ಪರಿಷತ್ ಸಭಾಪತಿ ವಿರುದ್ಧ ಬಿಜೆಪಿಯಿಂದ ಅವಿಶ್ವಾನ ನಿರ್ಣಯ!
ಬೆಂಗಳೂರು, ನವೆಂಬರ್ 26: ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಆಡಳಿತ ಪಕ್ಷ ಬಿಜೆಪಿ ಸದಸ್ಯರು ಮುಂದಾಗಿದ್ದಾರೆ. 2018ರ ಡಿಸೆಂಬರ್ 12ರಿಂದ ಪ್ರತಾಪ್ ಚಂದ್ರ ಶೆಟ್ಟಿ ಸಭಾಪತಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅಧಿವೇಶನ ಆರಂಭವಾದಾಗ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ಶಾಸಕಾಂಗ ಕರ್ತವ್ಯ ನಿರ್ವಹಣೆಯಲ್ಲಿ ಪಕ್ಷಪಾತಿಯಾಗಿದ್ದಾರೆ ಎಂಬ ನೆಪವೊಡ್ಡಿ ನಿರ್ಣಯ ಮಂಡನೆ ಮಾಡಲಾಗುತ್ತದೆ.
ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ವಿಚಾರದಲ್ಲಿ ಬಿಜೆಪಿ ಸದಸ್ಯರು ಈಗಾಗಲೇ ವಿಧಾನ ಪರಿಷತ್ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆ. ಪ್ರಸ್ತುತ 75 ಸದಸ್ಯ ಬಲದ ವಿಧಾನ ಪರಿಷತ್‌ನಲ್ಲಿ ಎಲ್ಲಾ ಸ್ಥಾನವೂ ಭರ್ತಿಯಾಗಿದೆ.

ಡಿಸೆಂಬರ್ 7ರಿಂದ 15ರ ತನಕ ವಿಧಾನಮಂಡಲ ಅಧಿವೇಶನ ನಡೆಯಲಿದೆ. ವಿಧಾನ ಪರಿಷತ್‌ನಲ್ಲಿ ಆಡಳಿತ ಪಕ್ಷ ಬಿಜೆಪಿ 31 ಸದಸ್ಯ ಬಲವನ್ನು ಹೊಂದಿದ್ದು, ಅವಿಶ್ವಾಸ ನಿರ್ಣಯವನ್ನು ಗೆಲ್ಲಲು 7 ಮತಗಳ ಕೊರತೆ ಎದುರಾಗಲಿದೆ. ಅವಿಶ್ವಾಸ ನಿರ್ಣಯದಲ್ಲಿ ಬಿಜೆಪಿ ಗೆದ್ದರೆ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಸಭಾಪತಿ ಸ್ಥಾನ ಕಳೆದುಕೊಳ್ಳಲಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ 29, ಜೆಡಿಎಸ್ 14 ಸದಸ್ಯ ಬಲವನ್ನು ಹೊಂದಿದೆ. ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಹಲವು ಬಿಜೆಪಿ ಎಂಎಲ್‌ಸಿಗಳು ಸಹಿ ಮಾಡಿ ಪತ್ರವನ್ನು ಕಾರ್ಯದರ್ಶಿಗಳಿಗೆ ನೀಡಿದ್ದಾರೆ.












Click it and Unblock the Notifications