ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ, ನಮ್ಮ ರಾಮ ಸಿದ್ದರಾಮಯ್ಯ ಎಂದ ಕೈ ನಾಯಕ: ಬಿಜೆಪಿ ಹೇಳಿದ್ದೇನು?
ಬೆಂಗಳೂರು,ಜನವರಿ 02: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮ, ನಮ್ಮ ರಾಮ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಮಾಜಿ ಸಚಿವ ಹೆಚ್. ಆಂಜನೇಯ ಹೇಳಿಕೆಗೆ ರಾಜ್ಯ ಬಿಜೆಪಿ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಹಿಂದೂ ಸಮಾಜಕ್ಕೆ ಅವಮಾನ ಮಾಡುತ್ತಲೇ ಬಂದಿರುವ ಕಾಂಗ್ರೆಸ್, ಈಗ ಶ್ರೀ ರಾಮಚಂದ್ರರನ್ನು ಇತರರಿಗೆ ಹೋಲಿಸಿ ಮತ್ತೊಮ್ಮೆ ಹಿಂದೂ ಸಮಾಜಕ್ಕೆ ಅವಮಾನಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಇತ್ತ ಹೆಚ್ ಆಂಜನೇಯ ವಿರುದ್ದ ಬಸವನಗೌಡ ಪಾಟೀಲ್ ಯತ್ನಾಳ್ ಸಹ ಕಿಡಿಕಾರಿದ್ದು, ಇಂತಹ ಅವಿವೇಕಿಗಳು, ಸ್ವಜನಪಕ್ಷಪಾತಿಗಳು, ಹಿಂದೂ ವಿರೋಧಿಗಳು ಈ ಹಿಂದೆ ರಾಜ್ಯದ ಸಚಿವಾರಿಗಿದ್ದರು ಎಂಬುದು ರಾಜ್ಯದ ದೌರ್ಭಾಗ್ಯ. ಆಂಜನೇಯ ಮನೆಯಲ್ಲಿ ಸಿದ್ದರಾಮಯ್ಯ ಅವರಿಗೆ ಪೂಜಾ ಕೈಂಕರ್ಯ ನೆರವೇರಿಸಲಿ. ಹಿಂದೂಗಳ ಆರಾಧ್ಯ ದೈವ ಶ್ರೀ ರಾಮ ದೇವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಘನತೆಯಿಂದ, ಗೌರವದಿಂದ ವರ್ತಿಸಲಿ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದ್ದೇನು?
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲದ ವಿಚಾರದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹೆಚ್ ಆಂಜನೇಯ ಅವರು ಮಾತನಾಡಿ, ರಾಮಮಂದಿರ ಉದ್ಘಾಟನೆಗೆ ಕರೆಯದೆ ಇದ್ದಿದ್ದೇ ಒಳ್ಳೆಯದಾಯಿತು. ಸ್ವತಃ ಸಿದ್ದರಾಮಯ್ಯ ಅವರೇ ರಾಮ, ಹೀಗಿರುವಾಗ ಆ ರಾಮನಿಗೇಕೆ ಹೋಗಿ ಅವರು ಪೂಜಿಸಬೇಕು ಎಂದು ಪ್ರಶ್ನಿಸುವ ಮೂಲಕ ಸಿದ್ಧರಾಮನಹುಂಡಿಯಲ್ಲಿ ರಾಮನ ದೇವಸ್ಥಾನ ಇದೆ, ಅಲ್ಲಿ ಪೂಜಿಸುತ್ತಾರೆ. ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ ಅದು ಬಿಜೆಪಿ ಅವರನ್ನು ಕರೆಸಿಕೊಂಡು ಭಜನೆ ಮಾಡುತ್ತಾರೆ ಎಂದು ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಬಗ್ಗೆ ವ್ಯಂಗ್ಯವಾಡಿದರು.
ಹಿಂದೂ ಸಮಾಜಕ್ಕೆ ಅವಮಾನ ಮಾಡುತ್ತಲೇ ಬಂದಿರುವ @INCKarnataka, ಈಗ ಶ್ರೀ ರಾಮಚಂದ್ರರನ್ನು ಇತರರಿಗೆ ಹೋಲಿಸಿ ಮತ್ತೊಮ್ಮೆ ಹಿಂದೂ ಸಮಾಜಕ್ಕೆ ಅವಮಾನಿಸುತ್ತಿದೆ. https://t.co/bglYCXVVJ3
— BJP Karnataka (@BJP4Karnataka) January 1, 2024
ನಮ್ಮ ರಾಮ ಎಲ್ಲಾ ಕಡೆಗೂ ಇದ್ದಾನೆ, ನಾನು ಆಂಜನೇಯ ನಾವೆಲ್ಲಾ ಶ್ರೀರಾಮನ ಭಕ್ತರು, ನಮ್ಮ ಸಮುದಾಯದವರು ರಾಮ, ಆಂಜನೇಯ, ಹನುಮಂತ ಹೆಸರಿಟ್ಟು ಕೊಳ್ಳುತ್ತಾರೆ. ರಾಮ, ಆಂಜನೇಯ ನಮ್ಮ ವರ್ಗಕ್ಕೆ ಸೇರಿದವರು ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿ ಎಂದರು.

ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್ ಸೃಷ್ಠಿಯ ಭ್ರಮೆ ಬಿಜೆಪಿಗಿದೆ. ಬಿಜೆಪಿ ಆಡಳಿತದಲ್ಲಿ ಯಾರಿಗೆ ಅನುಕೂಲ ಆಗಿದೆ ? ಎಂದು ಪ್ರಶ್ನಿಸಿದರು. ಹಿಂದೂ ಯುವಕರಿಗೆ ಬಿಜೆಪಿ ಆಡಳಿತದಿಂದ ಅನುಕೂಲ ಆಗಿದೆಯೆ ?. ಎಂದು ಮತ್ತೊಮ್ಮೆ ಪ್ರಶ್ನೆ ಹಾಕಿದರು. ನಾವೆಲ್ಲಾ ಹಿಂದೂಗಳೇ, ಹಿಂದೂ, ಹಿಂದೂ ಧರ್ಮವನ್ನ ಬಿಜೆಪಿ ಕೊಂಡುಕೊಂಡಿಲ್ಲ. ಧರ್ಮದಲ್ಲಿನ ಮೇಲು ಕೀಳು, ಶೋಷಣೆಗೆ ಪರಿಹಾರ ನೀಡಿದ್ದಾರೆಯೇ? ಮಂದಿರ ನಿರ್ಮಾಣ ಸಾಕು, ಮನೆ-ಮನ ಕಟ್ಟುವ ಕೆಲಸ ಆಗಬೇಕು. ದೇಶದ ಜನ ನಾಯಿ ನರಿ ವಾಸಿಸಲು ಯೋಗ್ಯವಲ್ಲದ ಸ್ಥಳದಲ್ಲಿ ವಾಸವಾಗಿದ್ದಾರೆ.
ಅಂಥವರ ಕಣ್ಣಿರೊರೆಸಿ ಸೂರುಕೊಟ್ಟು ರಕ್ಷಣೆ ಮಾಡುವ ಕೆಲಸವಾಗಬೇಕಿದೆ. ಸೂರಿಲ್ಲದವರಿಗೆ ಮನೆ ಕಟ್ಟಿಸಿ ರಾಮಮಂದಿರ ಅಂತ ಹೆಸರಿಡಿ ಆಗ ನಿಜವಾದ ರಾಮ ಬಂದು ಆಶೀರ್ವದಿಸುತ್ತಾನೆ. ಓಟಿನ ರಾಮ ಅಲ್ಲ, ಓಟಿಗಾಗಿ ಬಿಜೆಪಿ ರಾಮನ ಮಾಡುವುದು ಬೇಡ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ಹೆಚ್ ಆಂಜನೇಯ ವಾಗ್ದಾಳಿ ನಡೆಸಿದರು.












Click it and Unblock the Notifications