ಜನವರಿ 7 ರಿಂದ 9ರ ತನಕ ಕರ್ನಾಟಕ ಬಿಜೆಪಿ ಮಹತ್ವದ ಸಭೆ!
ಬೆಂಗಳೂರು, ಜನವರಿ 03; ಕರ್ನಾಟಕ ಬಿಜೆಪಿ ನಾಯಕರ ಮಹತ್ವದ ಸಭೆ ಜನವರಿ 7 ರಿಂದ 9ರ ತನಕ ನಡೆಯಲಿದೆ. 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಕ್ಷದ ತಯಾರಿಗಾಗಿ ಸಭೆ ನಡೆಸಲಾಗುತ್ತಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಬಿಜೆಪಿ ನಾಯಕರು, ಸಚಿವರ ಮಹತ್ವದ ಸಭೆ ಜನವರಿ 7 ರಿಂದ 9ರ ತನಕ ನಡೆಯಲಿದೆ. ಪಕ್ಷ ಮತ್ತು ಸರ್ಕಾರದ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ" ಎಂದು ಹೇಳಿದ್ದಾರೆ.
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ 2023ರ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ? ಎಂಬುದು ಕರ್ನಾಟಕ ಬಿಜೆಪಿಯಲ್ಲಿನ ಪ್ರಶ್ನೆಯಾಗಿದೆ. ಹೈಕಮಾಂಡ್ ನಾಯಕರು ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ.

ಸಿ. ಟಿ. ರವಿ ಈ ಕುರಿತು ಮಾತನಾಡಿದ್ದು, "ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಈಗ ನಾವು ಹಿಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನೆಗಳ ಬಗ್ಗೆ ಮಾತ್ರ ಚರ್ಚಿಸಲಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಹಿರಿಯ ನಾಯಕರು, ಸಚಿವರ ಸಭೆಯಲ್ಲಿ ವಿಧಾನ ಪರಿಷತ್ ಸೇರಿದಂತೆ ವಿವಿಧ ಚುನಾವಣೆಯಲ್ಲಿನ ಪಕ್ಷದ ಸಾಧನೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ವಿಧಾನಸಭೆ ಉಪ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ವಿಮರ್ಶೆ ನಡೆಯಲಿದೆ.
ಸಂಕ್ರಾಂತಿ ನಂತರ ಸಚಿವ ಸಂಪುಟ ವಿಸ್ತರಣೆ ಅಥವ ಪುನಾರಚನೆಯಾಗಲಿದೆ ಎಂಬ ಸುದ್ದಿಗಳು ಹಬ್ಬಿವೆ. ಇಂತಹ ಸಂದರ್ಭದಲ್ಲಿಯೇ ಪಕ್ಷದ ಮಹತ್ವದ ಸಭೆ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ಎರಡು ದಿನಗ ರಾಜ್ಯ ಕಾರ್ಯಕಾರಣಿ ಸಭೆ ಕಳೆದ ವಾರ ನಡೆದಿದ್ದು, ಬಳಿಕ ಈ ಮಹತ್ವದ ಸಭೆ ನಡೆಯುತ್ತಿದೆ.
ಎಲ್ಲಿ ನಡೆಯಲಿದೆ ಸಭೆ?; ಚಿಕ್ಕಬಳ್ಳಾಪುರದಲ್ಲಿರುವ ನಂದಿ ಗಿರಿಧಾಮದಲ್ಲಿ ಈ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಚಿವರು, ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜೆ. ಪಿ. ನಡ್ಡಾ ಮುಖ್ಯಮಂತ್ರಿಗಳು ಮತ್ತು ಸಚಿವರ ಜೊತೆ ಪ್ರತ್ಯೇಕ ಸಭೆಯನ್ನು ನಡೆಸಲಿದ್ದಾರೆ ಎಂಬ ಮಾಹಿತಿಯೂ ಇದೆ. ಪಕ್ಷ ಸಂಘಟನೆ, ಮುಂದಿನ ಚುನಾವಣೆ ಸಿದ್ಧತೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವುದರಿಂದ ಬಿಜೆಪಿ ಈ ಚಿಂತನಾ ಸಭೆ ಆಯೋಜನೆ ಮಾಡಿದೆ. ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಹ ಆಹ್ವಾನ ನೀಡಲಾಗಿದೆ. ಆದರೆ ಅಮಿತ್ ಶಾ ಭೇಟಿ ಇನ್ನೂ ಖಚಿತವಾಗಿಲ್ಲ.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಜನವರಿ 9 ರಿಂದ 19ರ ತನಕ ಕರ್ನಾಟಕ ಕಾಂಗ್ರೆಸ್ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಜೆಡಿಎಸ್ ಪಕ್ಷ ಈಗಾಗಲೇ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬಿಡದಿಯಲ್ಲಿ ಮಿಷನ್ 123 ಎಂಬ ಹೆಸರಿನಲ್ಲಿ ಕಾರ್ಯಾಗಾರ ಮಾಡುವ ಮೂಲಕ ಚುನಾವಣಾ ತಯಾರಿಗೆ ಚಾಲನೆ ನೀಡಿದೆ. ಬಿಜೆಪಿ ಸಹ ಈಗ ಚುನಾವಣೆ ತಯಾರಿ ಆರಂಭಿಸಿದ್ದು, ಸರಣಿ ಸಭೆಗಳನ್ನು ನಡೆಸುತ್ತಿದೆ.












Click it and Unblock the Notifications