ಮತ್ತೆ ಅಖಾಡಕ್ಕಿಳಿದ ಯಡಿಯೂರಪ್ಪ; ಸೆ.8 ರಂದು ಸರ್ಕಾರದ ವಿರುದ್ಧ ಹೋರಾಟ: ಬಿ.ವೈ.ವಿಜಯೇಂದ್ರ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 06: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪೊ ಅಲರ್ಟ್ ಆಗಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ದ ಸಮರಕ್ಕೆ ಬಿಜೆಪಿ ಸಿದ್ದತೆ ನಡೆಸಿದ್ದು, ಮತ್ತೆ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸೆಪ್ಟೆಂಬರ್ 8 ರಂದು ಹೋರಾಟ ನಡೆಸಲು ಭರ್ಜರಿ ತಯಾರಿ ನಡೆಸಿದೆ.
ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ರಾಜ್ಯ ಉಪಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ರಾಜ್ಯ ಸರಕಾರದ ವೈಫಲ್ಯಗಳನ್ನು ಖಂಡಿಸಿ ಮಾಜಿ ಸಿಎಂ, ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇದೇ 8ರಂದು ಹೋರಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇನ್ನೂ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಡಾ. ಅಶ್ವತ್ಥನಾರಾಯಣ್, ಆರ್.ಅಶೋಕ್ ಮತ್ತಿತರ ಮುಖಂಡರು ಭಾಗವಹಿಸುತ್ತಾರೆ. ಇದು ನುಡಿದಂತೆ ನಡೆದ ಸರಕಾರವಲ್ಲ. ಇದು ಎಡವುತ್ತಿರುವ ಸರಕಾರ ಎಂದು ರಾಜ್ಯದ ಜನತೆ ಗಮನಿಸಿದ್ದಾರೆ. ಇವರಿಗೆ ಲೋಕಸಭಾ ಚುನಾವಣೆಯಲ್ಲಿ ಜನತೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ರಾಜ್ಯದ ಕಿವುಡ, ಮಂಪರು ಕವಿದ ಕಾಂಗ್ರೆಸ್ ಸರಕಾರ ರೈತ ವಿರೋಧಿ, ಜನವಿರೋಧಿ ನೀತಿಗಳನ್ನು ಅಳವಡಿಸಿಕೊಂಡಿದೆ. ಹೆಚ್ಚು ಪರಿಹಾರ ಪಡೆಯಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸಚಿವರ ಹೇಳಿಕೆಯನ್ನು ಟೀಕಿಸಿದರು. ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದ ಮದ ನೆತ್ತಿಗೇರಿದೆ. ಆ ಸಚಿವರು ರಾಜ್ಯದ ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಭರವಸೆ ಈಡೇರಿಸಲಾಗದೆ ಚಾಲಾಕಿನಿಂದ ಕೇಂದ್ರ ಸರಕಾರವನ್ನು ಟೀಕಿಸುತ್ತಾರೆ. ಬರದ ವಿಚಾರದಲ್ಲಿ ಮಾನದಂಡ ಸಡಿಲಿಸಲು ಸಿಎಂ ಕೇಂದ್ರಕ್ಕೆ ಪತ್ರ ಬರೆಯುತ್ತಾರೆ; ಇದರ ಹಿಂದೆ ದುರುದ್ದೇಶ ಇದೆ. ಗ್ಯಾರಂಟಿ ಈಡೇರಿಸಲು ಸಾಧ್ಯ ಆಗುತ್ತಿಲ್ಲ. ಸರಕಾರಿ ನೌಕರರಿಗೆ ವೇತನ ನೀಡುತ್ತಿಲ್ಲ. ಅಕ್ಕಿ ಬದಲು ಸರಿಯಾಗಿ ಹಣ ಕೊಡುತ್ತಿಲ್ಲ. ಬರಪೀಡಿತ ತಾಲ್ಲೂಕುಗಳನ್ನು ಘೋಷಿಸುವುದಾಗಿ ಕಂದಾಯ ಸಚಿವರು ಕೆಲದಿನಗಳ ಹಿಂದೆ ಹೇಳಿದ್ದಾರೆ. ಬಳಿಕ ಅದನ್ನು ಮುಂದೂಡಿದ್ದಾರೆ. ಸರ್ವೇ, ರಾಜ್ಯ ಪ್ರವಾಸದ ನೆಪ ಒಡ್ಡುತ್ತಿದ್ದಾರೆ. ಗ್ಯಾರಂಟಿ ಜಾತ್ರೆಗೆ ನಿಮಗೆ ಸಮಯ ಸಿಗುತ್ತದೆ. ಹಾಗಿದ್ದರೆ ನಿಮ್ಮ ಆದ್ಯತೆ ಏನು? ಎಂದು ಕೇಳಿದರು.

ರಾಜ್ಯ ಸರಕಾರಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವ ಕಳಕಳಿ, ಇಚ್ಛೆ ಇಲ್ಲ. ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದಾರೆ. ಬರಪೀಡಿತ ಪ್ರದೇಶ ಘೋಷಣೆ ಯಾವಾಗ? ನೀವಿಲ್ಲಿ ತಡ ಮಾಡುತ್ತೀರಿ. ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಪ್ರಾಮಾಣಿಕ ಕಳಕಳಿ ಸರಕಾರಕ್ಕೆ ಇಲ್ಲ ಎಂದು ಟೀಕಿಸಿದರು. ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ದೂರಿದರು.
ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅತಿವೃಷ್ಟಿ ಆದಾಗ ಸಚಿವ ಸಂಪುಟ ರಚನೆ ಆಗಿರಲಿಲ್ಲ. ಆದರೂ ತಾವೇ ಸಮೀಕ್ಷೆ ನಡೆಸಿ ಮನೆ ಬಿದ್ದುದಕ್ಕೆ ಹೆಚ್ಚು ಹಣ ನೀಡಿದ್ದರು ಎಂದು ನೆನಪಿಸಿದ ಅವರು, ರಾಜ್ಯ ಸರಕಾರ ತಕ್ಷಣ ಬರಗಾಲ ಪೀಡಿತ ತಾಲ್ಲೂಕುಗಳನ್ನು ಘೋಷಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಡಿಸಿಎಂ ಶಿವಕುಮಾರ್, ಸಿಎಂ ಸಿದ್ದರಾಮಯ್ಯನವರು ಹಿಂದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದರು. ಈಗ ಕೇಂದ್ರದ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ. ಕಾವೇರಿ ಹೋರಾಟ ಮಾಡುತ್ತಿರುವ ರೈತರು, ಕನ್ನಡಪರ ಹೋರಾಟಗಾರರ ಧ್ವನಿ ಹತ್ತಿಕ್ಕುವ ಕೆಲಸ ನಡೆದಿದೆ. ನುಡಿದಂತೆ ನಡೆಯದ ಸರಕಾರಕ್ಕೆ ರಾಜ್ಯದ ಜನರು, ರೈತರು ಶಾಪ ಹಾಕುತ್ತಿದ್ದಾರೆ ಎಂದರು.
ರಾಜ್ಯ ರೈತಸಂಘ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದೆ. ಸರಕಾರವು ನಿಜಾಂಶ ತಿಳಿಸುವ ಸಾಧ್ಯತೆ ಇಲ್ಲ ಎಂದು ಗಮನಿಸಿ ಈ ದಾವೆ ಹೂಡಲಾಗಿದೆ. ರೈತರಿಗೆ ರಾಜ್ಯ ಸರಕಾರದ ಕುರಿತು ವಿಶ್ವಾಸ ಇಲ್ಲ ಎಂದರು. ರಾಜ್ಯದಲ್ಲಿ ಬರದ ಛಾಯೆ, ನುಡಿದಂತೆ ನಡೆದ ಸರಕಾರವನ್ನು ಎಚ್ಚರಿಸಲು ಈ ಪತ್ರಿಕಾಗೋಷ್ಠಿ ಕರೆದಿದ್ದೇವೆ. ರಾಜ್ಯದಲ್ಲಿ ಭೀಕರ ಬರದ ಛಾಯೆ ಆವರಿಸಿದೆ. 196ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರದ ವಾತಾವರಣ ನಿರ್ಮಾಣವಾಗಿದೆ. ಅತ್ಯಂತ ತುರ್ತಾಗಿ ತೀರ್ಮಾನ ತೆಗೆದುಕೊಂಡು ಕಾಮಗಾರಿ ನಡೆಸಬೇಕಾದ ರಾಜ್ಯ ಸರಕಾರಕ್ಕೆ ಮಂಪರು ಕವಿದಂತಿದೆ ಎಂದು ಟೀಕಿಸಿದರು.












Click it and Unblock the Notifications