ಬಂದೂಕು ಭಯದಲ್ಲಿ ನಮ್ಮ ಶಾಸಕರನ್ನು ಹಿಡಿದಿಟ್ಟಿದ್ದಾರೆ: ಡಿಕೆಶಿ
ಬೆಂಗಳೂರು, ಜುಲೈ 08: ಬಿಜೆಪಿಯು ಮುಂಬೈಗೆ ಕರೆದುಕೊಂಡು ಹೋಗಿರುವ ಶಾಸಕರನ್ನು ಬಂದೂಕು ಭಯದಲ್ಲಿ ಬೆದರಿಸಿ ಒತ್ತೆಯಿರಿಸಿಕೊಂಡಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ನಾಗೇಶ್ ನನಗೆ ಕರೆ ಮಾಡಿ, ನನ್ನನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದರು, ನಾನು ಬರುವಷ್ಟರಲ್ಲಿ ಅವರು ವಿಮಾನ ಹತ್ತಿಸಿಕೊಂಡು ಹೋಗಿಬಿಟ್ಟಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಯಡಿಯೂರಪ್ಪ ಅವರ ಪಿಎ ಮತ್ತು ಬಿಜೆಪಿಯ ಇನ್ನು ಕೆಲವರು ತಮ್ಮನ್ನು ಹೈಜಾಕ್ ಮಾಡಿದ್ದಾರೆ ಎಂದು ನಾಗೇಶ್ ಅವರು ನನಗೆ ಕರೆ ಮಾಡಿ ತಿಳಿಸಿದರು ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅತೃಪ್ತರಿಗೆ ಅವಕಾಶ ನೀಡಲು ನಾವು ಬದ್ಧರಾಗಿದ್ದೇವೆ, ನಾವು ಸಾಕಷ್ಟು ಸಲ ಮಂತ್ರಿ ಆಗಿದ್ದೇವೆ, ಈಗ ನಮ್ಮ ಗೆಳೆಯರಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಬಿಜೆಪಿಯು ಮುಂಬೈನಲ್ಲಿ ನಮ್ಮ ಶಾಸಕರನ್ನು ಬಂದೂಕಿನ ಭಯದಲ್ಲಿ ಒತ್ತೆ ಇರಿಸಿಕೊಂಡಿದೆ, ಅಲ್ಲಿರುವವರೂ ಸಹ ನಮ್ಮ ಗೆಳೆಯರೇ, ಕಾಂಗ್ರೆಸ್ ಪಕ್ಷ ಕಟ್ಟಿದವರು, ಅವರ ಅಸಮಾಧಾನವನ್ನು ನಾವು ಹೋಗಲಾಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪಕ್ಷೇತರ ನಿಷೇಧ ಕಾಯ್ದೆ ಹೇರುತ್ತೀರಾ, ಸ್ಪೀಕರ್‌ಗೆ ದೂರು ಸಲ್ಲಿಸುತ್ತೀರಾ ಎಂಬ ಪ್ರಶ್ನೆಗೆ, ನನಗೆ ಅವೆಲ್ಲಾ ಗೊತ್ತಾಗುವುದಿಲ್ಲ, ಅದನ್ನು ಪಕ್ಷದ ಕಾನೂನು ಘಟಕ, ಪಕ್ಷದ ಮುಖಂಡರು ನೋಡಿಕೊಳ್ಳುತ್ತಾರೆ. ನಾನು ಹಳ್ಳಿಯಿಂದ ಬಂದವನು ನನಗೆ ಅದರ ಮಾಹಿತಿ ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.












Click it and Unblock the Notifications