ರಾಜ್ಯದ ವಿವಿಧ ಅಂಗವಾಡಿಗಳಿಗೆ ಕಳಪೆ ಮೊಟ್ಟೆ ವಿತರಣೆ: ಸರ್ಕಾರದ ವಿರುದ್ಧ ಹೆಚ್ಚಾದ ಆಕ್ರೋಶ
ಬೆಂಗಳೂರು, ಜುಲೈ 13: ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ವಿತರಿಸಲು ರಾಜ್ಯದ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಕಳಪೆಯಾಗಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪೌಷ್ಠಕತೆಗೆ ಸಹಾಯವಾಗಬೇಕಾದ ಮೊಟ್ಟೆ ಇದೀಗ ಗರ್ಭಿಣಿಯರ ಆರೋಗ್ಯಕ್ಕೆ ಕುತ್ತು ತರುತ್ತಿದೆ.
ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಮಕ್ಕಳು, ಗರ್ಭಿಣಿಯರಿಗೆ ಮೊಟ್ಟೆ ಪೂರೈಕೆಯು ಒಂದಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಕೆಟ್ಟು ಹೋಗಿವೆ. ಬೇಯಿಸಿದ ನಂತರ ಸಿಪ್ಪೆತೆಗೆದು ನೋಡಿದರೆ, ಮೊಟ್ಟೆ ಕಪ್ಪಾಗಿದ್ದು ಗೊತ್ತಾಗಿರುವುದು, ಆರೋಗ್ಯ ಹಾನಿಯ ಮುನ್ಸೂಚನೆ ಎಂಬಂತಾಗಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕೇಳಿ ಬಂದಿದೆ. ವಿವಿಧ ಯೋಜನೆಗಳಂತೆ ಮೊಟ್ಟೆ ವಿತರಣೆಯಲ್ಲಿಯೂ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಈ ಕುರಿತು ಗುರುವಾರ ಕರ್ನಾಟಕ ಬಿಜೆಪಿ ಪಕ್ಷ ಕಟುವಾಗಿ ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ''ಕಳಪೆ ಆಹಾರ ಕೊಡುವುದೂ ಒಂದೇ, ಕೈಯಾರೆ ವಿಷ ಉಣಿಸುವುದೂ ಒಂದೇ. ಅದರಲ್ಲೂ ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಟಿಕತೆ ಹೆಸರಲ್ಲಿ ವಿಷ ಪೂರಣವು ನಾಗರಿಕ ಸಮಾಜವೇ ತಲೆತಗ್ಗಿಸುವ ಕೆಲಸ ಎಂದು ಸರ್ಕಾರವನ್ನು ಟೀಕಸಿದೆ.
ಮೊಟ್ಟೆ: ಎಟಿಎಂ ಸರ್ಕಾರಕ್ಕೆ ಕಲೆಕ್ಷನ್ ಆದರೆ ಸಾಕು
ಆದರೆ ಸಾಮಾಜಿಕ ಪ್ರಜ್ಞೆಯನ್ನೇ ಮರೆತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಅಮಾನುಷ ಎಟಿಎಂ ಸರ್ಕಾರಕ್ಕೆ (#ATMSarkara) ವಾರದ ಕಲೆಕ್ಷನ್ ಸಂದಾಯವಾದರೆ ಆಯಿತು. ಬೇರೆಲ್ಲದರ ಬಗ್ಗೆ ಚಿಂತೆಯೇ ಇಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ ಮೂಲಕ ಮಕ್ಕಳು ಮತ್ತು ಅಂಗನವಾಡಿಗಳಿಗೆ ಪೂರೈಸುತ್ತಿರುವ ಮೊಟ್ಟೆ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಹಾಸನ, ಕೊಡಗು, ಹಾವೇರಿ ಜಿಲ್ಲೆ ಸೇರಿ ಕೆಲವು ಜಿಲ್ಲೆಗಳ ಅಂಗನವಾಡಿಗಳಿಗೆ ಕೆಟ್ಟ ಮೊಟ್ಟೆಗಳನ್ನು ವಿತರಿಸಲಾಗಿದೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಇದರಿಂದ ಗರ್ಭಿನಿಯರು ಮೊಟ್ಟೆ ಪಡೆಯಲು ಹಿಂದೇಟು ಹಾಕುವಂತಾಗಿದೆ. ಹಾವೇರಿ ಕೆಲವು ಅಂಗನವಾಡಿಗಳಲ್ಲಿ ಮಕ್ಕಳು ಮತ್ತು ಗರ್ಭಿಣಿಯರಿಗೆ ನೀಡಲಾಗುತ್ತಿರುವ ಮೊಟ್ಟೆಗಳಲ್ಲಿ ಕಳ್ಳಾಟ ನಡೆದಿದೆ ಎಂದು ತಿಳಿದು ಬಂದಿದೆ.

ಇನ್ನೂ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವತ್ತೂರು ಗ್ರಾಮದ ಅಂಗನವಾಡಿಗೂ ಕೊಳೆತ ಮೊಟ್ಟೆ ಪೂರೈಕೆ ಆಗಿದೆ. ಎಲ್ಲೆಲ್ಲಿ ಕಳಪೆ ಮೊಟ್ಟೆ ಪೂರೈಕೆ ಆಗಿವೆಯೋ ಅಲ್ಲೆಲ್ಲ ಬೇಯಿಸಿ ಮೊಟ್ಟೆ ಸಿಪ್ಪೆ ಬಿಡಿಸಿದಾಗ ಮೊಟ್ಟೆ ಕಪ್ಪು ಬಣ್ಣಕ್ಕೆ ತಿರುಗಿದೆ. ಒಳಭಾಗ ಪೂರ್ಣ ಕಪ್ಪಾಗಿದ್ದು, ಕೊಳೆತ ಗಬ್ಬು ವಾಸನೆ ಬರುತ್ತಿದೆ. ಇಂತಹ ಮೊಟ್ಟೆಯನ್ನು ಮಕ್ಕಳು, ಗರ್ಭಿಣಿಯರ ಹೊಟ್ಟೆ ಸೇರಿದಂತೆ ಎದುರಾಗುವ ಅನಾರೋಗ್ಯಕ್ಕೆ ಯಾರ ಹೊಣೆ ಎಂಬ ಪ್ರಶ್ನೆ ಎದ್ದಿದೆ.
ಹಿಂದೆ 5-6 ರೂ. ಪೂರೈಕೆ: ಸದ್ಯ ಹಣ ಬಿಡುಗಡೆಯಾಗಿಲ್ಲ
ಈ ಹಿಂದಿನ ಸರ್ಕಾರ ಒಂದು ಮೊಟ್ಟೆ ಪೂರೈಕೆಗೆ 5-6 ರೂ. ಕೊಡುತ್ತಿತ್ತು. ಸದ್ಯ ಮೊಟ್ಟೆಗಳ ದರದಲ್ಲಿ ಏರಿಕೆ ಆಗಿದ್ದು, ಗುತ್ತಿಗೆದಾರರು ಖರೀದಿಗೆ ಕಷ್ಟಪಡುತ್ತಿದ್ದಾರೆ. ಮೂರು ನಾಲ್ಕು ತಿಂಗಳಾದರೂ ಮೊಟ್ಟೆ ವಿತರಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ.
ಗುತ್ತಿಗೆದಾರರು ಸಣ್ಣ ಗಾತ್ರದ ಮತ್ತು ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ಅಂಗನವಾಡಿಗಳಿಗೆ ಪೂರೈಕೆ ಮಾಡುತ್ತಾರೆ. ಅಗತ್ಯ ಬೇಡಿಕೆಯಷ್ಟು ನೀಡುತ್ತಿಲ್ಲ. ಕೊಳೆತ ಮೊಟ್ಟೆಗಳನ್ನು ನಾವು ಬಿಡಾಡುತ್ತೇವೆ. ಹೀಗಾಗಿ ಮೊಟ್ಟೆ ಕೊರತೆ ಇನ್ನಷ್ಟು ಕಾಡುತ್ತದೆ. ಮಕ್ಕಳಿಗೆ ಉತ್ತಮ ಮೊಟ್ಟೆ ಪೂರೈಸಲು ಸಾಧ್ಯವಾಗದ ಸ್ಥಿತಿ ಇದೆ. ಒಂದು ವೇಳೆ ಮನೆಗೆ ಮೊಟ್ಟೆ ಒಯ್ದವರು ಕೆಟ್ಟಿವೆ ಎಂದು ಕಾರ್ಯಕರ್ತೆಯರ ಬಳಿ ಜಗಳಕ್ಕೆ ಬರುತ್ತಾರೆ.












Click it and Unblock the Notifications