ಬಿಜೆಪಿ ಬಂಡಾಯ ಚಿವುಟಿ ಹಾಕಿತಾ ದೆಹಲಿಯ ಆ ಒಂದು ದೂರವಾಣಿ ಕರೆ?
ಬೆಂಗಳೂರು, ಮೇ 30: ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದು ಶಾಸಕರ ಅಸಮಾಧಾನ. ಅಸಮಾಧಾನದಿಂದ ಶುರುವಾದ ಅತೃಪ್ತಿಯೆ ಮುಂದೆ ಎಚ್ ಡಿ ಕುಮಾರಸ್ವಾಮಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವಂತಾಯಿತು. ಇದೀಗ ಮೈತ್ರಿ ಸರ್ಕಾರದ ಪತನದ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬರುವ ಜುಲೈ 26ಕ್ಕೆ ಒಂದು ವರ್ಷವಾಗಲಿದೆ.
ಕಳೆದ ಒಂದು ವರ್ಷದ ಆಡಳಿತದಲ್ಲಿ ಹಲವು ಸಂಕಷ್ಟಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಎದುರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣ ನೆರೆ ಪರಿಸ್ಥಿತಿ ರಾಜ್ಯದ ಜನರನ್ನು ಇನ್ನಿಲ್ಲದಂತೆ ಕಾಡಿತ್ತು. ಅದಾದ ಬಳಿಕ ಸಂಪುಟ ವಿಸ್ತರಣೆ ಮಾಡುತ್ತಿದ್ದಂತೆಯೆ ಕೊರೊನಾ ಮಾಹಾಮಾರಿ ಇಡೀ ಜಗತ್ತನ್ನೆ ಕಾಡುತ್ತಿದೆ.
ಇದೇ ಸಂದರ್ಭದಲ್ಲಿ ಮತ್ತೆ ಬಿಜೆಪಿಯಲ್ಲಿ ಬಂಡಾಯ ಕಾಣಿಸಿಕೊಂಡಿತ್ತು. ಮಾಜಿ ಸಚಿವ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ, ಮುರುಗೇಶ್ ನಿರಾಣಿ, ರಾಜೂಗೌಡ ಸೇರಿದಂತೆ ಘಟಾನುಘಟಿ ನಾಯಕರೇ ಬಂಡಾಯ ಸಭೆ ನಡೆಸಿದ್ದರು. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ ಎಂದೆ ಭಾವಿಸಲಾಗಿತ್ತು. ಆದರೆ ಸಭೆ ಸೇರಿದ್ದ ನಾಯಕರೆ ಇದೀಗ ಯುಟರ್ನ್ ಹೊಡೆದಿದ್ದಾರೆ.

ಅಸಮಾಧಾನ ಸ್ಪೋಟ
ಕೊರೊನಾ ವೈರಸ್ ಸಂಕಷ್ಟ ಕಡಿಮೆಯಾಗಿ ಲಾಕ್‌ಡೌನ್ ತೆರುವಾಗುತ್ತಿದ್ದಂತೆಯೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂಬ ಮಾಹಿತಿಯಿದೆ. ಸಂಪುಟ ವಿಸ್ತರಣೆ ಮಾಹಿತಿ ಬೆನ್ನಲ್ಲೆ ಬಿಜೆಪಿಯಲ್ಲಿ ಒತ್ತಡ ತಂತ್ರ ಶುರುವಾಗಿದೆ. ಉಳಿದಿರುವ 6 ಮಂತ್ರಿ ಸ್ಥಾನಗಳಿಗೆ ಇನ್ನಿಲ್ಲದ ಒತ್ತಡ ಶುರುವಾಗಿದೆ. ಇದರೊಂದಿಗೆ ರಾಜ್ಯಸಭಾ ಚುನಾವಣೆ ಹಾಗೂ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಗಾಗಿ ಚುನಾವಣೆ ನಡೆಯಲಿದೆ.
ಹೀಗಾಗಿ ರಾಜ್ಯಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಟಿಕೆಟ್ ಹಾಗೂ ಮಂತ್ರಿಸ್ಥಾನಕ್ಕೆ ಒಮ್ಮೆಲೆ ಒತ್ತಡಗಳು ಶುರುವಾಗಿವೆ. ಇದೇ ಹಿನ್ನೆಲೆಯಲ್ಲಿ ಸಚಿವಸ್ಥಾನಕ್ಕೆ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್, ಅಭಯ್ ಪಾಟೀಲ್, ಮುರುಗೇಶ್ ನಿರಾಣಿ, ಮಹಾದೇವಪ್ಪ ಯಾದವಾಡ ಸೇರಿದಂತೆ ಹಿರಿಯ ಶಾಸಕರು ಮಂತ್ರಿಸ್ಥಾನಕ್ಕೆ ಒತ್ತಡ ಹಾಕಿದ್ದಾರೆ. ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ರಾಜ್ಯಸಭಾ ಚುನಾವಣೆ ಟಿಕೆಟ್ ಹಾಗೂ ಸಿ.ಪಿ. ಯೋಗೇಶ್ವರ್ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಹಾಗೂ ಸಚಿವ ಸ್ಥಾನಕ್ಕೆ ಸಿಎಂ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.

ನಿಜ ಎಂದಿದ್ದ ಶಾಸಕ ಯತ್ನಾಳ್
ಘಟನಾಘಟಿ ಹಿರಿಯ ಶಾಸಕರೆ ಬಂಡಾಯ ಸಭೆ ಮಾಡಿದ್ದು ಸರ್ಕಾರದ ಭವಿಷ್ಯಕ್ಕೆ ಕುತ್ತು ತರಬಹುದು ಎಂದೆ ಭಾವಿಸಲಾಗಿತ್ತು. ಆದರೆ ಸಭೆ ಸೇರಿದ್ದ ಹಿರಿಯ ನಾಯಕರು ಕೂಡ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಸಭೆಯ ಬಳಿಕ ಮಾತನಾಡಿದ್ದ ಉಮೇಶ್ ಕತ್ತಿ ಹಾಗೂ ಬಸನಗೌಡ ಪಾಟೀಲ್ ಅವರು ಪರೋಕ್ಷವಾಗಿ ಸಭೆ ಸೇರಿದ್ದನ್ನು ಸಮರ್ಥಿಸಿಕೊಂಡಿದ್ದರು.
ತಮ್ಮ ಕ್ಷೇತ್ರಗಳ ಸಮಸ್ಯೆ ಚರ್ಚೆ ಮಾಡಿರುವುದನ್ನು ಬಂಡಾಯ ಸಭೆಯಲ್ಲಿದ್ದ ಶಾಸಕು ಒಪ್ಪಿಕೊಂಡಿದ್ದರು. ಜೊತೆಗೆ ಅಮಿತ್ ಶಾ, ಜೆ.ಪಿ. ನಡ್ಡಾ ನಮ್ಮ ನಾಯಕರು ಎಂದು ಶಾಸಕ ಯತ್ನಾಳ್ ಹೇಳಿಕೆ ಕೊಟ್ಟಿದ್ದರು. ಸಭೆ ಸೇರಿದ್ದು ನಿಜ, ಆದರೆ ಸಭೆಯ ಸಂಪೂರ್ಣ ವಿವರವನ್ನು ಹೇಳುವುದಿಲ್ಲ ಎಂದಿದ್ದರು.

ಸಭೆ ಕರೆದಿಲ್ಲ ಎಂದಿದ್ದ ಸಿಎಂ
ಪಕ್ಷದ ಕೆಲವು ಶಾಸಕರೊಂದಿಗೆ ಚರ್ಚಿಸಲು ನಾನು ತುರ್ತು ಸಭೆ ಕರೆದಿದ್ದೇನೆ ಎನ್ನುವ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಗಮನಿಸಿದ್ದೇನೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಅಂತಹ ಯಾವುದೇ ಸಭೆಯನ್ನು ನಾನು ಕರೆದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ಅದಕ್ಕೆ ಕಾರಣವಾಗಿದ್ದು ದೆಹಲಿಯ ಆ ಒಂದು ಫೋನ್ ಕಾಲ್.

ಬಂಡಾಯ ಬಿಡಿ, ಕೆಲಸ ನೋಡಿ
ಹಿರಿಯ ಶಾಸಕರ ಬಂಡಾಯ ಸಭೆ ಕುರಿತು ತಲೆ ಕೆಡೆಸಿಕೊಳ್ಳದೆ ಕೊರೊನಾ ವೈರಸ್ ನಿಯಂತ್ರಣ, ಲಾಕ್‌ಡೌನ್ ಬಗ್ಗೆ ಗಮನ ಹರಿಸಿ ಎಂದು ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸೂಚಿಸಿತ್ತು. ಈ ಬಗ್ಗೆ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಪುಟ ವಿಸ್ತರಣೆ, ರಾಜ್ಯಸಭಾ ಚುನಾವಣೆ ಹಾಗೂ ಪರಿಷತ್ ಚುನಾವಣೆ ಬಗ್ಗೆ ನಿಮಗೆ ಯೋಚನೆ ಬೇಡ. ಸಧ್ಯದ ಕೆಲಸ ನೋಡಿ ಎಂದು ಸಲಹೆ ಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಬಂಡಾಯ ಶಾಸಕರೊಂದಿಗೆ ಸಭೆ ನಡೆಸುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೈಕಮಾಂಡ್‌ನಿಂದ ಭರವಸೆಯ ದೂರವಾಣಿ ಕರೆ ಬರುತ್ತಿದ್ದಂತೆಯೆ ಬಂಡಾಯ ಶಾಸಕರು ಸುಮ್ಮನಾಗಿದ್ದಾರೆ. ಆರಂಭದಲ್ಲಿಯೆ ಭಿನ್ನಮತವನ್ನು ಬಿಜೆಪಿ ಹೈಕಮಾಂಡ್ ಚಿವುಟಿ ಹಾಕಿತಾ?

ಯು ಟರ್ನ್ ಹೊಡೆದ ನಿರಾಣಿ
ಬಂಡಾಯ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದ್ದ ಮಾಜಿ ಸಚಿವ, ಶಾಸಕ ಮುರುಗೇಶ್ ನಿರಾಣಿ ಯುಟರ್ನ್ ಹೊಡೆದಿದ್ದಾರೆ. ನಾನು ಸಭೆಯಲ್ಲಿ ಭಾಗವಹಿಸಿಲ್ಲ. ಈಗ ಬಂದಿರುವ ಸುದ್ದಿ ಎರಡೂವರೆ ತಿಂಗಳ ಹಿಂದಿನದು. ಲಾಕ್‌ಡೌನ್ ಘೋಷಣೆಗೂ ಮೊದಲು ನಾವೆಲ್ಲ ಸೇರಿದ್ದೇವು. ಒಂದೊಂದು ಬಾರಿ ಅನ್ಯ ಪಕ್ಷಗಳ ಶಾಸಕರೊಂದಿಗೂ ವೈಯಕ್ತಿಕ ಭೇಟಿ, ಊಟ ಮಾಡಿದ್ದೇವೆ. ಅದನ್ನು ಬಂಡಾಯ ಎಂದು ಕರೆಯಬೇಡಿ ಎಂದು ಮುರುಗೇಶ್ ನಿರಾಣಿ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಬಿಜೆಪಿ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ಹಿನ್ನೆಲೆಯಲ್ಲಿ ಬಂಡಾಯ ಸಭೆಯಲ್ಲಿದ್ದ ಕೆಲವರು ಯುಟರ್ನ್ ಹೊಡೆದಿದ್ದಾರೆ ಎನ್ನಲಾಗಿದೆ. ಆದರೆ ಬಂಡಾಯ ಶಮನವಾಗಿಲ್ಲ ಎನ್ನಲಾಗಿದೆ.

ಬಂಡಾಯ ಶಮನವಾಗಿಲ್ಲ
ಬಿಜೆಪಿ ಹೈಕಮಾಂಡ್ ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆಯನ್ನೇ ಮಾಡಿಲ್ಲ. ನಮ್ಮ ಸಮಸ್ಯೆಗಳು ತೀರದ ಹೊರತು ಬಂಡಾಯ ಶಮನವಾಗುವುದಿಲ್ಲ. ಕ್ಷೇತ್ರದಲ್ಲಿ ಪ್ರತಿಯೊಂದು ಕೆಲಸದಲ್ಲೂ ಹಸ್ತಕ್ಷೇಪ ಆಗುತ್ತಿದೆ. ನಾವು ಕ್ಷೇತ್ರದ ಜನರಿಗೆ ಏನೂ ಉತ್ತರ ಕೊಡಬೇಕು ಎಂದು ಬಂಡಾಯ ಸಬೆಯಲ್ಲಿದ್ದ ಶಾಸಕರೊಬ್ಬರು ಮಾಹಿತಿ ಕೊಟ್ಟಿದ್ದಾರೆ.
ನಮ್ಮ ಬಂಡಾಯ ಸರ್ಕಾರ ಕೆಡುವುದಕ್ಕಲ್ಲ, ನಾಯಕತ್ವ ಬದಲಾವಣೆ ಆಗಬೇಕು. ನಮ್ಮ ಕ್ಷೇತ್ರಗಳು ಬೆಂಗಳೂರಿನಿಂದ ನಿಯಂತ್ರಣವಾಗುತ್ತಿವೆ. ಅದು ತಪ್ಪಬೇಕು. ಕ್ಷೇತ್ರಕ್ಕೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳುವುದು ನಮ್ಮಿಂದ ಆಗುತ್ತಿಲ್ಲ. ನಾವು ಹೇಗೆ ಕೆಲ ಮಾಡಬೇಕು ಎಂದು ಬಂಡಾಯ ಶಾಸಕರೊಬ್ಬರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications