ಪಕ್ಷಕ್ಕೆ ಮತ ಕೊಟ್ಟರೆ ಗ್ಯಾರಂಟಿ ಇಲ್ಲ ಬಂದ್: ಕಾಂಗ್ರೆಸ್ ಬ್ಲಾಕ್‌ಮೇಲ್ ವಿರುದ್ಧ ಕಿಡಿಕಾರಿದ ಬಿಜೆಪಿ ಶಾಸಕ
ಬೆಂಗಳೂರು, ಜನವರಿ 31: ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ಬ್ಲಾಕ್‌ಮೇಲ್ ರಾಜಕಾರಣ ಮಾಡುವುದು ಗೊತ್ತಾಗುತ್ತದೆ ಎಂದು ಬಿಜೆಪಿ ಯುವಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟರೆ ಗ್ಯಾರಂಟಿಗಳು ಮುಂದುವರೆಯುತ್ತವೆ. ಇಲ್ಲವಾದರೆ ಅದು ಬಂದ್ ಆಗಲಿದೆ ಎಂದು ಶಾಸಕ ಬಾಲಕೃಷ್ಣ ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ್ದು ಬೋಗಸ್ ಗ್ಯಾರಂಟಿ ಎಂದು ಬಿಜೆಪಿ ವಿಧಾನಸಭೆಯಲ್ಲಿ ಪ್ರತಿಭಟನೆಯನ್ನೂ ಮಾಡಿತ್ತು ಎಂದರು.

ಈ ಹೇಳಿಕೆ ಸಂವಿಧಾನಕ್ಕೆ ನೂರಕ್ಕೆ ನೂರು ವಿರುದ್ಧವಾದುದು. ಅವರು ಕೊಟ್ಟ ಗ್ಯಾರಂಟಿಗಳು ಸರಿಯಾಗಿ ತಲುಪುತ್ತಿವೆಯೇ? ಎಷ್ಟು ಜನ ಬಿಪಿಎಲ್ ಕಾರ್ಡ್‍ದಾರರನ್ನು ಇವತ್ತು ಎಪಿಎಲ್ ಮಾಡಿದ್ದಾರೆ? ಎಂದು ಕೇಳಿದ ಅವರು, ಪ್ರತಿದಿನ ಫುಡ್ ಇನ್‍ಸ್ಪೆಕ್ಟರ್‍ಗಳು, ಫುಡ್ ಶಿರಸ್ತೇದಾರರು ಎಪಿಎಲ್ ಕಾರ್ಡ್‍ದಾರರನ್ನು ಎಪಿಎಲ್ ಕಾರ್ಡ್‍ದಾರರನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರಕಾರವು 5 ಕೆಜಿ ಅಕ್ಕಿ ಕೊಡುತ್ತಿದೆ. ಇವರು 3 ಕೆಜಿ ಅಕ್ಕಿ ನೀಡಿ 2 ಕೆಜಿ ರಾಗಿ ಕೊಡುತ್ತಾರೆ. 5 ಕೆಜಿ ಅಕ್ಕಿ ಕೊಟ್ಟು ಅದರ ಮೇಲೆ 2 ಕೆಜಿ ರಾಗಿ ಕೊಡಬಹುದಲ್ಲವೇ? ದುಡ್ಡು ಕೊಡುತ್ತೇವೆ ಎನ್ನುತ್ತಾರೆ. ಎಷ್ಟು ತಿಂಗಳಿಗೆ ದುಡ್ಡು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಒಂದು ಕಂತು ಬಿಟ್ಟು ಇನ್ಯಾರಿಗಾದರೂ ದುಡ್ಡು ಬಂದಿದೆಯೇ? ನೀವು ಯಜಮಾನಿ ಅಲ್ಲ ಎಂಬಿತ್ಯಾದಿ ನೆಪಗಳನ್ನು ಹೇಳುತ್ತ ಸಂಸತ್ ಚುನಾವಣೆವರೆಗೂ ತಳ್ಳಿಬಿಟ್ಟರು. ಇವತ್ತು ರಾಜ್ಯ, ದೇಶದಲ್ಲಿ ಬಿಜೆಪಿ ಪರ ಅಲೆ ಇದೆ ಎಂದು ಕಾಂಗ್ರೆಸ್ಸಿಗರಿಗೆ ಗೊತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಅದಕ್ಕಾಗಿ ಬಾಲಕೃಷ್ಣರವರು ಅಲ್ಲಿ ಹೋಗಿ ಬ್ಲಾಕ್‌ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

8 ತಿಂಗಳಾದರೂ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರ ಇದ್ದರೂ ಸತ್ತಂತಿದೆ. ದೊಡ್ಡಬಳ್ಳಾಪುರದಲ್ಲಿ ರೈತರು 2 ಸಾವಿರವನ್ನು ಹಿಂತಿರುಗಿಸಲು ಮುಂದಾಗಿದ್ದಾರೆ. ಇವತ್ತು ಒಂದು ಎಕರೆ ಕಟಾವು ಮಾಡಲು 4,500 ರೂ. ಬೇಕು. ಇವರು 2 ಸಾವಿರ ಬರ ಪರಿಹಾರ ಕೊಟ್ಟಿದ್ದಾರೆ. ನಿಮ್ಮ ಭಿಕ್ಷೆ ಅವಶ್ಯಕತೆ ಇಲ್ಲ ಎಂದು ಕೆಲವು ರೈತರು ಹೇಳುವಂಥ ಪರಿಸ್ಥಿತಿಗೆ ಇವರು ರೈತರನ್ನು ತಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಅವರ ಸ್ವಾಭಿಮಾನ ಕೆಣಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಬರಕ್ಕೂ ಪರಿಹಾರ ಇಲ್ಲ. ಅಭಿವೃದ್ಧಿಗೂ ಅನುದಾನ ಇಲ್ಲ. ಅವಶ್ಯಕತೆ ಇರುವ ಕಾಮಗಾರಿಗಳಿಗೆ ದುಡ್ಡು ಬಿಡುಗಡೆ ಮಾಡುತ್ತಿಲ್ಲ. ಈ ರೀತಿ ಸರ್ಕಾರ ಇದ್ದರೂ ಇಲ್ಲದೇ ಇರುವ ಸ್ಥಿತಿ ಇದೆ ಎಂದು ತಿಳಿಸಿದರು. ಕಾಂಗ್ರೆಸ್ ತನ್ನ ಶಾಸಕರ ಹೇಳಿಕೆ ಮೂಲಕ ಸೋಲನ್ನು ಒಪ್ಪಿಕೊಂಡಂತಾಗಿದೆ. ಈ ರೀತಿ ಬ್ಲಾಕ್‌ಮೇಲ್ ರಾಜಕಾರಣ, ಜನರನ್ನು ಹೆದರಿಸುವ ಕಾರ್ಯ ಮಾಡಲಾಗುತ್ತಿದೆ. ಈ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರಕಾರ ಉಳಿಯುವುದಿಲ್ಲ ಎಂದು ತಿಳಿಸಿದರು.











Click it and Unblock the Notifications