. ನಾಡಿದ್ದು ಮತ್ತೆ ಬಾಗಲಕೋಟೆಗೆ ಭೇಟಿ ನೀಡಲಿದ್ದೇನೆ. ಎರಡೂ ಕಡೆಗಳಲ್ಲಿ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರ ಈ ಉತ್ಸಾಹವನ್ನು ನೋಡಿದರೆ ಬಿಜೆಪಿ ಎರಡೂ ಚುನಾವಣೆಗಳನ್ನು ಗೆಲ್ಲುವುದು ಖಚಿತ ಎಂದು ಯಡಿಯೂರಪ್ಪ ಹೇಳಿದರು.

ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, "ಜನರು ಈ ಭ್ರಷ್ಟ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ. ಈಗಾಗಲೇ ಆಡಳಿತ ಪಕ್ಷಕ್ಕೆ ಗರಿಷ್ಠ ಬೆಂಬಲ ನೀಡಿದ್ದ ಮತದಾರರು ಈಗ ಬದಲಾವಣೆ ಬಯಸುತ್ತಿದ್ದಾರೆ. ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ನಮ್ಮ ಮತದಾರರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ" ಎಂದೂ ಹೇಳಿದರು.
ಮಾಜಿ ಸಚಿವರುಗಳಾದ ಶಾಮನೂರು ಶಿವಶಂಕರಪ್ಪ ಮತ್ತು ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಬಿಜೆಪಿಯು ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ್ ಮತ್ತು ದಾವಣಗೆರೆ ದಕ್ಷಿಣದಲ್ಲಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಿದೆ. ಸದ್ಯ ಯಡಿಯೂರಪ್ಪ ಅವರ ಅಬ್ಬರದ ಪ್ರಚಾರವು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಎರಡೂ ಕ್ಷೇತ್ರಗಳಲ್ಲಿ ಕಮಲ ಅರಳಲಿದೆಯೇ ಎನ್ನುವ ಕುತೂಹಲ ಎಲ್ಲರಲ್ಲಿದೆ.

ಅನುಂಕಪದ ಅಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅನುಕಂಪದ ಆಧಾರದ ಮೇಲೆ ಮೃತ ನಾಯಕರ ಕುಟುಂಬದವರಿಗೇ ಟಿಕೆಟ್ ನೀಡಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಬಲಾಬಲವೂ ಗಮನ ಸೆಳೆಯುತ್ತಿದೆ.
ಬಾಗಲಕೋಟೆಯಲ್ಲಿ ಮಾಜಿ ಸಚಿವ, ದಿವಂಗತ ಎಚ್.ವೈ.ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಮೇಟಿ ಅವರ ನಿಧನದಿಂದ ಸೃಷ್ಟಿಯಾಗಿರುವ ಅನುಕಂಪ ಉಮೇಶ್ ಅವರಿಗೆ ಪ್ಲಸ್ ಪಾಯಿಂಟ್. ಕ್ಷೇತ್ರದಲ್ಲಿ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಮೇಟಿ ಕುಟುಂಬ ಗುರುತಿಸಿಕೊಂಡಿರುವುದು ಹೆಚ್ಚಿನ ಬಲ ನೀಡಿದೆ. ಸಿದ್ದರಾಮಯ್ಯ ಅವರು ಖುದ್ದಾಗಿ ಬಾಗಲಕೋಟೆಯಲ್ಲಿ ಬೀಡುಬಿಟ್ಟು ಪ್ರಚಾರ ನಡೆಸುತ್ತಿರುವುದು ಅಭ್ಯರ್ಥಿಗೆ ದೊಡ್ಡ ಆನೆಬಲ ತಂದಿದೆ. ಆದರೂ ಬಿಜೆಪಿಯ ಅನುಭವಿ ನಾಯಕ ವೀರಣ್ಣ ಚರಂತಿಮಠ್ ಅವರ ವಿರುದ್ಧ ಸೆಣಸುವುದು ಉಮೇಶ್ ಅವರಿಗೆ ಒಂದು ರೀತಿ ಅಗ್ನಿಪರೀಕ್ಷೆಯಾಗಿದೆ.
ದಾವಣೆಗೆರೆಯಲ್ಲಿ ಶಾಮನೂರು ಉತ್ತರಾಧಿಕಾರಿ
ದಾವಣಗೆರೆ ದಕ್ಷಿಣದಲ್ಲಿ ಭೀಷ್ಮ ಎಂದೇ ಖ್ಯಾತರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಕಣದಲ್ಲಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಹಿಡಿತ ಬಹಳ ದೊಡ್ಡದು. ದಶಕಗಳಿಂದ ಈ ಕ್ಷೇತ್ರವನ್ನು ಉಳಿಸಿಕೊಂಡು ಬಂದಿರುವ 'ಬ್ರಾಂಡ್' ಸಮರ್ಥ್ ಅವರಿಗೆ ಶ್ರೀರಕ್ಷೆಯಾಗಿದೆ. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳು ದೊಡ್ಡ ಪ್ರಮಾಣದಲ್ಲಿದ್ದು, ಆ ಸಮುದಾಯದ ಪ್ರಬಲ ನಾಯಕರಾಗಿ ಶಾಮನೂರು ಕುಟುಂಬ ಗುರುತಿಸಿಕೊಂಡಿದೆ.
ಮೊದಲ ಬಾರಿಗೆ ಚುನಾವಣೆಗೆ ಇಳಿಯುತ್ತಿರುವ ಸಮರ್ಥ್ ಅವರಿಗೆ ಯುವ ಮತದಾರರ ಬೆಂಬಲ ಸಿಗುವ ನಿರೀಕ್ಷೆಯಿದೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೂ ಅಧಿಕ ಸಂಖ್ಯೆಯಲ್ಲಿರುವುದರಿಂದ ಈ ಬಾರಿ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆಯಿತ್ತು. ಟಿಕೆಟ್ ಸಿಗದ ಕಾರಣ ಕೆಲವು ಸ್ಥಳೀಯ ಮುಸ್ಲಿಂ ನಾಯಕರು ಅಸಮಾಧಾನಗೊಂಡಿದ್ದು, ಇದು ಮತಗಳ ಮೇಲೆ ಪರಿಣಾಮ ಬೀರಬಹುದು.












Click it and Unblock the Notifications