ಜಿಲ್ಲಾಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸೇವೆ ಸ್ಥಗಿತ; ಸರ್ಕಾರದ ವಿರುದ್ಧ ಕೆರಳಿದ ಯತ್ನಾಳ್
ರಾಜ್ಯ ಸರ್ಕಾರ ಕಳೆದ ಆರು ತಿಂಗಳಿನಿಂದ ಬಾಕಿ ಬಿಲ್ ಪಾವತಿಸದ ಕಾರಣ ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ಸೇವೆಯನ್ನು ಖಾಸಗಿ ಸಂಸ್ಥೆ ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ನಿಮ್ಮ ನಿರ್ಲಕ್ಷ್ಯದಿಂದ ಬಡ ರೋಗಿಗಳಿಗೆ ತೀವ್ರ ಅನಾನುಕೂಲವಾಗಿದೆ. ಸಕಾಲಕ್ಕೆ ಬಿಲ್ ಪಾವತಿ ಮಾಡಿದ್ದರೆ ಈ ರೀತಿಯಾದ ಸನ್ನಿವೇಶ ಬರುತ್ತಿರಲಿಲ್ಲ ಎಂದು ದೂರಿದ್ದಾರೆ. ಬಡವರಿಗೆ ಸಮರ್ಪಕವಾದ ಸೇವೆ ನೀಡಬೇಕಾಗಿದ್ದ ಜಿಲ್ಲಾಸ್ಪತ್ರೆಗಳು ಈ ರೀತಿ ಅಸಹಾಯಕವಾಗಿರುವುದಕ್ಕೆ ನಿಮ್ಮ ಸರ್ಕಾರದ ವೈಫಲ್ಯವೇ ಕಾರಣ. ಕೂಡಲೇ ಬಿಲ್ ಪಾವತಿಸಿ ಸೇವೆಯನ್ನು ನೀಡಲು ಸಂಬಂಧಪಟ್ಟವರಿಗೆ ಸೂಚಿಸಿ' ಎಂದು ಆಗ್ರಹಿಸಿದ್ದಾರೆ.

'ಯತ್ನಾಳ್ ಅವರು ಹೇಳುವಂತೆ, ಕರ್ನಾಟಕದ 14 ಜಿಲ್ಲಾ ಆಸ್ಪತ್ರೆಗಳಲ್ಲಿ ಸಿ.ಟಿ ಮತ್ತು ಎಂಆರ್‌ಐ ಸ್ಕ್ಯಾನ್ ಸೇವೆಗಳನ್ನು ಒದಗಿಸುತ್ತಿದ್ದ ಕೃಷ್ಣ ಡಯಾಗ್ನೋಸ್ಟಿಕ್ಸ್ ಕಳೆದ 6 ತಿಂಗಳಿಂದ ಬಿಲ್ ಪಾವತಿ ಮಾಡದ ಕಾರಣ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿದೆ. ಈ ಸೇವೆಗಳನ್ನು ಒದಗಿಸಲು ಕೃಷ್ಣಾ ಡಯಾಗ್ನೋಸ್ಟಿಕ್ಸ್ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರಂತೆ ಈ ಸಂಸ್ಥೆಯು 14 ಜಿಲ್ಲಾ ಆಸ್ಪತ್ರೆಗಳಲ್ಲಿ ಕಳೆದ 6 ವರ್ಷಗಳಿಂದ ಸಿ.ಟಿ ಸ್ಕ್ಯಾನ್ ಸೇವೆಗಳನ್ನು ಮತ್ತು 5 ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಒದಗಿಸಿದೆ' ಎಂದು ಮಾಹಿತಿ ನೀಡಿದ್ದಾರೆ.
'ಕೋಲಾರ, ತುಮಕೂರು, ಚಿತ್ರದುರ್ಗ, ವಿಜಯಪುರ, ಉತ್ತಕನ್ನಡ, ಚಿಕ್ಕಮಗಳೂರು, ಧಾರವಾಡ, ಕೊಡಗು, ಚಾಮರಾಜನಗರ, ದಾವಣಗೆರೆ, ಹಾವೇರಿ, ಯಾದಗಿರಿ, ಉಡುಪಿ ಮತ್ತು ಬಾಗಲಕೋಟ ಜಿಲ್ಲಾಸ್ಪತ್ರೆಗಳಲ್ಲಿ ಕೃಷ್ಣಾ ಡಯಾಗ್ನೋಸ್ಟಿಕ್ಸ್ ಸೇವೆ ನೀಡುತ್ತಿತ್ತು. ಆದರೆ ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ ಹಣವನ್ನು ಪಾವತಿಯಾಗಿಲ್ಲ ಎಂದು ಪತ್ರ ಕೂಡ ಬರೆದಿದ್ದು, ನಿನ್ನೆಯಿಂದ ತನ್ನ ಸೇವೆಗಳನ್ನು ನಿಲ್ಲಿಸುವುದಾಗಿ ಎಚ್ಚರಿಕೆ ಕೂಡ ನೀಡಿತ್ತು'.
'ಸರ್ಕಾರ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಈ ಬಿಕ್ಕಟ್ಟು ಎದುರಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್‌ಗಳನ್ನು ಬಡವರು ಪಡೆಯುತ್ತಾರೆ. ಸೇವಾ ಪೂರೈಕೆದಾರರಿಗೆ ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸಲಾಗಿದೆಯೇ ಎಂಬುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಆದರೆ, ಸರ್ಕಾರಕ್ಕೆ ಸಂಸ್ಥೆಯವರೇ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಹಾಗಾಗಿ ಬಡವರು ಮತ್ತು ಗಂಭೀರ ಸ್ಥಿತಿಯಲ್ಲಿರುವವರು ಈಗ ದುಬಾರಿ ಸೇವಾ ಶುಲ್ಕವನ್ನು ಪಾವತಿಸಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕು' ಎಂದು ದೂರಿದ್ದಾರೆ.

'ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ತಡೆರಹಿತವಾಗಿ ಸಿ.ಟಿ. ಸ್ಕ್ಯಾನ್ ಹಾಗೂ ಎಂಆರ್‌ಐ ಸೇವೆಗಳನ್ನು ಸಮರ್ಪಕವಾಗಿ ಸಿಗುವಂತೆ ಮಾಡಬೇಕು. ಹೈಕಮಾಂಡ್ ಜೊತೆಗಿನ ಮೀಟಿಂಗ್‌ಗಳಿಂದ ಹೊರಬಂದು ಮೊದಲು ಈ ಕೆಲಸದ ಕಡೆಗೆ ಗಮನ ನೀಡಿ' ಎಂದು ಮಾತಿನಲ್ಲೇ ತಿವಿದಿದ್ದಾರೆ.












Click it and Unblock the Notifications