ಕನ್ನಡ ನಟರಿಗೆ ನಟ್ಟು ಬೋಲ್ಟು ಟೈಟ್, ಕಮಲ್ ಹಾಸನ್ ವಿಚಾರಕ್ಕೆ ಏಕೆ ಲಿಮಿಟ್?
ಕಮಲ್ ಹಾಸನ್ ಕನ್ನಡ ವಿವಾದದ ಕುರಿತಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಈ ವಿಚಾರದಲ್ಲಿ ನಮ್ಮವರೂ ಲಿಮಿಟ್‌ನಲ್ಲಿರಬೇಕು ಎಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವಾಗ್ದಾಳಿ ನಡೆಸಿದ್ದು, ಈ ಹಿಂದೆ ಕನ್ನಡ ಚಿತ್ರರಂಗದರ ನಟ್ಟು ಬೋಲ್ಟು ಟೈಟ್ ಮಾಡುವ ಹೇಳಿಕೆಯನ್ನು ಉಲ್ಲೇಖಿಸಿ ಟಾಂಗ್ ನೀಡಿದ್ದಾರೆ. ಕಮಲ್ ಹಾಸನ್ ವಿಚಾರವಾಗಿ ಜಾಣಮೌನ ವಹಿಸುತ್ತಿರುವುದು ಏಕೆ? ಎಂದು ಡಿಕೆ ಶಿವಕುಮಾರ್ ಅವರನ್ನ ಅಶೋಕ್ ಪ್ರಶ್ನಿಸಿದ್ದಾರೆ.
ಕನ್ನಡ ಚಿತ್ರರಂಗದ ಕಲಾವಿದರ ನಟ್ಟು ಬೋಲ್ಟು ಟೈಟ್ ಮಾಡುವ ಧಮ್ಕಿ ಹಾಕಿದ್ದಾಯ್ತು, ಈಗ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದ ತಮಿಳು ನಟ ಕಮಲ್ ಹಾಸನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಕನ್ನಡಿಗರು ಲಿಮಿಟ್‌ನಲ್ಲಿರಬೇಕು ಎಂದು ಕರ್ನಾಟಕದ ಜನತೆಗೆ ನೀತಿ ಪಾಠ ಹೇಳುತ್ತಿದ್ದಾರೆ ಸನ್ಮಾನ್ಯ ಡಿಸಿಎಂ ಡಿಕೆ ಶಿವಕುಮಾರ್ ಸಾಹೇಬರು ಎಂದು ಕಿಡಿಕಾರಿದ್ದಾರೆ.

ಸ್ವಾಮಿ ಡಿ.ಕೆ.ಶಿವಕುಮಾರ್ ಅವರೇ, ಕಮಲ್ ಹಾಸನ್ ಅಂದರೆ ಅಷ್ಟೊಂದು ಸಾಫ್ಟ್ ಕಾರ್ನರ್ ಯಾಕೆ ಸ್ವಾಮಿ? ಕಮಲ್ ಹಾಸನ್ ಅವರು ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಪರಮಮಿತ್ರ ಎಂದೋ? ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕಿದ ಮಾತ್ರಕ್ಕೆ ಕಮಲ್ ಹಾಸನ್ ಅವರು ಏನು ಹೇಳಿದರೂ ಕನ್ನಡಿಗರು ಸುಮ್ಮನಿರಬೇಕಾ? ನಿಮ್ಮಂತಹ ನಾಡದ್ರೋಹಿ ನಾಯಕರು ಈ ನಾಡಿನ ಮುಖ್ಯಮಂತ್ರಿಯಾಗಲು ಹೊರಟಿರುವುದು ಕರ್ನಾಟಕದ ದುರಂತ ಎಂದಿದ್ದಾರೆ.
ನಮ್ಮವರೂ ಲಿಮಿಟ್‌ನಲ್ಲಿರಬೇಕು: ಡಿಕೆಶಿ
ಕಮಲ್ ಹಾಸನ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಕನ್ನಡಪರ ಸಂಘಟನೆಗಳು ಜಾಗರೂಕತೆಯಿಂದ ಇರಬೇಕು. ಕಮಲ್ ಹಾಸನ್ ಪರ ನಾವು ಸಾಫ್ಟ್ ಕಾರ್ನರ್ ತೋರುತ್ತಿಲ್ಲ. ಈ ವಿಚಾರ ಈಗ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿ ಏನು ತೀರ್ಪು ಬರುತ್ತೆದೆಯೋ ಅದನ್ನ ನಾವು ಪಾಲಿಸಬೇಕು ಎಂದು ಹೇಳಿದ್ದಾರೆ.
ಕಮಲ್ ಹಾಸನ್ ಅವರು ಕೂಡ ವೈಯಕ್ತಿಕವಾಗಿ ಬಹಳ ಹಠದಲ್ಲಿದ್ದಾರೆ. ಇಲ್ಲಿ ನಮ್ಮವರು ಕೂಡ ಸ್ವಲ್ಪ ಲಿಮಿಟ್‌ನಲ್ಲಿರಬೇಕು. ನಾವು ರಾಜ್ಯದ ಹಿತ ಕಾಪಾಡಿಕೊಳ್ಳಬೇಕು. ಈಗಾಗಲೇ ಈ ವಿಚಾರದಲ್ಲಿ ಪ್ರತಿಭಟನೆಯೂ ನಡೆದಿದೆ. ಈ ವಿವಾದ ಈಗ ಹೈಕೋರ್ಟ್‌ನಲ್ಲಿದ್ದು ಅಲ್ಲಿ ಏನು ಆದೇಶ ಬರುತ್ತೋ ಅದನ್ನ ಪಾಲಿಸಬೇಕು. ಭಾಷೆ, ಜಾತಿ, ರಾಜ್ಯದ ನಡುವೆ ಜಗಳ ಮಾಡಿಸೋಕೆ ಆಗುತ್ತಾ? ಬಿಜೆಪಿಯವರು ಕತ್ತರಿಯಂತೆ, ನಾವು ಅದನ್ನು ಪೋಣಿಸುವ ಸೂಜಿ ಎಂದು ಬೆನ್ನುತಟ್ಟಿಕೊಂಡಿದ್ದಾರೆ.
ಬಿಜೆಪಿಯವರು ಜನರ ಮಧ್ಯೆ ಬಿರುಕು ತರುತ್ತಾರೆ. ಆದರೆ ಕಾಂಗ್ರೆಸ್‌ನವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವವರು. ನಾವು ಕಮಲ್ ಹಾಸನ್ ವಿಚಾರದಲ್ಲಿ ಯಾವುದೇ ಮೃಧು ಧೋರಣೆ ತಾಳುತ್ತಿಲ್ಲ. ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಕಮಲ್ ಹಾಸನ್ ವಿಚಾರದಲ್ಲಿ ತಪ್ಪು ಯಾರದ್ದು? ಸರಿ ಯಾರದ್ದು? ಎನ್ನುವುದನ್ನ ಚರ್ಚೆ ಮಾಡಿದ್ದೇವೆ. ನಾವೆಲ್ಲರೂ ದ್ರಾವಿಡ ಭಾಗಕ್ಕೆ ಸೇರಿದವರು, ಇಲ್ಲಿ ಮೇಲು, ಕೀಳು ಎನ್ನುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications