'ಓತಿಕ್ಯಾತ ಸಾಂದರ್ಭಿಕ ಕೂಸು, ಹಿಂದುತ್ವದ ಬಗ್ಗೆ ಪಾಠ ಮಾಡುತ್ತಿದೆ'
ಬೆಂಗಳೂರು, ಏಪ್ರಿಲ್ 3: ಬಿಜೆಪಿ ಸರಕಾರ ಮತ್ತು ಹಿಂದೂಪರ ಸಂಘಟನೆಗಳ ಬಗ್ಗೆ ಕೆಲವು ದಿನಗಳ ಹಿಂದೆ ವಾಗ್ದಾಳಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ದ ರಾಜ್ಯ ಬಿಜೆಪಿ ಘಟಕ ತಿರುಗೇಟು ನೀಡಿದೆ. ಸಾಂದರ್ಭಿಕ ಕೂಸು ಹಿಂದುತ್ವದ ಬಗ್ಗೆ ಪಾಠ ಮಾಡುತ್ತಿದೆ ಎಂದು ಲೇವಡಿ ಮಾಡಿದೆ.
"ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಜಹಗೀರಲ್ಲ. ಇವೇನು ಹಿಂದೂಗಳ ಪ್ರಾತಿನಿಧಿಕ ಸಂಸ್ಥೆಗಳೂ ಅಲ್ಲ. ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಷ್ಟೇ. ಹಿಂದೂ, ಹಿಂದುತ್ವ ಎನ್ನುವ ಪರಂಪರೆ ಇವರ ಗುತ್ತಿಗೆಯಲ್ಲ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.
"ಮಾನ್ಯ #LuckyDipCM ಕುಮಾರಸ್ವಾಮಿ ಅವರೇ, ಓತಿಕ್ಯಾತಕ್ಕೆ ಬೇಲಿಯ ಗೂಟ ಸಾಕ್ಷಿ ಎಂಬ ಗಾದೆ ಮಾತು ನೆನಪಿಸಿಕೊಳ್ಳಿ. ನಿಮ್ಮ ಜಾತ್ಯತೀತ ನಡೆ ಎಂಬುದು ಅವಕಾಶವಾದದ ಪರಿಷ್ಕೃತ ರೂಪ. ಅಧಿಕಾರ ಅನುಭವಿಸಲು ಏನೂ ಬೇಕಾದರೂ ಮಾಡಲು ಸಿದ್ದವಾಗಿರುವವರು ನೀವು. ನಿಮ್ಮಿಂದ ಯಾವ ವ್ಯಕ್ತಿಯೂ, ಯಾವ ಸಂಘಟನೆಯೂ ಪಾಠ ಕಲಿಯಬೇಕಾಗಿಲ್ಲ"ಎಂದು ಬಿಜೆಪಿಯ ಐಟಿ ಸೆಲ್ ಟ್ವೀಟ್ ಮಾಡಿದೆ.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಟ್ವೀಟ್ ಸಮರ ಜೋರಾಗಿ ನಡೆಯುತ್ತಿದೆ. "ಸ್ವಯಂಘೋಷಿತ ದೇಶಭಕ್ತ @BJP4Karnataka ಪಕ್ಷವೇ..ಕುರ್ಚಿಗಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ನಿಮ್ಮ ಯಾವ ಮುಖಂಡರ ಮನೆ ಬಾಗಿಲಿಗೂ ಬರಲಿಲ್ಲ. ಅಧಿಕಾರಕ್ಕಾಗಿ ಅವರ ಮನೆ ಬಾಗಿಲಿಗೇ ಬಂದರು ನಿಮ್ಮವರು! ನೆನಪಿರಲಿ"ಎಂದು ಜೆಡಿಎಸ್ ಐಟಿ ಸೆಲ್ ಇದಕ್ಕೆ ಪ್ರತಿಕ್ರಿಯೆ ನೀಡಿದೆ.

ಬಾಯಿಗೆ ಬಂದಂತೆ ಮಾತನಾಡುವುದು ಆ ಬಳಿಕ ವಿಷಾದ ವ್ಯಕ್ತಪಡಿಸುವುದು
"ಬಾಯಿಗೆ ಬಂದಂತೆ ಮಾತನಾಡುವುದು ಆ ಬಳಿಕ ವಿಷಾದ ವ್ಯಕ್ತಪಡಿಸುವುದು ಸಾಂದರ್ಭಿಕ ಸಿಎಂ @hd_kumaraswamy ಅವರ ರಾಜಕೀಯ ವರಸೆ. ಯಾವ ವಿಚಾರದಲ್ಲಿ ತನ್ನ ಮತಬ್ಯಾಂಕ್ ಗಟ್ಟಿಯಾಗುತ್ತದೋ ಆ ವಿಚಾರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಇವರ ಜಾಯಮಾನ. ಕುಮಾರಸ್ವಾಮಿ ಅವರೇ, ಗಂಡಸ್ತನದ ಬಗ್ಗೆ ಮಾತನಾಡುವುದರಲ್ಲಿ "ಪುರುಷಾರ್ಥ" ಅಡಗಿದೆಯೇ?"ಎಂದು ರಾಜ್ಯ ಬಿಜೆಪಿಯ ಐಟಿ ಸೆಲ್ ಕುಮಾರಸ್ವಾಮಿಯವರು ಗಂಡಸ್ತನದ ಹೇಳಿಕೆಗೆ ಪ್ರತಿಕ್ರಿಯೆ ನೀಡಿತ್ತು.
|
ಸಾಂದರ್ಭಿಕ ಕೂಸೊಂದು ಹಿಂದುತ್ವದ ಬಗ್ಗೆ ಪಾಠ ಮಾಡುತ್ತಿದೆ
"ಸಾಂದರ್ಭಿಕ ಕೂಸೊಂದು ಹಿಂದುತ್ವದ ಬಗ್ಗೆ ಹಿಂದೂ ಸಂಘಟನೆಗಳಿಗೆ ಪಾಠ ಮಾಡುತ್ತಿದೆ. ಹಿಂದೂ ಸಂಘಟನೆಗಳು ಅವರಂತೆ ಕೇವಲ ತನ್ನ ಕುಟುಂಬದ ಉನ್ನತಿಗಾಗಿ ಕೆಲಸ ಮಾಡುತ್ತಿಲ್ಲ.
ಅವರು ಅಧಿಕಾರಕ್ಕಾಗಿ ಕಣ್ಣೀರು ಹಾಕುತ್ತಾರೆ ಆದರೆ ಹಿಂದೂ ಸಂಘಟನೆಗಳು ಹಿಂದೂ ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡುತ್ತಿವೆ. ಮಾನ್ಯ ಕುಮಾರಸ್ವಾಮಿಯವರೇ, ಕುರ್ಚಿಗಾಗಿ ಮಾತುಮುರಿದು #ವಚನಭ್ರಷ್ಟ ಎನಿಸಿಕೊಂಡಿದ್ದು ನೆನಪಿದೆಯೇ?"ಎಂದು ಬಿಜೆಪಿ ಟ್ವೀಟ್ ಮಾಲಕ ಲೇವಡಿ ಮಾಡಿದೆ.

ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ
"ಉಪಸಭಾಪತಿಯ ಕುರ್ಚಿಗೆ ಗಂಟುಬಿದ್ದು ಅದು ಸಿಗದಿದ್ದಾಗ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿರುವ ವ್ಯಕ್ತಿಯ ಸಮುದಾಯವನ್ನು ಮೆಚ್ಚಿಸಲು ಎಚ್‌ಡಿಕೆ ಸರ್ಕಸ್ ಮಾಡುತ್ತಿದ್ದಾರೆ. ಇಂತಹ ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ. ಕುಮಾರ ಸ್ವಾಮಿಯ ರಾಜಕೀಯ ಜೀವನವೇ ಒಂದು ಡ್ರಾಮಾ. ಇವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ"ಎಂದು ಬಿಜೆಪಿ, ಮಾಜಿ ಮುಖ್ಯಮಂತ್ರಿಗಳ ವಿರುದ್ದ ಕಿಡಿಕಾರಿದೆ.

'ಶವ ಸಂಸ್ಕಾರದಲ್ಲೂ ಕೀರ್ತಿ'ಯನ್ನು ಹುಡುಕುವ ನಿಮ್ಮಗಳ ವಿಕೃತ ಮನಸ್ಥಿತಿ
"ಕೊರೊನಾ ಕಾಲದಲ್ಲಿ ನೀವೊಬ್ಬರೇ ಜನರ ಸೇವೆ ಮಾಡಿಲ್ಲ. ಎಲ್ಲರೂ ಜಾತಿ, ಧರ್ಮ ಮೀರಿ ಸೇವೆ ಮಾಡಿದ್ದಾರೆ. ʼಶವ ಸಂಸ್ಕಾರದಲ್ಲೂ ಕೀರ್ತಿʼಯನ್ನು ಹುಡುಕುವ ನಿಮ್ಮಗಳ ವಿಕೃತ ಮನಸ್ಥಿತಿಗೆ ನನ್ನ ಮರುಕವಿದೆ. ಇದಾ ನಿಮ್ಮ ಧರ್ಮ? ಸೋಂಕಿಗೆ ಬಲಿಯಾದವರ ಪಾರ್ಥೀವ ಶರೀರಗಳನ್ನು ನೀವು ಬಾಲಂಗೋಚಿ ಆಗಿರುವ ಪಕ್ಷದ ಸರಕಾರ ಹೇಗೆ ಕಂಡಿತು ಎಂಬುದಕ್ಕೆ ದಿವಂಗತ ಕೇಂದ್ರ ಮಂತ್ರಿ ಶ್ರೀ ಸುರೇಶ ಅಂಗಡಿಯವರೇ ಸಾಕ್ಷಿ. ಅವರ ಅಂತ್ಯಕ್ರಿಯೆ ಹೇಗಾಯಿತು ಎಂದು ಮಾಧ್ಯಮಗಳ ಮೂಲಕ ಕಣ್ಣಾರೆ ನೋಡಿದ್ದೇನೆ" - ಎಚ್.ಡಿ.ಕುಮಾರಸ್ವಾಮಿ ಟ್ವೀಟ್.












Click it and Unblock the Notifications