ನಟಿ ರನ್ಯಾ ರಾವ್‌ಗೂ ಸಚಿವ ಪರಮೇಶ್ವರ್‌ಗೂ ಇದೆ ನಂಟು: ಬಿಜೆಪಿ ಹೇಳಿದ್ದೇನು?
ಗೃಹ ಸಚಿವ ಜಿ.ಪರಮೇಶ್ವರ್ ಅವರ ಒಡೆತನದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಯಲವು (ಇಡಿ) ದಿಢೀರ್ ದಾಳಿ ನಡೆಸಿ ಶಾಕ್ ಕೊಟ್ಟಿದೆ. ಮತ್ತೊಂದೆಡೆ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲುಪಾಲಾಗಿರುವ ಸ್ಯಾಂಡಲ್‌ವುಡ್ ನಟಿ ರನ್ಯಾರಾವ್‌ಗೂ ಜಿ.ಪರಮೇಶ್ವರ್ ಅವರ ಮೇಲಿನ ಇಡಿ ದಾಳಿಗೂ ಸಂಬಂಧ ಇದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಹೊಸ ಬಾಂಬ್ ಸಿಡಿಸಿವೆ.
ರನ್ಯಾರಾವ್ ಅವರ ಅಕ್ರಮ ಚಿನ್ನ ಸಾಗಣೆಗೂ, ಆಕಸ್ಮಿಕ ಗೃಹ ಸಚಿವ ಜಿ.ಪರಮೇಶ್ವರ್ ಅವರ ತುಮಕೂರಿನ ಸಿದ್ದಾರ್ಥ ಕಾಲೇಜಿಗೂ ನಂಟಿದೆ ಎಂಬುದು ಇಡಿ ದಾಳಿಯಿಂದ ಬೆಳಕಿಗೆ ಬಂದಿದೆ. ಗೃಹ ಸಚಿವ ಪರಮೇಶ್ವರ್ ಅವರು ಈ ಘಟನೆಯನ್ನು ಆಕಸ್ಮಿಕ ಎನ್ನುತ್ತಾರೋ ಅಥವಾ ತಾವೊಬ್ಬ ಅಮಾಯಕ ಅನ್ನುತ್ತಾರೋ, ಇದು ಮಕ್ಕಳಾಟ ಎಂದು ಹೇಳುತ್ತಾರೋ ಎಂಬುದೇ ಸದ್ಯದ ಮಟ್ಟಿಗಿನ ಕುತೂಹಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಗೃಹ ಸಚಿವ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ತಂಡ ದಾಳಿ ಮಾಡಿದೆ. ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಗೃಹ ಸಚಿವ ಪರಮೇಶ್ವರ್ ಅವರ ಪಾತ್ರವೂ ಇರುವುದು ಇಡಿ ದಾಳಿಯಿಂದ ಬಯಲಾಗುತ್ತಿದೆ. ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ನಟಿ ರನ್ಯಾಗೂ, ಗೃಹ ಸಚಿವರ ಸಿದ್ಧಾರ್ಥ ಕಾಲೇಜಿನ ನಡುವೆ ಅಕ್ರಮವಾಗಿ ಹಣಕಾಸಿನ ವರ್ಗಾವಣೆ ನಡೆದಿದೆ. ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಮಾಡಿ ಗಳಿಸಿರುವ ಹಣದ ಹೂಡಿಕೆಗಳ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಕೂಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಈ ಹಿಂದೆ ರನ್ಯಾ ರಾವ್ ಪ್ರಭಾವಿ ಸಚಿವರ ಜೊತೆ ನಂಟು ಹೊಂದಿದ್ದಾರೆ. ಈ ಚಿನ್ನ ಸ್ಮಗ್ಲಿಂಗ್ ಕೇಸ್‌ನಲ್ಲಿ ರಾಜಕಾರಣಿಗಳ ಪಾತ್ರವೂ ಇದೆ ಎಂದು ಹೇಳಲಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಇದೀಗ ಗೃಹ ಸಚಿವ ಜಿ.ಪರಮೇಶ್ವರ್ ಅವರ ಹೆಸರು ತಳುಕು ಹಾಕಿಕೊಂಡಿದೆ. ಇದೇ ಕಾರಣಕ್ಕೆ ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿದೆ ಎಂದು ವಿಪಕ್ಷಗಳು ದೂರುತ್ತಿವೆ.
ಚಿತ್ರನಟಿ ರನ್ಯಾ ರಾವ್‌ಗೆ ಜಾಮೀನು
ದುಬೈನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲು ಸೇರಿರುವ ಚಿತ್ರನಟಿ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಪುತ್ರಿ ರನ್ಯಾ ರಾವ್, ಆಕೆಯ ಸಹಚರರಿಗೆ ವಿಚಾರಣಾ ನ್ಯಾಯಾಲಯವು ನಿನ್ನೆಯಷ್ಟೇ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನು ಮಂಜೂರಾದರೂ ಬೇರೆ ಪ್ರಕರಣಗಳ ತನಿಖೆ ನಡೆಯುತ್ತಿರುವುದರಿಂದ ರನ್ಯಾ ಅವರಿಗೆ ಸದ್ಯ ಜೈಲಿನಿಂದ ಬಿಡುಗಡೆ ಭಾಗ್ಯವಿಲ್ಲ. ಇತ್ತ ಪರಮೇಶ್ವರ್ ಅವರ ಇಡಿ ದಾಳಿಯ ಹಿಂದೆಯೂ ಇದೇ ಕೇಸ್ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಚಿನ್ನ ಕಳ್ಳ ಸಾಗಾಣಿಕೆ ಮಾಡಿ ಸಿಕ್ಕಿಬಿದ್ದಿದ್ದ ರನ್ಯಾ ರಾವ್ ನಿವಾಸ ಮೇಲೆ ಈ ಹಿಂದೆ ಇಡಿ ದಾಳಿ ನಡೆಸಿತ್ತು. ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳು ಸಿಕ್ಕಿದ್ದವು. ಇದರ ಆಧಾರದ ಮೇಲೆಯೇ ಸಚಿವ ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇಡಿ ದಾಳಿಯ ತನಿಖೆ ಪೂರ್ತಿ ಆದ ಮೇಲೆ ನಾವು ಪರಮೇಶ್ವರ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ. ಮುಂದಿನ ಹೋರಾಟದ ಬಗ್ಗೆಯೂ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ ಎಂದು ಬಿಜೆಪಿ ನಾಯಕ ಆರ್.ಅಶೋಕ್ ಹೇಳಿದ್ದಾರೆ.












Click it and Unblock the Notifications