ರಾಹುಲ್ ಗಾಂಧಿ ಪ್ರತಿಕೃತಿ ದಹನ ಯತ್ನ; ಫ್ರೀಡಂ ಪಾರ್ಕ್ ನಲ್ಲಿ ಹೈಡ್ರಾಮಾ
ಬೆಂಗಳೂರು, ಸೆಪ್ಟೆಂಬರ್ 14: ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮೀಸಲಾತಿ ರದ್ದು ಹೇಳಿಕೆ ಖಂಡಿಸಿ ಪ್ರತಿಪಕ್ಷ ಬಿಜೆಪಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ರಾಹುಲ್ ಗಾಂಧಿ ಪ್ರತಿಕೃತಿ ದಹಿಸಲು ಮುಂದಾದಾಗ ಹೈಡ್ರಾಮಾ ನಡೆಯಿತು.
ಈ ವೇಳೆ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ರಾಹುಲ್ ಗಾಂಧಿಯವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷವು ದಲಿತ ವಿರೋಧಿ ಮತ್ತು ಮೀಸಲಾತಿ ವಿರೋಧಿ ಎಂಬುದು ಸಾಬೀತಾಗಿದೆ. ದೇಶದ ಪ್ರಥಮ ಪ್ರಧಾನಿ ನೆಹರೂ ಅವರು ತಾವು ಮೀಸಲಾತಿ ವಿರೋಧಿ ಎಂದಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿಯವರೂ ಅದನ್ನೇ ಮುಂದುವರೆಸಿದ್ದರು. ಈಗ ರಾಹುಲ್ ಗಾಂಧಿಯವರು ಈ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದು ಟೀಕಿಸಿದರು. ನೆಹರೂ- ಇಂದಿರಾ ಗಾಂಧಿ ಕುಟುಂಬವು ಮೀಸಲಾತಿ ವಿರೋಧಿ ಪರಂಪರೆಯನ್ನು ಹೊಂದಿದೆ ಎಂದು ಆಕ್ಷೇಪಿಸಿದರು.

1961ರಲ್ಲಿ ನೆಹರೂ ಅವರು ಈ ದೇಶದಲ್ಲಿ ಯಾವುದೇ ರೀತಿಯ ಮೀಸಲಾತಿಗಳಿಗೆ ತಾವು ವಿರುದ್ಧ ಇರುವುದಾಗಿ ತಿಳಿಸಿದ್ದರು. ಮೀಸಲಾತಿಯಿಂದ ಅಧಿಕಾರ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಕುಂಠಿತ ಆಗಲಿದೆ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು, ನೆಹರೂ ಅವರು ಆ ಕಾಲದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೀಸಲಾತಿ ವಿರೋಧಿಸಿ ಬರೆದ ಪತ್ರವನ್ನು ಸದನದಲ್ಲಿ ಪ್ರಸ್ತಾಪಿಸಿ ಪತ್ರವನ್ನು ಪ್ರದರ್ಶನ ಮಾಡಿದ್ದಾರೆ ಎಂದು ವಿವರಿಸಿದರು.
ನಂತರ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅದೇರೀತಿ ನಡೆದುಕೊಂಡಿದ್ದರು. ಈಗ ರಾಹುಲ್ ಗಾಂಧಿಯವರು ಅದೇ ಮನೋಭಾವವÀನ್ನು ಪ್ರದರ್ಶನ ಮಾಡಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 50 ಸೀಟನ್ನೂ ಗೆದ್ದಿರಲಿಲ್ಲ. ಆಗ, ಕೇವಲ ಸದನದ ನಾಯಕರಾಗಲು ಖರ್ಗೇಜೀ ಅವರಿಗೆ ಆ ಸ್ಥಾನ ಕೊಟ್ಟಿದ್ದರು. 2019ರಲ್ಲೂ ಕಾಂಗ್ರೆಸ್ ಅಧಿಕೃತ ವಿಪಕ್ಷ ಆಗಲಿಲ್ಲ. ಆಗ ಪಶ್ಚಿಮ ಬಂಗಾಲದ ಚೌಧರಿಯನ್ನು ಸದನದ ನಾಯಕರನ್ನಾಗಿ ಮಾಡಿದ್ದರು. ಈಗ ಅಧಿಕೃತ ವಿಪಕ್ಷ ಸ್ಥಾನ ಲಭಿಸಿದಾಗ ಅವರನ್ನೆಲ್ಲ ದೂರ ಮಾಡಿ ತಾವೇ ಆ ಸ್ಥಾನ ಪಡೆದಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ದಲಿತ ವಿರೋಧಿ ಎನ್ನುವ ಕಾಂಗ್ರೆಸ್ಸಿನ ಸಚಿವರು ಈಗ ಯಾರು ದಲಿತ ವಿರೋಧಿ ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಿದೆ ಎಂದು ಸವಾಲು ಹಾಕಿದರು. ಮೀಸಲಾತಿ ಹೆಚ್ಚಿಸಿದವರು ನಾವು; ನೀವಲ್ಲ. ನೀವು ದಲಿತ ವಿರೋಧಿಗಳು ಮತ್ತು ಮೀಸಲಾತಿ ವಿರೋಧಿಗಳು ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ಸಿನವರು ಪಾಪಿಗಳಲ್ಲವೇ?
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ದಲಿತರಿಗೆ ಮೀಸಲಿಟ್ಟ, ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಗಂಗಾ ಕಲ್ಯಾಣ ಯೋಜನೆಯಿಂದ ಆರಂಭಿಸಿ, ಅವರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಚುನಾವಣೆಗೆ ನೇರವಾಗಿ ಬಳಸಿದ್ದೀರಲ್ಲವೇ? ದಲಿತರ ಹಣ ತಿನ್ನಲು ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದರು. ಪಾಪದವರ ಹಣ ತಿಂದ ಎಂಥ ಪಾಪಿಗಳು ನೀವು ಕಾಂಗ್ರೆಸ್‍ನವರು ಎಂದು ಆಕ್ಷೇಪಿಸಿದರು. ನೀವು ಪಾಪಿಗಳಲ್ಲವೇ? ಉತ್ತರ ಕೊಡಿ ಎಂದು ಆಗ್ರಹಿಸಿದರು. ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ್, ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ಗಿರೀಶ್ ಹಾಗೂ ಜಿಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.












Click it and Unblock the Notifications