ಅಮಿತ್ ಶಾ ರಾಜ್ಯ ಭೇಟಿ: ಬಲವಂತದಿಂದ ರೈತರ ಹೋರಾಟ ಹತ್ತಿಕ್ಕಿದ ಸರ್ಕಾರ: ಎಎಪಿ ಕಿಡಿ
ಬೆಂಗಳೂರು, ಡಿಸೆಂಬರ್ 29: ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಮಂಡ್ಯದಲ್ಲಿ ರೈತರ ನಡೆಸುತ್ತಿದ್ದ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕಿದ ಪೊಲೀಸರ ಕ್ರಮವನ್ನು ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಖಂಡಿಸಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿ.ಟಿ.ನಾಗಣ್ಣ, ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಕಳೆದ 52 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸಿರಲಿಲ್ಲ. ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಾಗ ಸರ್ಕಾರಕ್ಕೆ ಮುಜುಗರವಾಗಬಾರದು ಎಂದು ಕಾರಣಕ್ಕೆ ಪೊಲೀಸರನ್ನು ಬಳಸಿಕೊಂಡು ಬಲವಂತವಾಗಿ ಅವರ ಹೋರಾಟವನ್ನು ಹತ್ತಿಕ್ಕಲಾಗಿದೆ ಎಂದು ದೂರಿದರು.
ಪ್ರತಿಭಟನಾ ಸ್ಥಳದಲ್ಲಿ ಹಾಕಲಾಗಿದ್ದ ರೈತರ ಟೆಂಟುಗಳನ್ನು ಕಿತ್ತೆಸೆದು, ಅವರನ್ನು ಬಂಧಿಸುವ ಮೂಲಕ ಪೊಲೀಸರು ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಪ್ರತಿಭಟಿಸುವ ಹಕ್ಕನ್ನು ಈ ರೀತಿ ಹತ್ತಿಕ್ಕುವುದು ಖಂಡನೀಯ ಎಂದು ಕಿಡಿ ಕಾರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ರೈತರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದದ್ದರೆ ಪ್ರತಿಭಟನಾನಿರತ ರೈತ ಮುಖಂಡರ ಜೊತೆ ಮಾತುಕತೆ ನಡೆಸಬೇಕಿತ್ತು. ಆದರೆ ಚುನಾವಣಾ ತಯಾರಿ, ಸಂಪುಟ ವಿಸ್ತರಣೆ ಕಸರತ್ತಿನಲ್ಲೇ ಮಗ್ನವಾಗಿರುವ ಮುಖ್ಯಮಂತ್ರಿಯವರಿಗೆ ರೈತರ ಹಿತರಕ್ಷಣೆ ಬೇಕಾಗಿಲ್ಲ. ಬೊಮ್ಮಾಯಿಯವರು ಕೇವಲ ಬಿಜೆಪಿ ಹೈಕಮಾಂಡ್ ಮೆಚ್ಚಿಸಲು ಅಧಿಕಾರ ನಡೆಸುತ್ತಿದ್ದಾರೆ. ಜನಸಾಮಾನ್ಯರ ಹಿತವನ್ನು ನಿರ್ಲಕ್ಷಿಸುತ್ತಿರುವ ಬಿಜೆಪಿ ಆಡಳಿತಕ್ಕೆ ಅಂತ್ಯ ಹಾಡಲು ನಾಡಿನ ರೈತರು ಒಂದುಗೂಡಬೇಕು ಎಂದು ಬಿ.ಟಿ.ನಾಗಣ್ಣ ಕರೆ ನೀಡಿದರು.

ಅಮಿತ್ ಶಾ ಭೇಟಿ: 1 ದಿನ ಮೊದಲೇ ಅಧಿವೇಶನ ಅಂತ್ಯ
ಅಮಿತ್ ಶಾ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಕಾರಣಕ್ಕೆ ವಿಧಾನಮಂಡಲ ಅಧಿವೇಶನವನ್ನು ಒಂದು ದಿನ ಮೊದಲೇ ಅಂತ್ಯಗೊಳಿಸಲಾಗುತ್ತಿದೆ. ಡಿಸೆಂಬರ್ 30ರ ತನಕ ಅಧಿವೇಶನ ನಡೆಯಲಿದೆ ಎಂದು ತಿಳಿಸಿದ್ದ ಸರ್ಕಾರವು 29ಕ್ಕೇ ಕೊನೆಗೊಳಿಸುತ್ತಿದೆ. ಈ ಮೂಲಕ ನಾಡಿನ ಹಿತಕ್ಕಿಂತ ಪಕ್ಷದ ನಾಯಕರೇ ಮುಖ್ಯವೆಂಬ ಕೆಟ್ಟ ಸಂದೇಶವನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡುತ್ತಿದ್ದಾರೆ. ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸರಿಯಾದ ಚರ್ಚೆಯನ್ನೇ ನಡೆಸದೇ ಕಲಾಪವನ್ನು ವ್ಯರ್ಥ ಮಾಡಿದ್ದಾರೆ ಎಂದು ಬಿ.ಟಿ.ನಾಗಣ್ಣ ಹೇಳಿದರು.












Click it and Unblock the Notifications