Heavy Rain-Flood: ಸರ್ಕಾರ ₹6,000 ಕೋಟಿ ಮಳೆ ಹಾನಿ ಪರಿಹಾರ ಬಿಡುಗಡೆ ಮಾಡಲಿ
ಬೆಂಗಳೂರು, ಅಕ್ಟೋಬರ್ 21: ಬೆಂಗಳೂರು ಸೇರಿದಂತೆ ಮಲೆನಾಡು, ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಆಗಿದ್ದು, ಅದರಿಂದ ಪ್ರವಾಹ ಸೃಷ್ಟಿಯಾಗಿದೆ. ಸರ್ಕಾರ ಕುಂಭಕರ್ಣನಂತೆ ನಿದ್ದೆ ಮಾಡುವುದು ಬಿಟ್ಟು ಕೂಡಲೇ ಸಭೆ ನಡೆಸಿ ಸೂಕ್ತ ರೀತಿಯಲ್ಲಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಪ್ರವಾಹದಿಂದ ಅಪಾರ ಹಾನಿ ಉಂಟಾಗಿದೆ. ರಾಜ್ಯ ಸರ್ಕಾರ ಕೂಡಲೇ ಸಭೆ ಕರೆದು 5,000 ಕೋಟಿ ರೂ. ಬಿಡುಗಡೆ ಮಾಡಬೇಕು. ಜೊತೆಗೆ ಬೆಂಗಳೂರಿನಲ್ಲಿ ಪರಿಹಾರ ಕಾರ್ಯಾಚರಣೆಗೆ 1,000 ಕೋಟಿ ರೂ. ಬಿಡುಗಡೆ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.

ಕುಂಭಕರ್ಣನಂತೆ ಸಿದ್ದರಾಮಯ್ಯ ನಿದ್ದೆ ಮಾಡುವುದು ಬಿಡಬೇಕು
ಸಿಲ್ಕ್ ಬೋರ್ಡ್ ವೃತ್ತದ ಬಳಿ ಮಳೆ ಹಾನಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆ. ಮಲೆನಾಡಿನಲ್ಲಿ ಕಾಫಿ ಉದುರುತ್ತಿದೆ, ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ, ಈರುಳ್ಳಿ ಕೊಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಭಕರ್ಣನಂತೆ ನಿದ್ದೆ ಮಾಡುವುದನ್ನು ಬಿಟ್ಟು ಎಲ್ಲ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಯಾವ ರೀತಿ ಅನಾಹುತವಾಗಿದೆ ಎಂದು ಪರಿಶೀಲಿಸಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರದಿಂದ ಕಳೆದೊಂದು ತಿಂಗಳಿಂದ ಪ್ರವಾಹ ಸಂಬಂಧದ ಸಭೆಯೇ ನಡೆದಿಲ್ಲ. ಸರ್ಕಾರ ಕೂಡಲೇ ಸಭೆ ಕರೆದು ಕನಿಷ್ಠ 5,000 ಕೋಟಿ ರೂ. ಬಿಡುಗಡೆ ಮಾಡಬೇಕು. ಬೆಂಗಳೂರಿಗೆ ವಿಶೇಷವಾಗಿ 1,000 ಕೋಟಿ ರೂ. ಬಿಡುಗಡೆಗೆ ಆದೇಶ ಹೊರಡಿಸಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು. ಪ್ರವಾಹದಿಂದ ನಷ್ಟವಾದವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅವರು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ 16 ತಿಂಗಳು ಆಗಿದ್ದು, ಸರ್ಕಾರದ ಪಾಪದ ಫಲವನ್ನು ಬೆಂಗಳೂರಿನ ಜನರು ಅನುಭವಿಸಬೇಕಾಗಿದೆ. ರಾಜಕಾಲುವೆಯ ಹೂಳು ತೆಗೆದು ಸ್ವಚ್ಛ ಮಾಡುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಇದರಿಂದಾಗಿ ತೇಲುತ್ತಿರುವ ಬೆಂಗಳೂರು ಎಂಬ ಅಪಖ್ಯಾತಿ ನಗರಕ್ಕೆ ಬಂದಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಒಂದೂವರೆ ವರ್ಷದಲ್ಲಿ ಎಷ್ಟು ಒತ್ತುವರಿ ತೆರವು ಮಾಡಿದ್ದಾರೆ. ಎಷ್ಟು ಹೂಳು ತೆಗೆಸಿದ್ದಾರೆ?. ಬಿಜೆಪಿ ಸರ್ಕಾರವಿದ್ದಾಗ ಮಳೆಗಾಲಕ್ಕೆ ಮುನ್ನ ಎಲ್ಲ ಸಿದ್ಧತೆ ಮಾಡಲಾಗುತ್ತಿತ್ತು ಎಂದು ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದರು.
ಸರ್ಕಾರದ ಖಜಾನೆ ಖಾಲಿ ಆಗಿದ್ದು ಗೊತ್ತಿದೆ
ಬೆಂಗಳೂರಿನಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಖಜಾನೆ ಖಾಲಿಯಾಗಿದೆ ಎಂದು ನಮಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದ ಅವರು ಕನಿಷ್ಠ 500 ಕೋಟಿ ರೂ. ಹಣವಾದರೂ ಬಿಡುಗಡೆ ಮಾಡಲಿ. ಇಲ್ಲವೆಂದರೆ ಗುತ್ತಿಗೆದಾರರು ಮುಂದೆ ಬರುವುದಿಲ್ಲ. ಇದರ ಜೊತೆಗೆ ಕಸದ ಸಮಸ್ಯೆಯೂ ಸೃಷ್ಟಿಯಾಗಿ ಇನ್ನಷ್ಟು ಸಮಸ್ಯೆ ಉಲ್ಭಣಿಸಬಹುದು ಎಂದು ಅವರು ಎಚ್ಚರಿಸಿದರು.
ನಗರದ ಮಾನ್ಯತಾ ಟೆಕ್ ಪಾರ್ಕ್ ಈಗ ಮುಳುಗಡೆ ಪಾರ್ಕ್ ಆಗಿಬಿಟ್ಟಿದೆ. ಸಿಲ್ಕ್ ಬೋರ್ಡ್‌ನಲ್ಲಿ ಪ್ರತಿ ದಿನವೂ ಪ್ರವಾಹ ಉಂಟಾಗುತ್ತಿದೆ. ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ 6 ತಿಂಗಳಾದರೂ ಏನೂ ಮಾಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾತ್ರಿ ಪರಿಶೀಲನೆ ಮಾಡಿದ್ದು, ಅವರಿಗೆ ಯಾವುದೇ ಸಮಸ್ಯೆ ಕಂಡಿಲ್ಲ ಎಂದು ದೂರಿದರು.
ಭೈರತಿ ಸುರೇಶ್‌ಗೆ ಆರ್.ಅಶೋಕ್ ಎಚ್ಚರಿಕೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಕುರಿತು ಸಚಿವ ಭೈರತಿ ಸುರೇಶ್ ಕೀಳಾಗಿ ಮಾತಾಡಿರುವುದು ಖಂಡನೀಯ.ಈ ಮೂಲಕ ಅವರು ಕೆಟ್ಟ ರಾಜಕಾರಣ ಶುರು ಮಾಡಿದ್ದಾರೆ. ಭೈರತಿ ಸುರೇಶ್ ಅವರು ಸಚಿವ ಸ್ಥಾನಕ್ಕೆ ಅಗೌರವ ತಂದಿದ್ದಾರೆ. ಎಚ್ಚರಿಕೆಯಿಂದ ಮಾತಾಡಬೇಕು ಎಂದು ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆಗೆ ಅಭ್ಯರ್ಥಿಯನ್ನು ಎನ್‌ಡಿಎ ಆಯ್ಕೆ ಮಾಡಲಿದೆ. ಈ ಬಗ್ಗೆ ಚರ್ಚೆ ನಡೆದು ಶೀಘ್ರ ಅಂತಿಮ ತೀರ್ಮಾನವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಮಾಹಿತಿ ಕೊಟ್ಟರು.












Click it and Unblock the Notifications