ಕೆಲವು ರಾಜಕೀಯ ಪಕ್ಷಗಳು ದಿವಾಳಿ; ಕಾಂಗ್ರೆಸ್,ಜೆಡಿಎಸ್ ಸುಳ್ಳು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿವೆ: ಬಿ.ವೈ.ವಿಜಯೇಂದ್ರ
ಬೆಂಗಳೂರು: ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಮರಳಬೇಕೆಂಬ ಉದ್ದೇಶದಿಂದ ವಿವಿಧ ಮೋರ್ಚಾಗಳ ಸಮಾವೇಶವನ್ನು ಯಶಸ್ವಿಯಾಗಿ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಬುಧವಾರ ಬಿಜೆಪಿ ಕಚೇರಿಯಲ್ಲಿ ಮಾತನಾಡಿ ಅವರು, ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಎಲ್ಲ ಮೋರ್ಚಾಗಳ ಸಮಾವೇಶ ನಡೆಸಲು ಪಕ್ಷದ ವತಿಯಿಂದ ನನ್ನನ್ನು ಸಂಚಾಲಕರನ್ನಾಗಿ, ಜಗದೀಶ್ ಹಿರೇಮನಿ ಮತ್ತು ಯಶಪಾಲ್ ಅವರನ್ನು ಸಹ ಸಂಚಾಲಕರನ್ನಾಗಿ ನೇಮಿಸಿದ್ದಾರೆ. ಇನ್ನೊಂದು ವಾರದಲ್ಲಿ ಪ್ರವಾಸದ ವಿವರವನ್ನು ತಿಳಿಸುತ್ತೇವೆ ಎಂದು ಹೇಳಿದರು.
ಕೆಲವು ರಾಜಕೀಯ ಪಕ್ಷಗಳು ದಿವಾಳಿ ಆಗಿವೆ. ತಮ್ಮ ಸಾಧನೆ ಏನು? ಜನರಿಗೆ ಏನು ಹೇಳಬೇಕು ಎಂಬ ಗೊಂದಲದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸುಳ್ಳು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ. ಇದು ಆ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ. ಯಾವ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತಂದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂಬುದನ್ನು ರಾಜ್ಯದ ಪ್ರಜ್ಞಾವಂತ ಮತದಾರರು ಅರಿತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಏನೇ ಹೇಳಿಕೆ ಕೊಟ್ಟರೂ ಕೂಡ ರಾಜ್ಯದ ಪ್ರಜ್ಞಾವಂತ ಮತದಾರರು ಮತ್ತೊಮ್ಮೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು, ನನ್ನ ಬಗ್ಗೆ ಅನುಕಂಪದ ಮಾತನ್ನಾಡುವ ಮೂಲಕ ನಮ್ಮ ಪಕ್ಷದಲ್ಲಿ ಬೆಂಕಿ ಹಚ್ಚಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಅವುಗಳಿಗೆ ಆಸ್ಪದ ಕೊಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ. ಯಾವುದೇ ರೀತಿಯ ಗೊಂದಲಗಳಿಲ್ಲ. ಕನಿಷ್ಠ 140ರಿಂದ 150 ಶಾಸಕ ಸ್ಥಾನ ಗೆಲ್ಲುವುದೇ ಎಲ್ಲರ ಗುರಿಯಾಗಿದೆ
ತಾವು ಅಧಿಕಾರದಲ್ಲಿ ಇದ್ದಾಗ ವೀರಶೈವ ಸಮಾಜದ ಕುರಿತು ಯಾರ್ಯಾರು ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಆದ್ದರಿಂದ ಸಿದ್ದರಾಮಯ್ಯ ಅವರ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ನುಡಿದರು. ಜೆಡಿಎಸ್‍ನ ಕುಮಾರಸ್ವಾಮಿ ಅವರ ಬ್ರಾಹ್ಮಣ ಸಿಎಂ ಕುರಿತ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರು ದಿವಾಳಿಯಾಗಿದ್ದಾರೆ. ಜನರ ಮನಸ್ಸನ್ನು ಸೆಳೆಯಲು, ವಿಶ್ವಾಸ ಗೆಲ್ಲಲು ಅವರ ಬಳಿ ಅಸ್ತ್ರಗಳಿಲ್ಲ. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದು, ಅವುಗಳಿಗೆ ರಾಜ್ಯದ ಜನರು ಅವಕಾಶ ಮಾಡಿಕೊಡುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ಹಣೆಬರಹ ಏನಾಗಿದೆ ಎಂದು ದೇಶ ಮತ್ತು ರಾಜ್ಯದ ಜನರಿಗೆ ಗೊತ್ತಿದೆ. ಇಡೀ ಕಾಂಗ್ರೆಸ್ ಪಕ್ಷವು ಅಸ್ತಿತ್ವ ಕಳೆದುಕೊಂಡಿರುವ ಸಂದರ್ಭದಲ್ಲಿ ಅವರ ರಾಷ್ಟ್ರೀಯ ನಾಯಕರ ಅಡ್ರೆಸ್ ಹುಡುಕುವ ಪರಿಸ್ಥಿತಿ ಇದೆ. ಆದರೆ, ನಮ್ಮ ಪಕ್ಷದಲ್ಲಿ ಕೇಂದ್ರದ ನಮ್ಮ ಪ್ರಧಾನಿ ನರೇಂದ್ರ ಮೋದಿಜಿ, ರಾಷ್ಟ್ರೀಯ ಅಧ್ಯಕ್ಷ ನಡ್ಡಾಜಿ, ಅಮಿತ್ ಶಾ ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಇಡೀ ದೇಶವ್ಯಾಪಿಯಾಗಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ; ಅಲ್ಲದೆ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಚುನಾವಣೆ ಬಂದಾಗ ಒಂದು ರಾಜಕೀಯ ಪಕ್ಷವಾಗಿ ಅವರ ಪ್ರಯೋಜನ ಪಡೆಯುವ ಉದ್ದೇಶ ಇದೆ. ಅದರಲ್ಲಿ ಸ್ವಾರ್ಥ ಏನಿಲ್ಲ; ಅದು ಹಿನ್ನಡೆಯೂ ಅಲ್ಲ ಎಂದು ಹೇಳಿದರು.












Click it and Unblock the Notifications