BPL Card : ಬಿಪಿಎಲ್ ಕಾರ್ಡ್ ರದ್ದು, ಆಹಾರ ಇಲಾಖೆ ಅಧಿಕೃತ ಆದೇಶ, ವಿವರ
ಬೆಂಗಳೂರು, ನವೆಂಬರ್ 22: ಬಿಪಿಎಲ್ ಕಾರ್ಡ್ ರದ್ದು, ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ವಿಚಾರದಲ್ಲಿ ರಾಜ್ಯದಲ್ಲಿ ಹಲವು ಗೊಂದಲ ಉಂಟಾಗಿದೆ. ಇದರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ. ಆದರೆ ಜನರಲ್ಲಿ ಇನ್ನೂ ಸಹ ಅನೇಕ ಆತಂಕವಿದೆ. ಈ ಕುರಿತು ಆರೋಗ್ಯ ಇಲಾಖೆ ಈಗ ಅಧಿಕೃತ ಆದೇಶವನ್ನು ಹೊರಡಿಸಿದೆ.
ಈ ಕುರಿತು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ. ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ ಬೇರೆ ಯಾರ ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಆಗಿದ್ದರೆ, ಅವುಗಳನ್ನು 1 ವಾರದಲ್ಲಿ ಸರಿಪಡಿಸಲಾಗುತ್ತದೆ. ಹಳೆಯ ಕಾರ್ಡ್ ಹಾಗೂ ನಂಬರ್ ಬಳಸಿ ಹಿಂದಿನಂತೆಯೇ ಆಹಾರ ಧಾನ್ಯ ಪಡೆಯಲೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಆದೇಶದ ವಿವರಗಳು: ಈ ಆದೇಶ ಸರ್ಕಾರಿ ನೌಕರರು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಿರುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರದ ಪತ್ರ ದಿನಾಂಕ 22/11/2024, ಸಭಾ ನಡವಳಿ ದಿನಾಂಕ 19/07/2024 ಉಲ್ಲೇಖ ಮಾಡಲಾಗಿದೆ.
ಆದೇಶದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಆದ್ಯತಾ ಪಡಿತರ ಚೀಟಿಯನ್ನು ನೀಡಲು ಸರ್ಕಾರದಿಂದ ನಿಗದಿಪಡಿಸಿರುವ ಮಾನದಂಡಗಳನ್ನು ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿತ್ತು ಎಂದು ಹೇಳಿದೆ.
ಈ ಸಂಬಂಧ ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ, ಉಳಿದಂತೆ ತೆಗೆದುಕೊಂಡಿರುವ ಕ್ರಮವನ್ನು ಮರು ಸ್ಥಾಪಿಸಲು ಕೂಡಲೇ ಕ್ರಮ ವಹಿಸಲು ಸರ್ಕಾರದ ಪತ್ರದಲ್ಲಿ ನಿರ್ದೇಶಿಸಲಾಗಿರುತ್ತದೆ ಹಾಗೂ ಈ ಮರು ಸ್ಥಾಪನೆ ಕ್ರಮವು ಕೇವಲ ಸಭಾ ನಡವಳಿಯಲ್ಲಿ ನೀಡಿರುವ ನಿರ್ದೇಶನದ ಕ್ರಮಕ್ಕೆ ಮಾತ್ರ ಅನ್ವಯವಾಗುವಂತೆ ಈ ಕೆಳಕಂಡಂತೆ ಕ್ರಮ ವಹಿಸಲು ಆದೇಶಿಸಿದೆ.
* ಸದರಿ ಮರು ಸ್ಥಾಪನೆ ಕಾರ್ಯವನ್ನು ಮಾಡಲು ಆಹಾರ ತಂತ್ರಾಂಶದಲ್ಲಿ ಜಂಟಿ/ ಉಪ ನಿರ್ದೇಶಕರ ಲಾಗಿನ್‌ನಲ್ಲಿ ಅವಕಾಶ ನೀಡಲಾಗಿರುತ್ತದೆ.
* ನೋಡಲ್ ಅಧಿಕಾರಿ ಅವರು ಉಸ್ತುವಾರಿ ವಹಿಸಿದ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮದ ಪ್ರಗತಿಯನ್ನು ಖುದ್ದು, ಮೇಲ್ವಿಚಾರಣೆಯನ್ನು ಮಾಡುವುದು.
* ಹೀಗೆ ಮುರು ಸ್ಥಾಪನೆಗೊಂಡಿರುವ PHH ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ಹಂಚಿಕೆಯನ್ನು NIC ಸಹಯೋಗದೊಂದಿಗೆ ದಿನಾಂಕ 25/11/2024 ರೊಳಗೆ ಜಂಟಿ ನಿರ್ದೇಶಕರು (ಸಂ.ವಿ) ಅವರು ಕ್ರಮವಹಿಸಬೇಕು.
* ಕುಟುಂಬ ತಂತ್ರಾಂಶದಿಂದ ಬಂದಿರುವ ಆದಾಯ ತೆರಿಗೆ ಪಾವತಿದಾರರು ಪಡಿತರ ಚೀಟಿಗಳ ರದ್ದತಿಯಲ್ಲಿ ಕೇವಲ ಆದಾಯ ತೆರಿಗೆ ಪಾವತಿದಾರರ ಪಡಿತರ ಚೀಟಿಗಳನ್ನು ಮಾತ್ರವೇ ರದ್ದು/ ಅಮಾನತ್ತು/ ಪರಿವರ್ತನೆ ಆಗುವಂತೆ ಆಯಾ ಜಂಟಿ/ ಉಪ ನಿರ್ದೇಶಕರು ಅವರು ಕ್ರಮವಹಿಸತಕ್ಕದ್ದು, ಇದಕ್ಕೆ ತಕ್ಕಂತೆ ಪೂರಕ ದಾಖಲೆಗಳನ್ನು ಪಡೆದು ಪ್ರತಿಯೊಂದು ಪಡಿತರ ಚೀಟಿದಾರರ ದಾಖಲೆಗಳನ್ನು ಕಡತಗಳಲ್ಲಿ ಇರಿಸುವುದು.
* ಈ ಎಲ್ಲಾ ಕಾರ್ಯಗಳನ್ನು ಜಾಗೃತಿ ವಹಿಸಿ ಯಾವುದೇ ಅರ್ಹ ಫಲಾನುಭವಿಗಳಿಗೆ ಅನ್ಯಾಯ ವಾಗದಂತೆ ಕ್ರಮ ವಹಿಸುವುದು.
* ದಿನಾಂಕ 25/11/2024 ಪೂರ್ಣಗೊಳಿಸತಕ್ಕದ್ದು












Click it and Unblock the Notifications