"ಗ್ಯಾರಂಟಿ ಯೋಜನೆಗಳಿಗೆ ವಾರಂಟಿ ಕಡಿಮೆಯಾಗುತ್ತಿದೆ"
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಬರೋಬ್ಬರಿ 2 ವರ್ಷಗಳ ಮೇಲಾಗಿದೆ. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು. ಇದರಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲ ಸಹ ಆಗಿದೆ. ಆದರೆ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರೇ ಹೇಳಿಕೆಗಳನ್ನು ಕೊಡುವುದನ್ನು ಮುಂದುವರಿಸುತ್ತಿರುವುದರಿಂದ ಇದು ವಿವಾದದ ಸ್ವರೂಪನ್ನು ಪಡೆದುಕೊಳ್ಳುತ್ತಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ಗ್ಯಾರಂಟಿ ಯೋಜನೆಗಳು ಹೊರೆಯಾಗಿರುವುದು ನಿಜ. ಆದರೆ, ಬಡವರಿಗಾಗಿ ಸಹಿಸಿಕೊಳ್ಳಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇನ್ನು ಈ ರೀತಿ ಕಾಂಗ್ರೆಸ್‌ನ ಪ್ರಭಾವಿ ನಾಯಕರೇ ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿಕೆ ನೀಡುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದ್ದು. ವಿಷಯಗಳನ್ನು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷವೇ ಎತ್ತಿಕೊಟ್ಟಂತೆ ಆಗಿದೆ.
ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ನಾಯಕರೇ ದಿನಕ್ಕೊಂದು ಹೇಳಿಕೆಯನ್ನು ಕೊಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಹ ಈ ಬಗ್ಗೆ ವ್ಯಂಗ್ಯವಾಡಿದೆ. ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ಗ್ಯಾರಂಟಿ ಎಂಬ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯೋಜನೆಯ ಸ್ವರೂಪವನ್ನೇ ಬದಲಾಯಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಚಿಂತಿಸುತ್ತಿದೆ ಎಂದು ದೂರಿದೆ.

ಚುನಾವಣಾ ಪೂರ್ವದಲ್ಲಿ ಮನೆ ಮನೆಗೆ ತೆರಳಿದ್ದ ಕಾಂಗ್ರೆಸ್, ಉಚಿತ ಗ್ಯಾರಂಟಿಗಳ ಭರವಸೆ ನೀಡಿ ಗ್ಯಾರಂಟಿ ಕಾರ್ಡ್ ವಿತರಿಸಿತ್ತು. ಇದೀಗ ಅದೇ ಮತದಾರರನ್ನು ಗ್ಯಾರಂಟಿಗಳನ್ನು ತ್ಯಜಿಸಿ ಎಂದು ಬೇಡಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಗ್ಯಾರಂಟಿ ಯೋಜನೆಗಳನ್ನು ಬಡವರಿಗೆ ಬಿಟ್ಟುಕೊಡಿ ಎಂದು ಸಿರಿವಂತರನ್ನು ಬೇಡಿಕೊಳ್ಳುತ್ತೇವೆ ಎಂದು ಸರ್ಕಾರ ಹೇಳಿದೆ, ಇದು ಗ್ಯಾರಂಟಿ ಯೋಜನೆಗಳ ಸ್ಥಗಿತಕ್ಕೆ ಮುನ್ನುಡಿಯಾಗಲಿದೆ. ಮುಂದೆ ನಿಧಾನವಾಗಿ ಗ್ಯಾರಂಟಿಗಳನ್ನು ಶಾಶ್ವತವಾಗಿ ಬಂದ್ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಉದ್ದೇಶವಾಗಿದೆ. ಅದಕ್ಕೆ ಗ್ಯಾರಂಟಿ ತ್ಯಜಿಸಿ ನಾಟಕದ ಮೂಲಕ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ವಾರೆಂಟಿ ಕಳೆದುಕೊಳ್ಳುತ್ತಿದೆ ಎಂದು ವ್ಯಂಗ್ಯ: ಇನ್ನು ಬಿಜೆಪಿಯು ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಬಗ್ಗೆ ನೀಡುತ್ತಿರುವ ಹೇಳಿಕೆಯ ಬಗ್ಗೆ ವ್ಯಂಗ್ಯವಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ವಾರೆಂಟಿ ಕಳೆದುಕೊಳ್ಳುತ್ತಿವೆ ಎಂದು ಹೇಳಿದೆ.
ಮಹಾರಾಷ್ಟ್ರ & ದೆಹಲಿಯಲ್ಲೂ ಸಂಕಷ್ಟ: ಇನ್ನು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ಕಷ್ಟಪಡುತ್ತಿಲ್ಲ. ಅತ್ತ ಮಹಾರಾಷ್ಟ್ರ ಹಾಗೂ ದೆಹಲಿಯಲ್ಲೂ ಇದೇ ಪರಿಸ್ಥಿತಿ ಇದೆ. ದೆಹಲಿಯಲ್ಲಿ ಬರೋಬ್ಬರಿ 27 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ನು ಮಹಾರಾಷ್ಟ್ರದಲ್ಲೂ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಆದರೆ, ಈ ರಾಜ್ಯಗಳಲ್ಲೂ ಚುನಾವಣೆ ಪೂರ್ವದಲ್ಲಿ ಗ್ಯಾರಂಟಿ ಮಾದರಿಯ ಯೋಜನೆಗಳನ್ನು ಘೋಷಿಸಲಾಗಿತ್ತು. ಆದರೆ, ಈ ಯೋಜನೆಗಳನ್ನು ಜಾರಿ ಮಾಡುವುದಕ್ಕೆ ಹಾಗೂ ಮುಂದುವರಿಸುವುದಕ್ಕೆ ಸರ್ಕಾರಗಳು ತಿಣುಕಾಡುತ್ತಿವೆ ಎನ್ನಲಾಗಿದೆ.












Click it and Unblock the Notifications