ಬಿಎಲ್ ಸಂತೋಷ್ ಸಭೆಗೆ ಗೈರಾದ ನಾಯಕರ ಪಟ್ಟಿ: ಅಚ್ಚರಿ ಮೂಡಿಸುವ ಹೆಸರುಗಳು ಇಲ್ಲಿವೆ
ಬೆಂಗಳೂರು, ಸೆಪ್ಟೆಂಬರ್ 01: ಬಿಜೆಪಿ ಪ್ರಧಾನ ಕಾರ್ಯದರ್ಶಿ ( ಸಂಘಟನೆ ) ಬಿಎಲ್ ಸಂತೋಷ್ ಅವರ ಸಭೆಗೆ ಬಿಜೆಪಿಯ ಹಲವು ನಾಯಕರು ಗೈರಾಗಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಗೈರಾದವರ ಪಟ್ಟಿಯನ್ನು ಕಾಂಗ್ರೆಸ್ ನೀಡಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ನಡೆಸಿದ ಸಭೆಗೆ ಹಲವು ಬಿಜೆಪಿ ಶಾಸಕರು, ನಾಯಕರೇ ಗೈರಾಗಿದ್ದರು. ಬಿಎಲ್ ಸಂತೋಷ್ ಅವರು ಸ್ವತಃ ಬಿಜೆಪಿ ಶಾಸಕರೊಂದಿಗೇ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಇನ್ನೂ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಶತಮಾನದ ಜೋಕ್' ಎಂದು ವ್ಯಂಗ್ಯವಾಡಿದೆ.

'ಸುಳ್ಳು ಹೇಳಿಕೊಂಡು ತಿರುಗುವ ಮೊದಲು ಸಂತೋಷ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಂಪರ್ಕ ಹಾಗೂ ವಿಶ್ವಾಸವನ್ನು ಹೊಂದಲು ಪ್ರಯತ್ನಿಸಲಿ' ಎಂದು ಕಾಂಗ್ರೆಸ್ ಹೇಳಿದೆ.
'ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ, ರಾಜ್ಯಾಧ್ಯಕ್ಷನ ಆಯ್ಕೆ ಆಗಿಲ್ಲ ಎಂದು ಸ್ವತಃ ಬಿಜೆಪಿ ಶಾಸಕರು, ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಬಿಎಲ್ ಸಂತೋಷ್ ಅವರು ಮಾತ್ರ ಈ ಬಗ್ಗೆ ಮಾತೇ ಆಡಬೇಡಿ ಎಂದು ಫಾರ್ಮಾನು ಹೊರಡಿಸಿದ್ದಾರೆ' ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.
'ಇದರ ಅರ್ಥ ವಿರೋಧ ಪಕ್ಷದ ನಾಯಕನ ಆಯ್ಕೆ ಸದ್ಯಕ್ಕಂತೂ ಸಾಧ್ಯವಿಲ್ಲ ಎನ್ನುವುದಾಗಿದೆ. ತಮ್ಮಲ್ಲಿನ ಹುಳುಕುಗಳೇ ಕೊಳೆತು ನಾರುತ್ತಿದೆ, ಅದನ್ನು ಸರಿಪಡಿಸುವ ಯೋಗ್ಯತೆ ಇಲ್ಲದವರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಸಾಧಿಸುವುದಾದರೂ ಏನು' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸಭೆಗೆ ಗೈರಾದವರ ಪಟ್ಟಿ ನೀಡಿದ ಕಾಂಗ್ರೆಸ್
ಸಂತೋಷ ಕೂಟದ ಸಭೆಗೆ ಗೈರಾದವರು
1- ಸಿ ಟಿ ರವಿ
2- ಬಸವರಾಜ ಬೊಮ್ಮಾಯಿ
3- ಸೋಮಣ್ಣ
4- ಎಸ್ ಟಿ ಸೋಮಶೇಖರ್
5- ಯಡಿಯೂರಪ್ಪ
6- ಶಂಕರ್ ಪಾಟೀಲ್ ಮುನೇನಕೊಪ್ಪ
7- ಶಿವರಾಂ ಹೆಬ್ಬಾರ್
8- ರೇಣುಕಾಚಾರ್ಯ
ಇನ್ನೂ ಹಲವರು.. ಬಿಎಲ್ ಸಂತೋಷ್ ಅವರೇ, ನಿಮ್ಮವರೇ ನಿಮಗೆ ಸಂಪರ್ಕಕ್ಕೆ ಸಿಗಲಿಲ್ಲವೇ? ಮೊದಲು ನಿಮ್ಮವರನ್ನು ಸಂಪರ್ಕಿಸಲು ಪ್ರಯತ್ನಿಸಿ' ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.

ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಬಿಎಲ್.ಸಂತೋಷ್ ವಿರುದ್ಧ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ನೇರ ವಾಗ್ದಾಳಿ ನಡೆಸಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ, ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಬಿಎಲ್ ಸಂತೋಷ್ ಬದಿಗೊತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸಂತೋಷ್ ಅವರೇ ಕಾರಣ ಎಂದು ಆರೋಪಿಸಿದ ರೇಣುಕಾಚಾರ್ಯ, ಮುಖ್ಯಮಂತ್ರಿ ಕುರ್ಚಿಯ ಮೇಲೆ ಸಂತೋಷ್ ಕಣ್ಣಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಹಲವಾರು ಪ್ರಮುಖ ನಾಯಕರಿಗೆ ಟಿಕೆಟ್ ನಿರಾಕರಿಸಲಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಸೋಲಿಗೆ ನಮ್ಮದೇ ಕೆಲ ನಾಯಕರು ಕಾರಣ. ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ದುರಂತ. ನಿನ್ನೆ ಸಭೆ ನಡೆಸಿದವರು (ಬಿ.ಎಲ್.ಸಂತೋಷ್) ಪಕ್ಷವನ್ನು ಬಲಪಡಿಸಿದವರಲ್ಲ. ಅವರು 2006-07ರಲ್ಲಿ ಸಂಘ ಪರಿವಾರದಿಂದ ಬಂದವರು. ಪಕ್ಷದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ಏಳೆಂಟು ಮಂದಿ ಸೇರಿ ಸಭೆ ನಡೆಸುತ್ತಿದ್ದಾರೆ. ಮೊದಲು ಅವರು ಯಡಿಯೂರಪ್ಪ ಅವರನ್ನು ಬದಿಗೊತ್ತಿದರು. ಬಿಎಸ್‌ವೈ ಶಾಪದಿಂದಾಗಿ ಪಕ್ಷವು ಚುನಾವಣೆಯಲ್ಲಿ ಸೋತಿತು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಹಿರಿಯ ನಾಯಕರನ್ನು ವ್ಯವಸ್ಥಿತವಾಗಿ ಗುರಿಯಾಗಿಸಲಾಗಿದೆ. ಅವರು ಲಿಂಗಾಯತ ನಾಯಕರನ್ನು ಮುಗಿಸಿದರು. ಮೊದಲು ಬಿಎಸ್ ಯಡಿಯೂರಪ್ಪ, ನಂತರ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಕೊನೆಗಾಣಿಸಿದರು. ಅಲ್ಲದೇ ಕೆಎಸ್ ಈಶ್ವರಪ್ಪಗೆ ಟಿಕೆಟ್ ನಿರಾಕರಿಸಲಾಯಿತು. 72 ಹೊಸಬರಿಗೆ ಟಿಕೆಟ್ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.












Click it and Unblock the Notifications