ಹೊಸ ವರ್ಷದ ಮೊದಲ ದಿನ ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ಬಿ. ವೈ. ವಿಜಯೇಂದ್ರ
ಬೆಂಗಳೂರು, ಜನವರಿ 02: ಕರ್ನಾಟಕ ಬಿಜೆಪಿ ಹೊಸ ವರ್ಷದಲ್ಲಿ ಸಂಘಟನೆಯತ್ತ ಇನ್ನಷ್ಟು ಗಮನ ಹರಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇಂತಹ ಹೊತ್ತಿನಲ್ಲಿಯೇ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ದೆಹಲಿಯಲ್ಲಿದ್ದು, ವರಿಷ್ಠರನ್ನು ಭೇಟಿ ಮಾಡಿ, ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿ, ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
2025ರ ಮೊದಲ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಭೇಟಿ ಮಾಡಿದರು. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, "ಉಕ್ಕಿನ ಮನುಷ್ಯ ಎಂದು ಬಣ್ಣಿಸಲ್ಪಡುವ ಸರ್ದಾರ್ ವಲ್ಲಭಾಯಿ ಪಟೇಲರ ನಂತರ ದೇಶಕಂಡ ದಿಟ್ಟ ಗೃಹ ಸಚಿವ ಶ್ರೀ ಅಮಿತ್ ಶಾ ಜೀ ಅವರನ್ನು 2025ರ ನೂತನ ಕ್ಯಾಲೆಂಡರ್ ಹೊಸವರ್ಷದ ದಿನವಾದ ಇಂದು ನವದೆಹಲಿಯಲ್ಲಿ ಭೇಟಿಯಾಗಿ ಶುಭಾಶಯ ಕೋರಿ ಆಶೀರ್ವಾದ ಪಡೆಯಲಾಯಿತು' ಎಂದು ಹೇಳಿದ್ದಾರೆ.

'ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದೀಚೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಕಾಂಗ್ರೆಸ್ ಆಡಳಿತದ ಪರಿಣಾಮವಾಗಿ ಪ್ರಸ್ತುತ ರಾಜ್ಯದಲ್ಲಿ ಉದ್ಭವಿಸಿರುವ ಅನೇಕ ಸಮಸ್ಯೆಗಳು, ಕಾಂಗ್ರೆಸ್ ಸರ್ಕಾರದ ಸಚಿವರುಗಳ ವಿರುದ್ಧದ ಆರೋಪಗಳ ಕುರಿತು ಹಾಗೂ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲ ವೃದ್ಧಿಗೊಳಿಸಲು ಯೋಜಿಸಿರುವ ಕಾರ್ಯಕ್ರಮಗಳ ಕುರಿತು ವಿವರಿಸಿ ಸೂಕ್ತ ಮಾರ್ಗದರ್ಶನವನ್ನು ಕೋರಲಾಯಿತು' ಎಂದು ವಿಜಯೇಂದ್ರ ತಿಳಿಸಿದ್ದಾರೆ.
'ದೇಶ ಸುಭದ್ರತೆಗಾಗಿ ಪ್ರಧಾನಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಐತಿಹಾಸಿಕ ಹೆಜ್ಜೆಗಳನ್ನಿಡುತ್ತಿರುವ ಮಾನ್ಯ ಅಮಿತ್ ಶಾ ಜೀ ಯವರು ಪಕ್ಷ ಸಂಘಟನೆಗಾಗಿಯೂ ಅಷ್ಟೇ ಬದ್ಧತೆ ಹಾಗೂ ಕಾಳಜಿ ವಹಿಸುವುದು ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಆತ್ಮವಿಶ್ವಾಸದ ಛಲ ತುಂಬಲು ಕಾರಣವಾಗಿದೆ, ಅವರ ಸಂಘಟನಾ ಸಾಮರ್ಥ್ಯದ ಚತುರತೆ ಪಕ್ಷ ಕಟ್ಟುವ ಕಾಯಕದಲ್ಲಿ ಸದಾ ನನಗೆ ಪ್ರೇರಣೆಯ ಶಕ್ತಿಯಾಗಿದೆ. ಇಂದಿನ ಅವರ ಭೇಟಿಯ ಕ್ಷಣಗಳು ಎಂದಿನಂತೆ ಇನ್ನಷ್ಟು ಉತ್ಸಾಹತುಂಬಿ ಸಂಘಟನೆಯನ್ನು ನಿರೀಕ್ಷೆಯ ಗುರಿ ತಲುಪಿಸಲು ಆತ್ಮವಿಶ್ವಾಸ ತುಂಬಿತು' ಎಂದು ಪೋಸ್ಟ್ ಹಾಕಿದ್ದಾರೆ.
ಹೋರಾಟ ನಡೆಸಲಿರುವ ಬಿಜೆಪಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊಸ ವರ್ಷದಲ್ಲಿ ಹಲವು ಹೋರಾಟ ನಡೆಸಲು ಬಿಜೆಪಿ ಕಾರ್ಯತಂತ್ರವನ್ನು ರೂಪಿಸಿದೆ. ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗೆ ಕಾರಣವಾಗಿರುವ ಕಾಂಗ್ರೆಸ್ ದುರಾಡಳಿತದ ವಿರುದ್ಧ ಜನಾಂದೋಲನ ರೂಪಿಸಲು ಪಕ್ಷದ ಪ್ರಮುಖರನ್ನೊಳಗೊಂಡ ಆಂದೋಲನ ಸಮಿತಿ ಮತ್ತು ರಾಜ್ಯದಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಹಾಗೂ ನವಜಾತ ಶಿಶುಗಳ ಸಾವುಗಳ ಕುರಿತು ಸತ್ಯಶೋಧನೆ ನಡೆಸಲು ಪಕ್ಷದ ಪ್ರಮುಖರನ್ನೊಳಗೊಂಡ ಸತ್ಯಶೋಧನಾ ಸಮಿತಿಯನ್ನು ಈಗಾಗಲೇ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ರಚನೆ ಮಾಡಿದ್ದಾರೆ.
ಆದರೆ ಕರ್ನಾಟಕ ಬಿಜೆಪಿಯಲ್ಲಿಯೂ ಬಣ ರಾಜಕೀಯವಿದೆ. ಈಗಾಗಲೇ ಬಿಜೆಪಿ ನಾಯಕರು 2ನೇ ಹಂತದ ವಕ್ಫ್ ಹೋರಾಟವನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಜನವರಿ 4ರಂದು ಸಮಾವೇಶ ನಡೆಸಲಾಗುತ್ತದೆ ಎಂಬ ಮಾಹಿತಿ ಇದೆ.
ಆದ್ದರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಲು ಬಿಜೆಪಿಯಲ್ಲಿಯೇ ಎರಡು ಬಣವಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದ ಮೊದಲು ಪಕ್ಷದಲ್ಲಿ ಒಗ್ಗಟ್ಟು ತರಬೇಕಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರ ಹೇಳಿಕೆಗಳಿಗೆ ತಡೆ ಹಾಕಬೇಕಿದೆ.
ಕೆಲವು ದಿನಗಳ ಹಿಂದೆ ಬಿ. ವೈ. ವಿಜಯೇಂದ್ರ ಬೆಂಬಲಿಗರು ದಾವಣಗೆರೆಯಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಿದ್ದರು. ಆಗ ಪೋಸ್ಟ್ ಹಾಕಿದ್ದ ವಿಜಯೇಂದ್ರ ಅವರು, "ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗದು. ಈ ನಿಟ್ಟಿನಲ್ಲಿ ಸಭೆ, ಸಮಾವೇಶಗಳನ್ನು ಮಾಡಲು ಯಾರೇ ಹೊರಟಿದ್ದರೂ ಕೂಡಲೇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸುವೆ' ಎಂದು ಹೇಳಿದ್ದರು.
"ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಇನ್ನಷ್ಟು ಬಲ ತುಂಬುವ ಕಾರ್ಯಕ್ರಮಳಡಿಯಲ್ಲಿ ಪಕ್ಷದ ಹಿರಿಯರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಎಲ್ಲ ಹಿರಿಯರೊಂದಿಗೆ ಅತೀ ಶೀಘ್ರದಲ್ಲೇ ಸಭೆ ಕರೆಯಲಿದ್ದೇನೆ" ಎಂದು ಬಿ. ವೈ. ವಿಜಯೇಂದ್ರ ಭರವಸೆಯನ್ನು ನೀಡಿದ್ದರು. ಜನವರಿ 10ರ ಬಳಿಕ ಈ ಸಭೆ ನಡೆಯಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications