ನಿಗಮ, ಮಂಡಳಿಗಳ ನೇಮಕಕ್ಕೆ ರೇಟ್; ಇಲ್ಲಿದೆ ದರಪಟ್ಟಿ
ಬೆಂಗಳೂರು, ಅಕ್ಟೋಬರ್ 20: ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಿಗಮ, ಮಂಡಳಿಗಳ ನೇಮಕಾತಿಗೆ ಮುಂದಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಿಂದ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಒಪ್ಪಿಗೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ರಾಜ್ಯ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸದ ವೇಳೆ ನಿಗಮ, ಮಂಡಳಿ ನೇಮಕಾತಿಗೆ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ರಾಜ್ಯದ ಪ್ರತಿಪಕ್ಷ ಬಿಜೆಪಿ ಆರೋಪ ಮಾಡಿದೆ.

ಶುಕ್ರವಾರ ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 'ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್‌ನ ಕಲೆಕ್ಷನ್ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ. ಸಿ. ವೇಣುಗೋಪಾಲ್ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್ ಕಾರ್ಡ್ ಫಿಕ್ಸ್ ಮಾಡಿ ಹೋಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸ್ನೇಹಿತರು ಕೊಟ್ಟಿರುವ ನಿಗಮ ಮಂಡಳಿಗಳ ರೇಟ್ ಕಾರ್ಡ್ ಇಂತಿದೆ' ಎಂದು ಪಟ್ಟಿಯನ್ನು ನೀಡಿದೆ.
ಬಿಜೆಪಿಯ ಟ್ವೀಟ್
* ಬಿಡಿಎ - ₹50 ಕೋಟಿ
* ಬಿಡಬ್ಲೂಎಸ್‌ಎಸ್‌ಬಿ - ₹45 ಕೋಟಿ
* ಕೆಆರ್‌ಐಡಿಎಲ್ - ₹20 ಕೋಟಿ
* ಕಿಯೋನಿಕ್ಸ್ - ₹15 ಕೋಟಿ
* ಕರ್ನಾಟಕ ಉಗ್ರಾಣ ನಿಗಮ - ₹12 ಕೋಟಿ
* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ - ₹10 ಕೋಟಿ
'ಇನ್ನು ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್ ಮಾಸ್ಟರ್ಸ್‌ಗಳಾದ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರು ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಹೆಚ್ಚು ಮೊತ್ತದ ಕಲೆಕ್ಷನ್ ಆಗುವ ಸಾಧ್ಯತೆ ಇದೆಯಂತೆ..!' ಎಂದು ಬಿಜೆಪಿ ಹೇಳಿದೆ.
ಎರಡು ದಿನಗಳ ಹಿಂದೆ ಬಿಜೆಪಿ ಟ್ವೀಟ್ ಮಾಡಿ ಕೆ. ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಏಕೆ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ? ಎಂಬ ರಹಸ್ಯವನ್ನು ಬಿಚ್ಚಿಟ್ಟಿತ್ತು. 'ಹೇಳಿದ ಸಮಯಕ್ಕೆ ಹೊರ ರಾಜ್ಯಗಳಿಗೆ ಇನ್ನೂ ಸಿದ್ದರಾಮಯ್ಯ ಅವರ #ATMSarkaraದ ಲೂಟಿ ಹಣ ತಲುಪದೆ ಇರುವ ಕಾರಣಕ್ಕೆ ಖುದ್ದು ಏಜೆಂಟರ್‌ಗಳೇ ರಾಜ್ಯದಲ್ಲಿ ಠಿಕಾಣಿ ಹೂಡಿದ್ದಾರೆ' ಎಂದು ಆರೋಪಿಸಿತ್ತು.
'ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಮತ್ತು ಕಮಿಷನ್ ಏಜೆಂಟ್ ಕೆ.ಸಿ. ವೇಣುಗೋಪಾಲ್ ಅವರು ಕರ್ನಾಟಕಕ್ಕೆ ದಿಢೀರ್‌ನೇ ಆಗಮಿಸಿರುವ ಕಾರಣಗಳು' ಎಂದು ಪಟ್ಟಿಯೊಂದನ್ನು ನೀಡಿತ್ತು.
* ₹1000 ಕೋಟಿ ಕಲೆಕ್ಷನ್‌ನ ಮೇಲ್ವಿಚಾರಣೆ ನಡೆಸುವುದು..!
* ನಿಗಮ ಮಂಡಳಿಗಳ ನೇಮಕಾತಿಗೆ ರೇಟ್ ಫಿಕ್ಸ್ ಮಾಡುವುದು..!
* ಪಂಚ ರಾಜ್ಯ ಚುನಾವಣೆಗೆ ಹಣ ಸಾಗಣೆಯ ಸ್ಥಿತಿಗತಿ ತಿಳಿಯುವುದು..!
* ಗುತ್ತಿಗೆದಾರರಿಗೆ ಹೆಚ್ಚುವರಿ ಪರ್ಸೆಂಟೇಜ್ ಫಿಕ್ಸ್ ಮಾಡುವುದು..!
* ಅಧಿಕಾರಿಗಳಿಂದ ವಸೂಲಿಯ ವಾಸ್ತವ ಸ್ಥಿತಿ ಅರಿಯುವುದು..! ಎಂದು ಬಿಜೆಪಿ ಟ್ವೀಟ್‌ನಲ್ಲಿ ದೂರಿತ್ತು.
ಬಿಜೆಪಿ ಮತ್ತೊಂದು ಟ್ವೀಟ್‌ನಲ್ಲಿ, 'ರಾಜ್ಯದಲ್ಲಿ #ATMSarkara ಬಂದ ಮೇಲೆ ಇಲಾಖೆಗಳನ್ನು ಭ್ರಷ್ಟಾಚಾರದ ಹಾಟ್‌ಸ್ಪಾಟ್‌ಗಳನ್ನಾಗಿ ಮಾಡಿ ಅಧಿಕಾರಿಗಳನ್ನು ಮಿನಿ ಏಜೆಂಟ್‌ಗಳನ್ನಾಗಿಸಿ ಲಂಚದ ಟಾರ್ಗೆಟ್ ಕೊಟ್ಟಿದೆ' ಎಂದು ಆರೋಪ ಮಾಡಿದೆ.
* ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಲಂಚ ವಸೂಲಿ
* ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಲಂಚ ವಸೂಲಿ
* ಇಂದಿರಾ ಕ್ಯಾಂಟೀನ್ ಅನುದಾನಕ್ಕೂ ಲಂಚ ವಸೂಲಿ
* ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಲಂಚ ವಸೂಲಿ
* ಲೋಕೋಪಯೋಗಿಯಲ್ಲಿ ಬೇನಾಮಿಗಳಿಂದ ಲಂಚ ವಸೂಲಿ
* ದಸರಾ ಕಾರ್ಯಕ್ರಮ ನಡೆಸಲು ಲಂಚ ವಸೂಲಿ
* ಕೃಷಿ ಇಲಾಖೆಯ ಅಧಿಕಾರಿಗಳಿಂದ ಲಂಚ ವಸೂಲಿ
'ಲಂಚದ ದುಡ್ಡು ಮಂಚದ ಕೆಳಗೆ ಸಿಕ್ಕ ಮೇಲೆ ಸಿದ್ದರಾಮಯ್ಯ ಅವರ ಸರ್ಕಾರ ₹1000 ಕೋಟಿ ಹೊಂದಿಸಲು ಲಂಚಕ್ಕೆ ಹೊಸ ಲೈಸೆನ್ಸ್ ಕೊಟ್ಟಿದೆ..!' ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.












Click it and Unblock the Notifications