ಜೆಡಿಎಸ್ ಮೈತ್ರಿಗೆ ಎಸ್‌ಟಿ ಸೋಮಶೇಖರ್ ವಿರೋಧ: ಬಿಜೆಪಿ ತೊರೆಯುವ ಸುಳಿವು ನೀಡಿದ ಯಶವಂತಪುರ ಶಾಸಕ
ಬೆಂಗಳೂರು, ಅಕ್ಟೋಬರ್ 05: ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಯನ್ನು ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್ ವಿರೋಧಿಸಿದ್ದಾರೆ. ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಮೈತ್ರಿಯ ಅಧಿಕೃತ ಘೋಷಣೆಯ ನಂತರ ಬಿಜೆಪಿಯಲ್ಲಿ ಉಳಿದುಕೊಳ್ಳುವ ಬಗ್ಗೆ ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ.
ಕೆಲ ದಿನಗಳಿಂದ ಬಿಜೆಪಿ ತೊರೆಯುವ ಸುಳಿವು ನೀಡುತ್ತಿದ್ದರುವ ಸೋಮಶೇಖರ್, ಜೆಡಿಎಸ್ ಜೊತೆಗಿನ ಮೈತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಹಲವು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾರೂ ಸಾರ್ವಜನಿಕವಾಗಿ ಮಾತನಾಡುತ್ತಿಲ್ಲ. ಆದರೆ ಆಂತರಿಕವಾಗಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಾನು ಆರು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನ್ನ ಕ್ಷೇತ್ರದಲ್ಲಿ ಜೆಡಿಎಸ್ ಪ್ರಮುಖ ಪ್ರತಿಪಕ್ಷವಾಗಿದೆ. 20 ವರ್ಷಗಳಿಂದ ಅವರ ವಿರುದ್ಧ ಹೋರಾಟ ನಡೆಸಿದ್ದು, ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಕಷ್ಟ' ಎಂದು ಹೇಳಿದ್ದಾರೆ.
ವೈಯಕ್ತಿಕವಾಗಿ ನಾನು ಮೈತ್ರಿಯನ್ನು ವಿರೋಧಿಸುತ್ತೇನೆ. ಪಕ್ಷದ ನಾಯಕರು ನನ್ನ ಅಭಿಪ್ರಾಯವನ್ನು ಕೇಳಿದಾಗ ಅದರ ಬಗ್ಗೆ ಮಾತನಾಡುತ್ತೇನೆ ಎಂದು ಸೋಮಶೇಖರ್ ತಿಳಿಸಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್ ಬೆಂಬಲಿಗರೊಂದಿಗೆ ಸಮಾಲೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
'ನಮ್ಮ ಕಾರ್ಯಕರ್ತರು ಮೈತ್ರಿಗೆ ವಿರುದ್ಧವಾಗಿದ್ದಾರೆ. ಎಲ್ಲೇ ಹೋದರೂ ಮೈತ್ರಿ ಬಗ್ಗೆ ನೆಗೆಟಿವ್ ಫೀಡ್ ಬ್ಯಾಕ್ ಬರುತ್ತಿದೆ. ಅವರು ಅಧಿಕೃತವಾಗಿ ಮೈತ್ರಿಯನ್ನು ಘೋಷಿಸಿದಾಗ, ನಾನು ನನ್ನ ಬೆಂಬಲಿಗರನ್ನು ಸಂಪರ್ಕಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಬೆಂಬಲಿಗರಿಲ್ಲದೆ ನಾವು ಶಾಸಕರಾಗಲು ಸಾಧ್ಯವಿಲ್ಲ' ಎಂದು ಸೋಮಶೇಖರ್ ತಿಳಿಸಿದ್ದಾರೆ.
ಯಡಿಯೂರಪ್ಪ ಅವರು ತಮ್ಮ ಆದೇಶದವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂಬುದಾಗಿ ಸೂಚಿಸಿದ್ದಾರೆ ಎಂದು ಸೋಮಶೇಖರ್ ತಿಳಿಸಿದ್ದಾರೆ.
'ನಾನು ಒಂದು ತಿಂಗಳಿಂದ ಮೌನವಾಗಿದ್ದೇನೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಬಿಎಸ್ ಯಡಿಯೂರಪ್ಪನವರು ಹೇಳಿದ್ದಾರೆ. ಅವರು ಸೂಚಿಸಿದ್ದಕ್ಕಾಗಿ ನಾನು ಮಾತನಾಡಿಲ್ಲ. ಯಡಿಯೂರಪ್ಪ ಅವರೊಂದಿಗೆ ಸಮಾಲೋಚಿಸಿದ ನಂತರ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ' ಎಂದು ಯಶವಂತಪುರ ಶಾಸಕರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಸಹ ಸುದ್ದಿಗಾರರೊಂದಿಗೆ ಮಾತನಾಡುವಾಗ ಸೋಮಶೇಖರ್ ಜೊತೆಗಿದ್ದರು.
ಸೋಮಶೇಖರ್ ಮತ್ತು ಹೆಬ್ಬಾರ್ ಅವರು 2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ, ಅವರು ಪಕ್ಷವನ್ನು ತೊರೆಯುವ ಸುಳಿವು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ. ಮೈತ್ರಿ ಕುರಿತು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಇದು ಜೆಡಿಎಸ್‌ನ ಕೆಲ ಮುಖಂಡರು ಹಾಗೂ ಬಿಜೆಪಿಯ ಕೆಲ ನಾಯಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ.












Click it and Unblock the Notifications