• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಸರ್ಕಾರ ಎಪಿಎಂಸಿ, ಭೂ ಸುಧಾರಣಾ ಕಾಯ್ದೆಗಳನ್ನೂ ವಾಪಸ್ ಪಡೆಯಲಿ

|
Google Oneindia Kannada News

ಬೆಂಗಳೂರು,ನ.20: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರಾಳ ಕೃಷಿ ಕಾಯ್ದೆಗಳನ್ನು ವಾಪಸು ಪಡೆದಂತೆ ರಾಜ್ಯ ಬಿಜೆಪಿ ಸರ್ಕಾರ ಕೂಡಾ ರೈತ ವಿರೋಧಿಯಾಗಿರುವ ಎಪಿಎಂಸಿ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆಯನ್ನು ತಕ್ಷಣ ವಾಪಾಸು ಪಡೆಯಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಕರಾಳ ಕೃಷಿ ಕಾಯ್ದೆಗಳನ್ನು ರೈತರ ಮೇಲೆ ಹೇರಿದ ನರೇಂದ್ರ ಮೋದಿ ಸರ್ಕಾರದ ಅಪರಾಧದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಸಮಾನ ಪಾಲಿದೆ. ನರೇಂದ್ರ ಮೋದಿ ಅವರು ಕೊಂದ ಪಾಪವನ್ನು ತಿಂದು ಪರಿಹರಿಸಿಕೊಂಡರು, ಈಗ ರಾಜ್ಯ ಬಿಜೆಪಿ ಸರ್ಕಾರದ ಸರದಿ. ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆಯ ದುರುದ್ದೇಶವಾಗಿದೆ. ಎಪಿಎಂಸಿಯ ಹೊಸ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಎಂಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಅವರ ವ್ಯವಹಾರದ ಮೇಲೆ ನಿಗಾ ಇಡುವಂತಿಲ್ಲ, ಶುಲ್ಕ, ಸೆಸ್, ಲೆವಿ ಸಂಗ್ರಹಿಸುವಂತಿಲ್ಲ.ಇದು ಸರ್ಕಾರದ ಸಂಪೂರ್ಣ ಶರಣಾಗತಿ ಎಂದು ಹೇಳಿದರು.

ಪ್ರಸ್ತುತ ಶೇ. 6ರಷ್ಟು ರೈತರು ಎಪಿಎಂಸಿಗಳಲ್ಲಿ ಬೆಳೆ ಮಾರಾಟ ಮಾಡುತ್ತಿದ್ದು ಶೇ.94 ರಷ್ಟು ರೈತರಿಗೆ ಮಾರುಕಟ್ಟೆ ಸೌಲಭ್ಯಗಳಿಲ್ಲ. ರೈತರಿಗೆ ನೆರವಾಗುವ ಉದ್ದೇಶ ಸರ್ಕಾರಕ್ಕಿದ್ದರೆ ಮಾರುಕಟ್ಟೆಗಳಿಲ್ಲದ ಕಡೆಗಳಲ್ಲಿ ಎಪಿಎಂಸಿಯಿಂದ ಪರವಾನಿಗೆ ಪಡೆದು ಮಾರುಕಟ್ಟೆಗಳನ್ನು ಸ್ಥಾಪಿಸಲು ಸರ್ಕಾರ ಉತ್ತೇಜನ ನೀಡಬಹುದಾಗಿದೆ. ರೈತರ ಭೂಮಿಗಿದ್ದ ರಕ್ಷಣೆಯನ್ನು ಕಿತ್ತು ಹಾಕಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಭೂಗಳ್ಳರಿಗೆ ನೆರವಾಗುವ ದುರುದ್ದೇಶದ್ದು. ನಮ್ಮ ವಿರೋಧವನ್ನು ಧಿಕ್ಕರಿಸಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಹೊರಟಿದೆ. ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಕೂಡಾ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೃಷಿ ಭೂಮಿ ಖರೀದಿಗೆ ಇದ್ದ 25ರೂ. ಲಕ್ಷ ಆದಾಯದ ಮಿತಿಯನ್ನು ರದ್ದುಗೊಳಿಸಿ, ಕೃಷಿಕರಲ್ಲದವರು ಕೂಡಾ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲು, ಭೂ ಸುಧಾರಣಾ ಕಾಯ್ದೆ 1961ರ ಸೆಕ್ಟನ್ 80 ಮತ್ತು 79 ಎ ಬಿ ಸಿ ಗಳನ್ನು ರದ್ದು ಮಾಡಿರುವ ಬಿಜೆಪಿ ಸರ್ಕಾರ, ರೈತರನ್ನು ಬೀದಿಪಾಲು ಮಾಡಲು ಹೊರಟಿದೆ ಟೀಕಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆ 1961ರ ಸೆಕ್ಷನ್ A,B,C ಯಡಿಯಲ್ಲಿ ಸುಮಾರು 1.7 ಲಕ್ಷ ಎಕರೆ ಜಮೀನಿಗೆ ಸಂಬಂಧಿಸಿದ 13,814 ಪ್ರಕರಣಗಳು ದಾಖಲಾಗಿತ್ತು. ಭೂ ಸುಧಾರಣೆ ತಿದ್ದುಪಡಿ ಮಸೂದೆಯಿಂದ ಈ ಪ್ರಕರಣಗಳು ರದ್ದಾಗಿ ಸರ್ಕಾರದ ಖಜಾನೆಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದೆ.

BJP Govt Should withdraw APMC act: Siddaramaiah demand

ಸದನದ ಒಳಗೆ ಮತ್ತು ಹೊರಗೆ ಈ ಎರಡು ಕರಾಳ ಕಾಯ್ದೆಗಳನ್ನು ರಾಜ್ಯ ಕಾಂಗ್ರೆಸ್ ಪಕ್ಷ ವಿರೋಧಿಸಿದೆ. ಇಂತಹ ಕಾಯ್ದೆಗಳನ್ನು ರೂಪಿಸುವ ಹಂತದಲ್ಲಿ ರೈತ ನಾಯಕರು ಮತ್ತು ವಿರೋಧಪಕ್ಷಗಳ ಜೊತೆ ಚರ್ಚೆ ನಡೆಸುವುದು ಪ್ರಜಾಪ್ರಭುತ್ವದ ನಡವಳಿಕೆ. ಬಿಜೆಪಿ ಸರ್ಕಾರ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ.

ಎಪಿಎಂಸಿ(ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಾಪಸು ಪಡೆಯಲು ರಾಜ್ಯ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುವುದರ ಜೊತೆಗೆ ರಾಜ್ಯದ ರೈತ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಹೋರಾಟಕ್ಕೂ ಬೆಂಬಲ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ
Know all about
ಸಿದ್ದರಾಮಯ್ಯ

English summary
Former chief ministers Siddaramaiah demanded the immediate withdrawal of the anti-farmer APMC (Incentives and Facilitation) Act and Land Reform (Amendment) Act, as the Narendra Modi government has withdrawn the dark agriculture laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X