R.Ashok: ಯಾವ ಸಾಧನೆಗೆ ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಂಭ್ರಮಾಚರಣೆ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಅದ್ಧೂರಿ ಸಂಭ್ರಮಾಚರಣೆಗೆ ತಯಾರಿ ನಡೆದಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕುಹಕವಾಡಿದ್ದಾರೆ. ಯಾವ ಸಾಧನೆಗೆ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷಗಳ ಸಂಭ್ರಮ? ನಡೆಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿರುವ ಅಶೋಕ್ ಕಾಂಗ್ರೆಸ್‌ಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆ ಮಾಡಲು ಹೊರಟಿದ್ದೀರಿ ಎಂಬ ಹಾಸ್ಯಾಸ್ಪದ, ನಾಚಿಕೆಗೇಡು ಸುದ್ದಿ ಕಣ್ಣಿಗೆ ಬಿತ್ತು. ನಿಮ್ಮ ಸರ್ಕಾರದ ಕಳೆದ ಎರಡು ವರ್ಷಗಳಲ್ಲಿ ಏನು ಸಾಧನೆ ಮಾಡಿದೆ ಎಂದು ಈ ಸಂಭ್ರಮಾಚರಣೆ ಮಾಡಲು ಹೊರಟಿದ್ದೀರಿ? ಎಂದು ಕೇಳಿದ್ದಾರೆ.
ಹಾಲು, ನೀರು, ವಿದ್ಯುತ್, ಪೆಟ್ರೋಲ್, ಡಿಸೇಲ್, ಆಸ್ತಿ ತೆರಿಗೆ ಹೀಗೆ ಎಲ್ಲ ದಿನಬಳಕೆ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆ ಮಾಡಿ ಬಡವರು ಮಧ್ಯಮ ವರ್ಗದ ಜೇಬಿಗೆ ಕತ್ತರಿ ಹಾಕಿದ್ದಕ್ಕೆ ಈ ಸಂಭ್ರಮಾಚರಣೆನಾ? ಪರಿಶಿಷ್ಟ ಸಮುದಾಯಗಳಿಗೆ ಸೇರಬೇಕಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ಲೂಟಿ ಹೊಡೆದಿರುವ ಖುಷಿಗೆ ಸಂಭ್ರಮಾಚರಣೆನಾ? ಅಥವಾ ಮೂಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ನಾಮಕಾವಸ್ತೆ ತನಿಖೆ ಮಾಡಿಸಿ, ಬಿ-ರಿಪೋರ್ಟ್ ಹಾಕಿಸಿಕೊಂಡು ಕ್ಲೀನ್‌ಚಿಟ್ ಪಡೆದ ಸಾಧನೆಗೆ ಈ ಸಂಭ್ರಮಾಚರಣೆಯೇ? ಎಂದು ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಕಿರುಕುಳ, ಕಮಿಷನ್ ದಾಹಕ್ಕೆ ಬಲಿಯಾದ ಪ್ರಾಮಾಣಿಕ ಅಧಿಕಾರಿಗಳು ಹಾಗು ಗುತ್ತಿಗೆದಾರರ ಸಾವನ್ನ ಸಂಭ್ರಮಿಸಲು ಸಂಭ್ರಮಾಚರಣೆನಾ? ಕಳಪೆ ಔಷಧಿ ಪೂರೈಕೆಯಿಂದ 460ಕ್ಕೂ ಹೆಚ್ಚು ಬಾಣಂತಿಯರು ಆಸ್ಪತ್ರೆಯಲ್ಲೇ ತೀರಿಕೊಂಡರಲ್ಲ, ಅದಕ್ಕೆ ಸಂಭ್ರಮಾಚರಣೆಯೇ? ಕಳೆದ 24 ತಿಂಗಳಲ್ಲಿ 1,600ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರಲ್ಲ ಅದಕ್ಕೆ ಸಂಭ್ರಮಾಚರಣೆಯೇ? ವಕ್ಫ್ ಮಂಡಳಿ ಹೆಸರಿನಲ್ಲಿ ಮಠ, ಮಂದಿರಗಳು, ರೈತರ ಜಮೀನು ಕಬಳಿಸಿದ ಸಾಧನೆಗೆ ಸಂಭ್ರಮಾಚರಣೆಯೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎಡವಟ್ಟುಗಳು ಮೇಲೆ ಎಡವಟ್ಟುಗಳು ಮಾಡಿ, ಲಕ್ಷಾಂತರ ಯುವಕರ ಕನಸು ನುಚ್ಚು ನೂರು ಮಾಡಿ, ಅವರ ಭವಿಷ್ಯ ಹಾಳು ಮಾಡಿದ್ದಕ್ಕೆ ಸಂಭ್ರಮಾಚರಣೆಯೇ?ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಕಾರಣದಿಂದ ನೇಹಾ ಕೊಲೆ ಪ್ರಕರಣದಿಂದ ಹಿಡಿದು, ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದವರೆಗೆ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಹಿಂದೂಗಳ ಸರಣಿ ಕೊಲೆ ಬಗ್ಗೆ ಸಂಭ್ರಮಾಚರಣೆಯೇ? ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಗಣೇಶನ ಮೂರ್ತಿಯನ್ನು ಪೊಲೀಸ್ ವ್ಯಾನ್ ಹತ್ತಿಸಿದ್ದಕ್ಕೆ ಈ ಸಂಭ್ರಮಾಚರಣೆಯೇ? ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದು ಹೇಳಿ ಪಾಕಿಸ್ತಾನದ ಟಿವಿಗಳಲ್ಲಿ ಮಿಂಚಿದ್ದಕ್ಕೆ ಈ ಸಂಭ್ರಮಾಚರಣೆಯೇ? ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದಿರುವ ಜನಾಕ್ರೋಶವನ್ನ ಅಣಕಿಸುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ಅಶೋಕ್ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಪೂರೈಸುತ್ತಿರುವ ಹಿನ್ನೆಲೆ ಮೇ 20ರಂದು ಕಾಂಗ್ರೆಸ್ ಸಾಧನಾ ಸಮಾವೇಶದ ಮೂಲಕ ಸಂಭ್ರಮಾಚರಣೆಗೆ ಮುಂದಾಗಿದೆ. ಇದಕ್ಕೆ ಈಗಗಾಲೇ ಎಲ್ಲ ರೀತಿಯ ತಯಾರಿಗಳು ನಡೆದಿವೆ. ಇತ್ತೀಚೆಗೆ ಪಾಕಿಸ್ತಾನ ಹಾಗೂ ಭಾರತದ ನಡುವಿನ ಅಘೋಷಿತ ಯುದ್ಧ ಪರಿಸ್ಥಿತಿ ಕಾರಣದಿಂದ ಈ ಕಾರ್ಯಕ್ರಮ ಮುಂದೂಡಲಾಗಿತ್ತು. ಈಗ ಮತ್ತೆ ಈ ಕಾರ್ಯಕ್ರಮ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಕಾರ್ಯಕ್ರಮ ಎಲ್ಲಿ?
ಮೇ 20ರಂದು ವಿಜಯನಗರದಲ್ಲಿ ಸರ್ಕಾರದ ಎರಡು ವರ್ಷದ ಸಂಭ್ರಮಾಚರಣೆ ನಡೆಯಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹೊಸಪೇಟೆಯಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮ ಹಾಗು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಎರಡನೇ ವರ್ಷಾಚರಣೆಯ ಸಂಭ್ರಮವನ್ನು ಮುಂದೂಡಲು ಆಲೋಚಿಸಿದ್ದೆವು. ಆದರೆ ಈಗ ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದೇವೆ. ಐದಾರು ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಸಭೆ ಮಾಡಲು ತಿಳಿಸಿದ್ದೇವೆ. ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರು, ಲೋಕಸಭೆ ವಿರೋಧಪಕ್ಷದ ನಾಯಕರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಹಟ್ಟಿ, ಹಾಡಿ, ತಾಂಡ, ಪಾಳ್ಯ, ಮಜುರೆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, ಅಲ್ಲಿ ವಾಸಿಸುತ್ತಿರುವ ಸುಮಾರು ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಸಲುವಾಗಿ ಮೇ 15ರೊಳಗೆ ಸಂಬಂಧಿಸಿದ ವಿಧಾನಸಭೆ ಕ್ಷೇತ್ರದ ಸ್ಥಳೀಯ ಮುಖಂಡರ ಸಭೆಯನ್ನು ಆಯೋಜಿಸಿ, ಸದರಿ ಸಮಾವೇಶವನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯಲ್ಲಿ ಕಾರ್ಯೋನ್ಮುಖರಾಗಿ ಎಂದು ಕೋರಿದ್ದಾರೆ. ಆ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸ್ಥಳೀಯ ಅಧಿಕಾರಿಗಳ ಸಭೆಯನ್ನು ಕರೆದು, ಹಕ್ಕುಪತ್ರ ನೀಡುವ ಕಾರ್ಯಕ್ರಮ ಹಾಗೂ ಈ ಸಮಾವೇಶ ಯಶಸ್ವಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ಎಲ್ಲ ರೀತಿಯ ಸಹಕಾರ ನೀಡಲು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದು, ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿದ ಸಂಭ್ರಮಾಚರಣೆಯ ದಿನ 1 ಲಕ್ಷ ಪಟ್ಟಾ ಖಾತೆ ಹಂಚಿಕೆ ಮಾಡುತ್ತಿದೆ. ಇದು ಕೇವಲ ಸರ್ಕಾರದ ಸಂಭ್ರಮಾಚರಣೆ ಮಾತ್ರವಲ್ಲ. ಇಡೀ ರಾಜ್ಯದ ಜನರು ಸಂಭ್ರಮಿಸುವ ಕ್ಷಣ.
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾಗಿವೆ. ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡುವುದು ಬೇಡ ಎಂದುಕೊಂಡಿದ್ದೆವು, ಆದರೆ ಈಗ ಕದನ ವಿರಾಮ ಘೋಷಣೆ ಆಗಿರುವುದರಿಂದ ಕಾರ್ಯಕ್ರಮ ಮಾಡುತ್ತೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಬೃಹತ್ ಸಮಾವೇಶದ ಮೂಲಕ ಸಂಭ್ರಮಾಚರಣೆಗೆ ಸಜ್ಜಾಗಿದ್ದು, ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.












Click it and Unblock the Notifications