ಕಾಂಗ್ರೆಸ್ ಸರ್ಕಾರ; ಅಂದು ಎಸಿಬಿ, ಇಂದು ಸಿಐಡಿ
ಬೆಂಗಳೂರು, ಆಗಸ್ಟ್ 10; ಉಡುಪಿಯ ಕಾಲೇಜಿನ ಮಹಿಳಾ ಶೌಚಾಲಯದ ವಿಡಿಯೋ ಪ್ರಕರಣದ ಬಗ್ಗೆ ಕರ್ನಾಟಕ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದೆ. ಸರ್ಕಾರ ಈಗಾಗಲೇ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.
ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, 'ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದಾಗ ಹಗರಣಗಳನ್ನು ಮಾಡಲು ಹಿಂಜರಿಯುವುದಿಲ್ಲ, ಅದೇ ರೀತಿ ಹಗರಣಗಳನ್ನು ಮುಚ್ಚಿ ಹಾಕಲು ಸಹ ಹಿಂದು ಮುಂದು ನೋಡುವುದಿಲ್ಲ' ಎಂದು ಗಂಭೀರ ಆರೋಪ ಮಾಡಿದೆ.

'ಅಧಿಕಾರವನ್ನು ಸರ್ವ ರೀತಿಯಲ್ಲಿಯೂ ದುರ್ಬಳಕೆ ಮಾಡಿಕೊಂಡು, ತಾವು ಮಾಡಿದ ಹಗರಣಗಳ ಸಾಕ್ಷಿಗಳನ್ನು ನಾಶಗೊಳಿಸುವಲ್ಲಿ ಸಿದ್ದರಾಮಯ್ಯ ಅವರು ಸದಾ ಮುಂದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿದೆ.
'2013ರಲ್ಲಿ ಎಸಿಬಿಯನ್ನು ಬಳಸಿ, ತಮ್ಮ ಸರ್ಕಾರದ ಹಗರಣಗಳನ್ನು ಮುಚ್ಚಿಕೊಂಡಿದ್ದ ಸಿದ್ದರಾಮಯ್ಯರವರು, ಈಗ ಸಿಐಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ' ಎಂದು ಬಿಜೆಪಿ ದೂರಿದೆ.
ಲೋಕಾಯುಕ್ತ ಮುಚ್ಚಿದರು; ಬಿಜೆಪಿ ತನ್ನ ಟ್ವೀಟ್‌ನಲ್ಲಿ, 'ದೇಶದಲ್ಲಿಯೇ ಮಾದರಿ ಎನಿಸಿಕೊಂಡಿದ್ದ ಕರ್ನಾಟಕದ ಲೋಕಾಯುಕ್ತ ಸಂಸ್ಥೆಗೆ ಎಳ್ಳು, ನೀರು ಬಿಟ್ಟಿದ್ದೇ ಸಿದ್ದರಾಮಯ್ಯರವರ ಸರ್ಕಾರ. ಪ್ರಬಲ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ, ದುರ್ಬಲ 'ಎಸಿಬಿ' ಯನ್ನು ಸ್ಥಾಪಿಸಿದ ಕುಖ್ಯಾತಿ ಸಿದ್ದರಾಮಯ್ಯರವರಿಗೆ ಸಂದಿದೆ' ಎಂದು ಹೇಳಿದೆ.
'ಎಸಿಬಿ ಸಂಸ್ಥೆಯ ಸ್ಥಾಪನೆ ಹಿಂದಿದ್ದ ಉದ್ದೇಶ, ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳುವುದೇ ಆಗಿತ್ತೇ, ವಿನಃ ಭ್ರಷ್ಟಾಚಾರವನ್ನು ತಡೆಯುವುದಾಗಿರಲಿಲ್ಲ. ಅದೇ ಮಾದರಿಯಲ್ಲಿ ಈಗ ಸಿಐಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಉಡುಪಿಯಲ್ಲಿ ನಡೆದ ಘಟನೆಯನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಹೊರಟಿದ್ದಾರೆ' ಎಂದು ಪ್ರತಿಪಕ್ಷ ಆರೋಪ ಮಾಡಿದೆ.
'ಪ್ರಕರಣದ ಆರಂಭದಿಂದಲೂ ಈ ಪ್ರಕರಣ ನಡೆದೇ ಇಲ್ಲ, ಇದು ಮಕ್ಕಳಾಟ ಎಂದು ಸರ್ಕಾರ ವಾದಿಸುತ್ತಲೇ ಬಂದಿತ್ತು. ಪ್ರಕರಣವನ್ನು ಸಿಐಡಿಗೆ ವಹಿಸಿ ಎಂದು ಬಿಜೆಪಿ ನಡೆಸಿದ ಹೋರಾಟಕ್ಕೂ ಸೊಪ್ಪು ಹಾಕದೆ, ಈಗ ಏಕಾಏಕಿ ಸಿಐಡಿಗೆ ವಹಿಸಿರುವುದನ್ನು ಗಮನಿಸಿದರೆ, ಪ್ರಕರಣವನ್ನು ದುರ್ಬಲಗೊಳಿಸಿ, ಸಾಕ್ಷಿಗಳನ್ನು ನಾಶಪಡಿಸಲು ಸರ್ಕಾರ ಕಾದಂತೆ ಕಾಣುತ್ತದೆ' ಎಂದು ಪಕ್ಷ ದೂರಿದೆ.
'ಸಿದ್ದರಾಮಯ್ಯರವರು ಸ್ಥಾಪಿಸಿದ್ದ ದುರ್ಬಲ ಎಸಿಬಿಯನ್ನು ಮುಚ್ಚಿ ಬಲಿಷ್ಠ ಲೋಕಾಯುಕ್ತವನ್ನು ಬಿಜೆಪಿ ಸರ್ಕಾರ ಮರು ಸ್ಥಾಪಿಸಲು ಹೊರಟಾಗ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರೋಧಿಸಿದ ಪರಿಯನ್ನೊಮ್ಮೆ ಗಮನಿಸಿದರೆ ಸಾಕು, ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಹೇಗೆ ಬೆಂಬಲಿಸುತ್ತದೆ ಎಂಬುದು ಅರಿವಾಗುತ್ತದೆ' ಎಂದು ಹೇಳಿದೆ.
'ದಶಕಗಳ ಕಾಲ ಭ್ರಷ್ಟಾಚಾರವನ್ನು ಪೋಷಿಸಿ ಬೆಳೆಸಿಕೊಂಡು ಬಂದಿರುವ ಕಾಂಗ್ರೆಸ್, ಕೆಲವು ವರ್ಷಗಳಿಂದ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ತಮ್ಮ ಸೇವಾವಧಿಯಲ್ಲಿ ಯಾವ ಅಧಿಕಾರಿ ಅತಿ ಹೆಚ್ಚು ಭ್ರಷ್ಟಾಚಾರ ಎಸಗಿರುತ್ತಾರೊ, ಅಂತಹ ಅಧಿಕಾರಿಗಳನ್ನೇ ಹುಡುಕಿ ಸರ್ಕಾರದ ಆಯಕಟ್ಟಿನ ಸ್ಥಳಗಳಿಗೆ, ಸಲಹೆಗಾರನನ್ನಾಗಿ ನೇಮಿಸುತ್ತಿದೆ. ಸಚಿವರುಗಳಿಗೆ ವಿಶೇಷ ಕರ್ತವ್ಯಾಧಿಕಾರಿಗಳನ್ನಾಗಿ ಸಹ ನೇಮಿಸುತ್ತಿದೆ' ಎಂದು ಸರ್ಕಾರದ ವರ್ಗಾವಣೆ ವಿಚಾರವನ್ನು ಸಹ ಬಿಜೆಪಿ ಉಲ್ಲೇಖ ಮಾಡಿದೆ.
'ಕಾಂಗ್ರೆಸ್ ಸರ್ಕಾರದ ಈ ಧೋರಣೆಯಿಂದಾಗಿ, ಇಂದು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವೀನ್ಯತೆಯಲ್ಲಿ ನಂಬರ್ 1 ಆಗಿದ್ದ ಕರ್ನಾಟಕವು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹಾಗೂ ಅರಾಜಕತೆಯಲ್ಲಿ ನಂಬರ್ 1 ಆಗುತ್ತಿರುವುದು ದುರದೃಷ್ಟಕರ' ಎಂದು ಬಿಜೆಪಿ ಬೇಸರ ವ್ಯಕ್ತಪಡಿಸಿದೆ.
ಸಿಐಡಿ ತನಿಖೆ ಆರಂಭ; ಉಡುಪಿ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ಉಡುಪಿಗೆ ಭೇಟಿ ನೀಡಿ, ಎಸ್ಪಿ ಕಚೇರಿಯಲ್ಲಿ ಅಧಿಕಾರಿಗಳಿಂದ ಪ್ರಕರಣದ ಮಾಹಿತಿ ಪಡೆದಿದ್ದಾರೆ.
ಇದುವರೆಗೂ ತನಿಖೆ ನಡೆಸಿದ ಪೊಲೀಸರು ತನಿಖೆಯ ವರದಿ, ದಾಖಲೆ, ಹೇಳಿಕೆಗಳನ್ನು ಸಿಐಡಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಕರ್ನಾಟದ ಪ್ರತಿಪಕ್ಷ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಬೇಕು ಎಂದು ಒತ್ತಾಯಿಸಿವೆ. ಇಲ್ಲವೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿವೆ. ರಾಜ್ಯಪಾಲರಿಗೂ ಮನವಿ ಮಾಡಿವೆ.












Click it and Unblock the Notifications