ಲೋಕಸಭೆಗೆ ಕಾಂಗ್ರೆಸ್ ಟಾರ್ಗೆಟ್ 20; ಬಿಜೆಪಿ ಟಾರ್ಗೆಟ್ ಎಷ್ಟು ಗೊತ್ತಾ?: ಕಟೀಲ್ ಹೇಳಿದ್ದೇನು?
ಬೆಂಗಳೂರು,ಸೆಪ್ಟೆಂಬರ್ 18: ರಾಜ್ಯದಲ್ಲಿ 2024 ರ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಲೋಕಸಮರಲ್ಲಿ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಮುಂದಾಗಿವೆ. ಇತ್ತ ವಿಧಾನಸಭಾ ಚುನಾವಣೆಯಂತೆಯೇ ಲೋಕಸಭಾ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಕಾಂಗ್ರೆಸ್ ಪ್ಲಾನ್ ಮಾಡಿದ್ದು, 20 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಲ್ಲು ತಂತ್ರಗಾರಿಕೆಯನ್ನ ನಡೆಸಿದೆ.
ಇನ್ನೂ ಲೋಕಸಭಾ ಚುನಾವಣೆಗೆ ಭರ್ಜರಿಯಾಗಿ ತಯಾರಿ ನಡೆಸಿರುವ ಬಿಜೆಪಿ ರಾಜ್ಯಾದ್ಯಂತ ಪ್ರವಾಸಕ್ಕೂ ಮುಂದಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಖಂಡಿಸಿ ರೈತ ನಾಯಕ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಪ್ರಾರಂಭವಾಗಿದೆ. ಯಡಿಯೂರಪ್ಪ ಅವರ ಸಂಕಲ್ಪದಂತೆ ಮೋದಿ ಅವರಿಗೆ ಬಲ ತುಂಬಲು ಕುರುಡುಮಲೆ ಗಣಪತಿಗೆ ಆರಾಧನೆ ಮಾಡಿ ಭ್ರಷ್ಟ ಸರಕಾರದ ವಿರುದ್ಧ ಹೋರಾಟ ಆರಂಭ ಮಾಡುತ್ತಿದ್ದೇವೆ. ಒಂಬತ್ತೂವರೆ ವರ್ಷಗಳಲ್ಲಿ ಮೋದಿಜಿ ಅವರು ಭ್ರಷ್ಟಾಚಾರರಹಿತ ಆಡಳಿತವನ್ನು ನೀಡಿದ್ದಾರೆ. ಸಾಮಾನ್ಯ ಜನರಿಗೆ ಬಲ ತುಂಬುವ ಹಲವಾರು ಯೋಜನೆಗಳನ್ನು ನರೇಂದ್ರ ಮೋದಿಯವರ ಸರಕಾರ ನೀಡಿದೆ ಎಂದು ವಿಶ್ಲೇಷಿಸಿದರು. ಸ್ವನಿಧಿ ಯೋಜನೆ, ವಿಶ್ವಕರ್ಮ ಯೋಜನೆಗಳನ್ನು ಇವತ್ತು ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ರಾಜ್ಯದ ಸಿದ್ದರಾಮಣ್ಣ ಸರಕಾರವು ಯಡಿಯೂರಪ್ಪ- ಬಸವರಾಜ ಬೊಮ್ಮಾಯಿಯವರ ರೈತ ಪರ ಯೋಜನೆಗಳನ್ನು ವಾಪಸ್ ಪಡೆದಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರವನ್ನು ಕೇಂದ್ರ ಹಾಗೂ ಯಡಿಯೂರಪ್ಪರ ಸರಕಾರ 4 ಸಾವಿರ ನೀಡುತ್ತಿತ್ತು. ಆ ಪೈಕಿ 4 ಸಾವಿರ ನೀಡುವುದನ್ನು ರಾಜ್ಯದ ಕಾಂಗ್ರೆಸ್ ಸರಕಾರ ನಿಲ್ಲಿಸಿದ್ದು, ರೈತವಿರೋಧಿ ನೀತಿ ಪ್ರದರ್ಶಿಸಿದೆ ಎಂದು ಕಿಡಿಕಾರಿದರು.
ಬೊಮ್ಮಾಯಿಯವರ ಸರಕಾರದ ರೈತ ವಿದ್ಯಾನಿಧಿಯನ್ನೂ ವಾಪಸ್ ಪಡೆಯುವ ಕೆಲಸ ನಡೆದಿದೆ. ಬರ- ನೀರಿನ ಸಮಸ್ಯೆಯಿಂದ ರೈತರು ಒದ್ದಾಡುವಂತಾಗಿದೆ. ಆದರೆ, ನಿರಂತರ ವಿದ್ಯುತ್ ಕಡಿತದ ಕೊಡುಗೆಯನ್ನು ಈ ಸರಕಾರ ನೀಡಿದೆ ಎಂದು ಆರೋಪಿಸಿದರು. ರಾತ್ರಿ 12 ಗಂಟೆವರೆಗೆ ಕಾದರೂ ಕರೆಂಟಿಲ್ಲ ಎಂಬ ದುಸ್ಥಿತಿ ಬಂದಿದೆ ಎಂದು ಬೇಸರ ಸೂಚಿಸಿದರು.
ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಲಾಗುತ್ತಿದೆ. ರೈತರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ಸಿದ್ದರಾಮಣ್ಣ ಕರ್ನಾಟಕದ ಮುಖ್ಯಮಂತ್ರಿಯೇ ಅಥವಾ ತಮಿಳುನಾಡಿನ ಮುಖ್ಯಮಂತ್ರಿಯೇ ಎಂದು ಉತ್ತರಿಸಲಿ. ರೈತರ ಹಿತ ಕಾಯದೆ ಕದ್ದುಮುಚ್ಚಿ ನೀರು ಹರಿಸುವ ಕೆಲಸ ಮಾಡಿದ್ದೀರಿ. ಹಾಗಾಗಿ ರೈತ ವಿರೋಧಿ ಸರಕಾರ ಇದಾಗಿದೆ. ಎರಡು ಸಚಿವರ ಮೇಲೆ ಕೇಸಾಗಿದೆ. ಚಲುವರಾಯಸ್ವಾಮಿ, ಸುಧಾಕರ್ ಅವರ ಮೇಲೆ ಕೇಸಾದರೂ ಅವರ ರಾಜೀನಾಮೆ ಪಡೆಯುವ ನೈತಿಕತೆ ಸಿದ್ದರಾಮಣ್ಣರಿಗೆ ಇಲ್ಲವಾಗಿದೆ ಎಂದು ದೂರಿದರು.
ಕೇಸು ಕೊಟ್ಟವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಗುತ್ತಿಗೆದಾರರ ಬಾಕಿ ಬಿಲ್ ವಿಚಾರದಲ್ಲೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕೆಲವೇ ತಿಂಗಳಲ್ಲಿ ಸರಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ರಿಕ್ಷಾ, ಕಾರು, ಟ್ಯಾಕ್ಸಿ ಚಾಲಕರಿಗೆ ಸಮಸ್ಯೆಯಾಗಿದೆ. ಉದ್ಯಮಿಗಳು ರಾಜ್ಯ ಬಿಟ್ಟು ಹೋಗುತ್ತಿದ್ದಾರೆ. ಈ ಸರಕಾರ ಭ್ರಷ್ಟಚಾರ, ರೈತವಿರೋಧಿ ಸರಕಾರ ಎಂದು ಟೀಕಿಸಿದರು.
ಎಸ್‍ಸಿ, ಎಸ್‍ಟಿಗಳಿಗೆ ಮೀಸಲಿಟ್ಟ 11,144 ಕೋಟಿ ಹಣವನ್ನು ಬೇರೆಡೆಗೆ ವರ್ಗಾಯಿಸಿದ ಸರಕಾರ ಇದು. ಎಸ್‍ಸಿ, ಎಸ್‍ಟಿಗಳ ಹೊಟ್ಟೆಗೆ ಹೊಡೆದ ಸರಕಾರ ಸಿದ್ದರಾಮಣ್ಣ ಸರಕಾರ. ಅಹಿಂದ ಹೆಸರಿನಲ್ಲಿ ಅಧಿಕಾರ ಪಡೆದ ಸಿದ್ದರಾಮಣ್ಣ ಎಸ್‍ಸಿ, ಎಸ್‍ಟಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇವೆಲ್ಲವನ್ನೂ ಜನರ ಮುಂದಿಡಲಾಗುವುದು. ಮೋದಿಜಿ ಅವರ ಜನಪರ ಯೋಜನೆಗಳನ್ನು ತಿಳಿಸಿ ಕಾರ್ಯಕರ್ತರ ವಿಶ್ವಾಸ ಪಡೆಯಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.












Click it and Unblock the Notifications