ಹಿರಿಯ ಶಾಸಕರಿಗೆ ದೊಡ್ಡ ಆಘಾತ: ಯಡಿಯೂರಪ್ಪ ಸಂಪುಟ ವಿಸ್ತರಣೆ ಸರ್ಕಸ್
Recommended Video
ನವದೆಹಲಿ/ಬೆಂಗಳೂರು, ಆಗಸ್ಟ್ 16: ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿಯಲ್ಲಿನ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿನಿರತರಾಗಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸದ್ಯ ದೆಹಲಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿದ್ದು, ಸಚಿವ ಸಂಪುಟ ವಿಸ್ತರಣೆ ಹಾಗೂ ನೆರೆ ಪರಿಹಾರದ ಬಗ್ಗೆ ಚರ್ಚಿಸಿದ್ದಾರೆ. ಈ ನಡುವೆ ಲಭ್ಯ ಮಾಹಿತಿಯಂತೆ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಹಿರಿಯ ಶಾಸಕರಿಗೆ ಆಘಾತ ಕಾದಿದೆ.
ಆಗಸ್ಟ್ 16ರಂದು ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದ ಬಳಿಕ ಬಿಜೆಪಿ ಹಿರಿಯ ನಾಯಕರನ್ನು ಕೂಡಾ ಯಡಿಯೂರಪ್ಪ ಭೇಟಿ ಮಾಡಿ, ಸಚಿವ ಸಂಪುಟ ಸೇರಲಿರುವ ಅದೃಷ್ಟಶಾಲಿಗಳ ಹೆಸರುಗಳುಳ್ಳ ಪಟ್ಟಿಯನ್ನು ಹೊತ್ತು ತರಲಿದ್ದಾರೆ.
ಈ ಮೊದಲಿಗೆ ಯಡಿಯೂರಪ್ಪ ನೇತೃತ್ವದಲ್ಲಿ 23:11 ಸೂತ್ರದಡಿ ಮಂತ್ರಿ ಮಂಡಲ ರಚಿಸುವಂತೆ ಸೂಚಿಸಲಾಗಿತ್ತು. ನೂತನ ಸಚಿವ ಸಂಪುಟದಲ್ಲಿ ಇಬ್ಬರನ್ನು ಉಪಮುಖ್ಯಮಂತ್ರಿಯಾಗಿ ನೇಮಕಮಾಡುವ ನಿರ್ಧಾರವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿರುವವರ ಭವಿಷ್ಯ ನಿರ್ಧಾರ ನೋಡಿಕೊಂಡು, 15 ಜನರ ಪೈಕಿ 11 ಮಂದಿಗೆ ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆಯೂ ಇತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಮೊದಲ ಹಂತದಲ್ಲಿ 10 ರಿಂದ 12 ಮಂದಿ ಹಿರಿಯರಿಗೆ ಸ್ಥಾನ ಕಲ್ಪಿಸಲು ಬಿಜೆಪಿ ಮುಂದಾಗಿದ್ದು, ಈಗ ಹಿರಿಯದ ಜೊತೆಗೆ ಹೊಸಮುಖಗಳಿಗೆ ಆದ್ಯತೆ ನೀಡುವಂತೆ ಹೈಕಮಾಂಡ್ ಸೂಚಿಸಿರುವ ಸುದ್ದಿ ಬಂದಿದೆ.

ಸಂಪುಟ ವಿಸ್ತರಣೆ ದಿನಾಂಕ ಮುಂದೂಡಿಕೆ?
ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 18 ಅಥವಾ 19 ರಂದು ಸಂಪುಟ ವಿಸ್ತರಣೆಯಾಗಬಹುದು ಎಂಬ ಸುದ್ದಿಯಿದೆ. ಆದರೆ, ಹೈಕಮಾಂಡ್ ನಾಯಕರಿಂದ ಯಡಿಯೂರಪ್ಪ ಅವರಿಗೆ ಸಿಕ್ಕಿರುವ ಸೂಚನೆಯಂತೆ ಸಂಭಾವ್ಯ ಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ.ಹೀಗಾಗಿ, ನಿಗದಿತ ದಿನಾಂಕಕ್ಕಿಂತ ಇನ್ನೆರಡು ದಿನ ಸಚಿವ ಸಂಪುಟ ವಿಸ್ತರಣೆ ಮುಂದೂಡುವ ಸಾಧ್ಯತೆಯಿದೆ.
ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಬಳಿಕ ದೆಹಲಿಗೆ ಎರಡನೇ ಬಾರಿಗೆ ಭೇಟಿ ನೀಡಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ಪ್ರಕ್ರಿಯೆಗಳು ಆರಂಭವಾಗಿವೆ.

ಯಾರ ಪಟ್ಟಿ ಫೈನಲ್ ಆಗಿದೆ?
ಯಡಿಯೂರಪ್ಪ ಸಿದ್ಧಪಡಿಸಿದ ಪಟ್ಟಿ , ಬಿಎಲ್ ಸಂತೋಷ್ ಕೊಟ್ಟಿರುವ ಪಟ್ಟಿಯನ್ನು ನೋಡಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತಯಾರಿಸಿದ ಪಟ್ಟಿಯನ್ನು ಪ್ರಧಾನಿ ಮೋದಿ ಮುಂದಿಡಲಾಗಿದೆ. ಈ ಬಾರಿ ಹಿರಿಯರಿಗೆ ಅವಕಾಶ ನೀಡುವ ಜೊತೆಗೆ ಹೊಸಬರಿಗೂ ಮಣೆ ಹಾಕಲಾಗುವುದು. ಸಂಪುಟಕ್ಕೆ ಒಂದೆರಡು ಅಚ್ಚರಿಯ ಹೆಸರುಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ. ಪಟ್ಟಿ ಹೊರಬೀಳುತ್ತಲೇ ಅನೇಕರಿಗೆ ನಿರಾಶೆ ಆಗಬಹುದು ಎಂದು ಹೇಳಲಾಗಿದೆ.

ಹಿರಿಯರಿಗೆ ಸಂಘಟನೆಯ ಹೊಣೆ
ಹಿರಿಯ ಶಾಸಕರಿಗೆ ಸಚಿವ ಸ್ಥಾನಕ್ಕಿಂತ ಪಕ್ಷದ ಸಂಘಟನೆಯ ಹೊಣೆ ನೀಡುವ ಸಾಧ್ಯತೆಯಿದೆ. ಸಿ.ಟಿ ರವಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಬಹುತೇಕ ಖಚಿತವಾಗಿದೆ. ಮಿಕ್ಕ ನಾಯಕರಿಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಅನೇಕ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಹಿರಿಯ ನಾಯಕರ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಮಾಜಿ ಡಿಸಿಎಂ ಆರ್. ಅಶೋಕ್ ಹೆಸರಿದೆ. ಈ ಪೈಕಿ ಅಶೋಕ್ ಅವರಿಗೆ ಸಚಿವ ಸ್ಥಾನ ಖಾತ್ರಿಯಾಗಿದೆ.

ಸಂಭಾವ್ಯ ಪಟ್ಟಿಯಲ್ಲಿ ಯಾರಿದ್ದಾರೆ?
ಗೋವಿಂದ ಕಾರಜೋಳ, ಸುರೇಶ್ ಕುಮಾರ್, ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ಅವರಲ್ಲದೆ, ಪ್ರೀತಂ ಗೌಡ, ಕುಡಚಿ ಶಾಸಕ ಪಿ ರಾಜೀವ್, ಅಭಯ್ ಪಾಟೀಲ್, ಎಸ್.ಅಂಗಾರ, ವೀರಣ್ಣ ಚಿರಂತಿಮಠ, ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಉದಾಸಿ, ಕುಮಾರ ಬಂಗಾರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ ಹೆಸರುಗಳು ಸೇರಿವೆ.












Click it and Unblock the Notifications