ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರು; ಬಿಜೆಪಿ ಹೇಳಿತು ರಹಸ್ಯ!
ಬೆಂಗಳೂರು, ಆಗಸ್ಟ್ 03; ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಹಲವಾರು ಸಚಿವರು ಸೇರಿದಂತೆ ಕರ್ನಾಟಕದ 50ಕ್ಕೂ ಹೆಚ್ಚು ನಾಯಕರು ದೆಹಲಿಯಲ್ಲಿದ್ದಾರೆ. ಹೈಕಮಾಂಡ್ ನಾಯಕರ ಜೊತೆ ಬುಧವಾರ ಸಂಜೆ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ನಡೆಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರಕಾರ 2024ರ ಲೋಕಸಭೆ ಚುನಾವಣೆಯ ತಂತ್ರ ರೂಪಿಸಲು ಈ ಸಭೆ ನಡೆದಿದೆ. ರಾಜ್ಯದಲ್ಲಿ 20 ಸ್ಥಾನಗಳನ್ನು ಗೆಲ್ಲಲು ಹೈಕಮಾಂಡ್ ಟಾರ್ಗೆಟ್ ನೀಡಿದೆ. ಆದರೆ ಈ ಸಭೆ ನಡೆದಿರುವುದೇ ಬೇರೆ ಕಾರಣಕ್ಕೆ ಎಂಬ ರಹಸ್ಯ ಬಯಲಾಗಿದೆ.

ಗುರುವಾರ ಟ್ವೀಟ್ ಮಾಡಿರುವ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ನಾಯಕರ ದೆಹಲಿ ಸಭೆಯ ರಹಸ್ಯ ಬಿಚ್ಚಿಟ್ಟಿದೆ. 'ರಾಜ್ಯದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಗಲಾಟೆಯಲ್ಲೇ ಅಂತ್ಯವಾದ ಕಾರಣ, ಹೈಕಮಾಂಡ್ ಸಂಧಾನ ಮಾಡಲು ದೆಹಲಿಗೆ ಕರೆಸಿಕೊಂಡಿದೆ. ಈ ರಾಜಿ ಸಂಧಾನದ ಪ್ರಮುಖಾಂಶಗಳು' ಎಂದು ಪಟ್ಟಿಯೊಂದನ್ನು ನೀಡಿದೆ.
ಬಿಜೆಪಿಯ ಟ್ವೀಟ್ ಹೇಳುವುದೇನು?
* ಮುಖ್ಯಮಂತ್ರಿಗಳ ಪುತ್ರನ ದರ್ಬಾರ್..!
* ವರ್ಗಾವಣೆ ದಂಧೆಯಲ್ಲಿ ಆದ ಕಮಾಯಿ..!
* ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ವಸೂಲಿ..!
* ಪ್ರಿಯಾಂಕ್ ಖರ್ಗೆಯ ಮೂಗು ತೂರಿಸುವಿಕೆ..!
* ಜಿಹಾದಿಗಳ ರಕ್ಷಣೆಗೆ ಪ್ರಮುಖ ಆದ್ಯತೆ..!
* ಲೋಕಸಭಾ ಚುನಾವಣೆಗೂ ಮುನ್ನ ಹಿಂದೂಗಳನ್ನು ಹತ್ತಿಕ್ಕುವುದು.!
* ರಾಜ್ಯ ಸರ್ಕಾರಕ್ಕೆ ಹತ್ತು ರಾಜ್ಯಗಳ ಎಲೆಕ್ಷನ್ ಜವಾಬ್ದಾರಿ..!
* ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಕೈವಾಡ..!
* ಗ್ಯಾರಂಟಿ ಹೆಸರಲ್ಲಿ ಮತ್ತಷ್ಟೂ ತೆರಿಗೆ ಏರಿಕೆ..!
* ಲೋಕಸಭಾ ಚುನಾವಣೆ ನಂತರ ಗ್ಯಾರಂಟಿಗಳನ್ನು ಕೈ ಬಿಡುವುದು..!
'ರಾಜ್ಯದಲ್ಲಿ ಕಲುಷಿತ ನೀರು, ಅನ್ನದಾತನ ಆತ್ಮಹತ್ಯೆ, ಬೆಲೆ ಏರಿಕೆಯಿಂದಾಗಿ ಜನರು ರೋಸಿ ಹೋಗಿದ್ದರೆ, ಇಡೀ ಸರ್ಕಾರವೇ ದೆಹಲಿಯಲ್ಲಿ ಕೂತು ಮಜಾ ಮಾಡುತ್ತಿದೆ' ಎಂದು ಬಿಜೆಪಿ ಆರೋಪ ಮಾಡಿದೆ.
ಬಿಜೆಪಿ ಬುಧವಾರ ಟ್ವೀಟ್ ಮಾಡಿ, 'ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ವಯಲಿನ್ ಬಾರಿಸುತ್ತಾ ಕುಳಿತ ರೀತಿ, ರಾಜ್ಯವೇ ಪ್ರವಾಹ - ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಸಮಯದಲ್ಲಿ ಸಿಎಂ, ಸಚಿವರು, ಶಾಸಕರು ಕರ್ನಾಟಕ ತೊರೆದು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ' ಎಂದು ಆರೋಪ ಮಾಡಿತ್ತು.
'ಪ್ರಕೃತಿ ವಿಕೋಪದ ಪರಿಸ್ಥಿತಿ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ, ಜನರ ಸಮಸ್ಯೆಗಳಿಗೆ ದನಿಯಾಗಿ, ಪರಿಹಾರ ಕಾರ್ಯದಲ್ಲಿ ಭಾಗಿಯಾಗಬೇಕು.
ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮಾತ್ರ ದೊರೆಗಳ ಮುಂದೆ ತನ್ನ ಕೊಳಲು ಬಾರಿಸಲು ದೆಹಲಿಗೆ ಹೋಗಿದೆ' ಎಂದು ವ್ಯಂಗ್ಯವಾಡಿತ್ತು.
'ಪ್ರವಾಹ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಸ್ಥಳೀಯ ಮಟ್ಟದಲ್ಲಿ ಲಭ್ಯವಿರಬೇಕಾಗಿದ್ದ ಶಾಸಕರನ್ನು ಒತ್ತಾಯಪೂರ್ವಕವಾಗಿ ಬೆಂಗಳೂರಿಗೆ ಕರೆಸಿ ಸಿದ್ದರಾಮಯ್ಯರವರು ಹೊತ್ತಲ್ಲದ ಹೊತ್ತಲ್ಲಿ ಶಾಸಕಾಂಗ ಸಭೆ ನಡೆಸಿದ್ದರು' ಎಂದು ಆರೋಪಿಸಿತ್ತು.
'ಈಗ ಪ್ರವಾಹ ಪೀಡಿತ ಪ್ರದೇಶಗಳ ವಸ್ತುಸ್ಥಿತಿ ಅಧ್ಯಯನ ನಡೆಸಿ, ಪರಿಹಾರ ಕಾರ್ಯಕ್ರಮಗಳನ್ನು ಘೋಷಿಸಬೇಕಾಗಿದ್ದ ಮುಖ್ಯಮಂತ್ರಿಗಳು, ಸಚಿವರು ಮತ್ತು ಶಾಸಕರ ಜೊತೆ ತಮ್ಮ ತಮ್ಮ ಇಲಾಖೆಯ ಕಲೆಕ್ಷನ್ ಲೆಕ್ಕ ಒಪ್ಪಿಸಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ' ಎಂದು ಬಿಜೆಪಿ ಟೀಕಿಸಿತ್ತು.
'ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಪಟಾಲಂ ಅನ್ನು ಸಾಕಲು ಹೇರಳ ಧನಸಂಗ್ರಹಣೆಯಲ್ಲಿ ತೊಡಗಿದೆ. ಪರಿಣಾಮವಾಗಿ ಇಲ್ಲಿನ ಮುಖ್ಯಮಂತ್ರಿಗಳು ಹಾಗೂ ವಿವಿಧ ಪ್ರಮುಖ ಇಲಾಖೆಗಳ ಸಚಿವರನ್ನು ಪದೇ ಪದೇ ಕರೆಸಿ ಕಲೆಕ್ಷನ್‌ನ ಹೊಸ ಟಾರ್ಗೆಟ್ ನೀಡುತ್ತಿದೆ' ಎಂದು ಟ್ವೀಟ್ ಮಾಡಿತ್ತು.
'ತಮಗೆ ಮತ ನೀಡಿರುವ ಜನತೆಯನ್ನು ಸಂಕಷ್ಟದ ಸಮಯದಲ್ಲಿ ಭೇಟಿಯಾಗಬೇಕಿದ್ದ ಮುಖ್ಯಮಂತ್ರಿಗಳು ಮತ್ತು ಕಂಪನಿ ತಮ್ಮ ಜವಾಬ್ದಾರಿ ಮರೆತು ದೆಹಲಿಯಲ್ಲಿ ಕೂತು ಸಮಯ ಕಳೆಯುತ್ತಿರುವುದು ಖಂಡನೀಯ. ಆದರೆ ಹಿಂದಿರುಗಿ ಬಂದ ನಂತರ ಮತ್ತಷ್ಟು ಕಲೆಕ್ಷನ್ ಹೆಚ್ಚು ಮಾಡಲಿರುವ ಅವರು ಮರಳಿ ಬಂದರೂ ರಾಜ್ಯಕ್ಕೆ ಅಪಾಯ ತಪ್ಪಿದ್ದಲ್ಲ' ಎಂದು ಜನರಿಗೆ ಬಿಜೆಪಿ ಎಚ್ಚರಿಕೆ ಕೊಟ್ಟಿತ್ತು.












Click it and Unblock the Notifications