ಕುತೂಹಲ ಮೂಡಿಸಿದ ಯತ್ನಾಳ್, ಸಿಪಿವೈ ಮೈಸೂರು ಭೇಟಿ
ಮೈಸೂರು, ಜುಲೈ 06; ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಮತ್ತೊಂದು ಹಂತದ ಕಸರತ್ತು ಶುರುವಾಗಿದ್ದು, ಮೈಸೂರಿನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯೇ ಗಮನಿಸಿದರೆ ಸಿಎಂ ಬದಲಾವಣೆ ಪ್ರಯತ್ನಕ್ಕೆ ಮೈಸೂರಿನಿಂದಲೇ ಮತ್ತೊಂದು ಹಂತದ ಕಸರತ್ತು ಶುರುವಾಗಿದೆಯೇ? ಎಂಬ ಅನುಮಾನ ಮೂಡುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ದೊಡ್ಡಮಟ್ಟದ ಚರ್ಚೆ ಹಾಗೂ ಗೊಂದಲಕ್ಕೆ ಕಾರಣವಾಗಿದ್ದ ನಾಯಕತ್ವ ಬದಲಾವಣೆ ಕೂಗು ತಣ್ಣಗಾಗಿತ್ತು. ಕರ್ನಾಟಕಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಹಲವು ನಾಯಕರೊಂದಿಗೆ ಚರ್ಚಿಸಿ, ಎಲ್ಲಾ ಗೊಂದಲಕ್ಕೆ ತೆರೆಎಳೆಯುವ ಪ್ರಯತ್ನ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿಯ ಹಲವು ನಾಯಕರು 'ನಾಯಕತ್ವ ಬದಲಾವಣೆ' ಮುಗಿದ ಅಧ್ಯಾಯ ಎನ್ನುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆಎಳೆಯುವ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಮೈಸೂರಿನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ನಾಯಕತ್ವ ಬದಲಾವಣೆಗೆ ಮತ್ತೊಂದು ಸುತ್ತಿನ ಪ್ರಯತ್ನ ಶುರುವಾಗಿರುವ ಅನುಮಾನಗಳು ದಟ್ಟವಾಗುತ್ತಿದೆ.
ಪ್ರಮುಖವಾಗಿ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಮೊದಲ ಬಾರಿಗೆ ಧ್ವನಿಎತ್ತಿದ್ದ ಸಚಿವ ಸಿ. ಪಿ. ಯೋಗೀಶ್ವರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೈಸೂರು ಭೇಟಿ, ದೊಡ್ಡಮಟ್ಟದ ಕುತೂಹಲ ಮೂಡಿಸಿದೆ.

ಶ್ರೀನಿವಾಸ್ ಪ್ರಸಾದ್, ಸಿಪಿವೈ ಮೀಟಿಂಗ್
ಭಾನುವಾರ ದಿಢೀರನೆ ಮೈಸೂರಿಗೆ ಆಗಮಿಸಿದ್ದ ಸಚಿವ ಯೋಗೀಶ್ವರ್, ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿಯಾಗಿ ರಾಜಕೀಯ ಬೆಳವಣಿಗೆಗಳ ಕುರಿತು ಸಾಕಷ್ಟು ಚರ್ಚೆ ನಡೆಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, "ಬದಲಾವಣೆ ಜಗದ ನಿಯಮ, ಅರ್ಜುನ, ಅಭಿಮನ್ಯು ಕೆಲವು ವರ್ಷ ಅಂಬಾರಿ ಹೊತ್ತರು, ಅಪ್ಪ ಹೊತ್ತ ಅಂತ ಮರಿ ಆನೆಗೆ ಅಂಬಾರಿ ಹೊರಿಸೋಕೆ ಆಗಲ್ಲ" ಎಂದು ಮಾರ್ಮಿಕವಾಗಿ ಹೇಳುವ ಮೂಲಕ ನಾಯಕತ್ವ ಬದಲಾವಣೆ ಪ್ರಯತ್ನ ಇನ್ನೂ ಜೀವಂತವಾಗಿದೆ ಎಂಬ ಸುಳಿವು ಕೊಟ್ಟಿದ್ದರು.

ಚಾಮುಂಡಿ ಬೆಟ್ಟಕ್ಕೆ ಯತ್ನಾಳ್ ಭೇಟಿ
ಇನ್ನೂ ರಾಜ್ಯ ಅನ್‌ಲಾಕ್ ಆಗುತ್ತಿದ್ದಂತೆ ಮೊದಲ ದಿನವೇ ಮೈಸೂರಿಗೆ ಆಗಮಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಡೀ ದಿನ ಮೈಸೂರಿನಲ್ಲಿ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಚರ್ಚೆಗಳನ್ನು ಸಹ ನಡೆಸಿದರು. ಚಾಮುಂಡಿ ತಾಯಿಯ ದರ್ಶನದೊಂದಿಗೆ ತಮ್ಮ ಮೈಸೂರು ಪ್ರವಾಸ ಆರಂಭಿಸಿದ ಅವರು, ನಂತರ ಪಂಚಮಸಾಲಿ ಮಠದ ಮೃತ್ಯುಂಜಯ ಸ್ವಾಮೀಜಿ ಹಾಗೂ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಭೇಟಿಯಾಗಿ ಮಹತ್ವದ ವಿಷಯಗಳನ್ನು ಚರ್ಚಿಸಿದರು.

ಯತ್ನಾಳ್-ಪಂಚಮಸಾಲಿ ಶ್ರೀ ಭೇಟಿ
ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್, "ದುಷ್ಟರ ಸಂಹಾರ ಆಗಬೇಕು" ಎನ್ನುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುವ ಜೊತೆಗೆ ನಾಯಕತ್ವ ಬದಲಾವಣೆ ಆಗಲೇಬೇಕು ಎನ್ನುವ ಮೂಲಕ ಸಿಎಂ ಬದಲಾವಣೆ ಪ್ರಯತ್ನ ಇನ್ನೂ ಜೀವಂತವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದರು. ಇವರ ಬೆನ್ನಲ್ಲೇ ಮೈಸೂರಿಗೆ ಆಗಮಿಸಿದ್ದ ಪಂಚಮಸಾಲಿ ಮಠದ ಶ್ರೀಗಳು ಸಹ ನಾಯಕತ್ವ ಬದಲಾವಣೆ ವಿಷಯವನ್ನ ಪ್ರಸ್ತಾಪಿಸುವ ಜೊತೆಗೆ, ಒಂದೊಮ್ಮೆ ಬದಲಾವಣೆ ಆದಲ್ಲಿ ತಮ್ಮ ಸಮುದಾಯದ, ಉತ್ತರ ಕರ್ನಾಟಕ ಭಾಗದವರಿಗೆ ಸಿಎಂ ಪಟ್ಟ ನೀಡುವ ಬೇಡಿಕೆಯನ್ನು ಸಹ ಮುಂದಿಟ್ಟರು.
Recommended Video

ವಿಶ್ವನಾಥ್, ಯತ್ನಾಳ್ ಗೌಪ್ಯ ಮಾತುಕತೆ
ಯಡಿಯೂರಪ್ಪ ವಿರುದ್ಧ ದೊಡ್ಡಮಟ್ಟದ ಅಸಮಾಧಾನ ಹೊಂದಿರುವ ಎಚ್. ವಿಶ್ವನಾಥ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾದ ಈ ಇಬ್ಬರು ನಾಯಕರು, ಹಲವು ಗಂಟೆಗಳ ಗೌಪ್ಯ ಮಾತುಕತೆ ನಡೆಸಿದ್ದು, ಬಿಜೆಪಿ ಪಾಳಯದಲ್ಲಿ ಕುತೂಹಲ ಮೂಡಿಸಿದೆ. ಯತ್ನಾಳ್ ಭೇಟಿ ಬಳಿಕ ಮಾತನಾಡಿದ ವಿಶ್ವನಾಥ್, "ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲೇಬೇಕು, ಖಂಡಿತವಾಗಿ ಬದಲಾಗುತ್ತಾರೆ" ಎಂದಿದ್ದಾರೆ.
ಒಟ್ಟಾರೆ ಮೈಸೂರಿನಲ್ಲಿ ನಡೆದ ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಇನ್ನೂ ಕಸರತ್ತು ನಡೆಯುತ್ತಿದೆ ಅನ್ನೋದು ಸಾಬೀತಾಗಿದ್ದು, ಯಡಿಯೂರಪ್ಪ ವಿರೋಧಿಗಳ ಈ ಎರಡನೇ ಸುತ್ತಿನ ಪ್ರಯತ್ನಕ್ಕೆ ಮೈಸೂರಿನಿಂದಲೇ ಮುಹೂರ್ತ ನಿಗದಿ ಮಾಡಲಾಗಿದ್ದು, ಈ ಎಲ್ಲಾ ಬೆಳವಣಿಗೆ ಬಿಜೆಪಿಯಲ್ಲಿ ಯಾವಮಟ್ಟದ ಗೊಂದಲ ಅಥವಾ ಬದಲಾವಣೆಗೆ ಕಾರಣ ಆಗುತ್ತೇ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications