BJP Final List Of Candidates: ಮಾನ್ವಿ, ಶಿವಮೊಗ್ಗಕ್ಕೆ ಅಭ್ಯರ್ಥಿ ಘೋಷಣೆ, ಈಶ್ವರಪ್ಪ ಪುತ್ರನಿಗಿಲ್ಲ ಟಿಕೆಟ್!
ಬೆಂಗಳೂರು, ಏಪ್ರಿಲ್. 19: ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು, ಮಾನ್ವಿ ಹಾಗೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಗಳಿಗೆ ಇನ್ನು ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಆದರೆ, ಬಹುನಿರೀಕ್ಷಿತ ಶಿವಮೊಗ್ಗ ಕ್ಷೇತ್ರದಿಂದ ಕೆಎಸ್ ಈಶ್ವರಪ್ಪ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಿಲ್ಲ.
ಕಳೆದ ವಾರ ಬಿಜೆಪಿ ತನ್ನ ಅಭ್ಯರ್ಥಿಗಳು ಎರಡನೇ ಪಟ್ಟಿ ಬಿಡುಗಡೆ ಮಾಡಿತ್ತು. ಈ ಹಿಂದಿನ ಎರಡು ಪಟ್ಟಿಗಳಲ್ಲಿ 212 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಬಳಿಕ ಮೊನ್ನೆಯಷ್ಟೇ 10 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಮತ್ತು ಮಾನ್ವಿ ವಿಧಾನಸಭಾ ಕ್ಷೇತ್ರಗಳನ್ನು ಹಾಗೆ ಉಳಿಸಿಕೊಂಡು ಕುತೂಹಲ ಮೂಡಿಸಿತ್ತು.

ಶಿವಮೊಗ್ಗ ಕ್ಷೇತ್ರದ ಹಾಲಿ ಶಾಸಕ ಕೆಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿರುವ ಕಾರಣ ಮಗನಿಗಾಗಿ ಟಿಕೆಟ್‌ಗೆ ಬೇಡಿಕೆಯಿಟ್ಟಿದ್ದರು. ಮಗ ಕಾಂತೇಶ್‌ಗೆ ಟಿಕೆಟ್ ಸಿಗಲಿದೆ ಎನ್ನಲಾಗುತ್ತಿತ್ತು. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಈಶ್ವರಪ್ಪ ಕುಟುಂಬಕ್ಕೆ ಟಿಕೆಟ್ ನೀಡದೆ ಅವರನ್ನು ನಿರಾಸೆಗೆ ನೂಕಿದೆ.
ಶಿವಮೊಗ್ಗ ಕ್ಷೇತ್ರಕ್ಕೆ ಚನ್ನಬಸವಪ್ಪ ಅವರನ್ನು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬಿ.ವಿ.ನಾಯಕ ಅವರನ್ನು ಅಭ್ಯರ್ಥಿಗಳನ್ನಾಗಿ ಪಕ್ಷ ಘೋಷಿಸಿದೆ. ಮಾಜಿ ಸಂಸದ ಬಿವಿ ನಾಯಕ ಅವರು ಮಂಗಳವಾರ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು.

ಶಿವಮೊಗ್ಗ ನಗರ ಕ್ಷೇತ್ರವನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿನಿಧಿಸುತ್ತಿದ್ದು, ತಮ್ಮ ರಾಜಕೀಯ ಜೀವನ ಮುಡುಪಿಟ್ಟು ಮಗನ ಭವಿಷ್ಯ ಬೆಳಗಿಸುವ ಕನಸು ಕಂಡಿದ್ದರು. ಅವರ ಮಗ ಕಾಂತೇಶ್‌ಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯಿಟ್ಟಿದ್ದರು. ಇದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಮಗನಿಗೆ ಶಿಕಾರಿಪುರದಲ್ಲಿ ಟಿಕೆಟ್ ನೀಡಿರುವುದನ್ನು ಉದಾಹರಣೆಯಾಗಿ ಹೇಳಿದ್ದರು. ಆದರೂ ಹೈಕಮಾಂಡ್ ಈಶ್ವರಪ್ಪ ಒತ್ತಡಕ್ಕೆ ಮಣಿದಿಲ್ಲ.
ಮಗನಿಗೆ ಟಿಕೆಟ್ ದೊರೆಯುವ ಭರವಸೆಯಿಂದ ರಾಜಕೀಯ ನಿವೃತ್ತಿ ಘೋಷಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೋರಾಡುವುದಾಗಿ ಈಶ್ವರಪ್ಪ ಹೇಳಿದ್ದರು. ಇದರ ಜೊತೆಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಚನ್ನಬಸಪ್ಪ (ಚನ್ನಿ) ಮಹಾನಗರಪಾಲಿಕೆ ಸದಸ್ಯರು. ಲಿಂಗಾಯತ ಸಮುದಾಯದ ಚನ್ನಬಸಪ್ಪ, ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಕಟ್ಟಾ ಬೆಂಬಲಿಗ ಹಾಗೂ ಮಾನಸಪುತ್ರ ಎನ್ನಲಾಗುತ್ತದೆ.
ಆರ್‌ಎಸ್‌ಎಸ್ ನಲ್ಲಿ ಅಕ್ರಿಯವಾಗಿ ತೊಡಗಿಸಿಕೊಂಡಿರುವ ಚನ್ನಬಸಪ್ಪಗೆ ಟಿಕೆಟ್ ಪಡೆಯಲು ಅದು ಒಂದು ಕಾರಣ ಎನ್ನಲಾಗಿದೆ.
ರಾಯಚೂರು ಜಿಲ್ಲೆಯಎಸ್‌ಟಿ ಮೀಸಲು ಕ್ಷೇತ್ರ ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಬಿವಿ ನಾಯಕ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಗಂಗಾಧರ ನಾಯಕ ಹಾಗೂ ಮುಖಂಡ ಬಿ.ಮಾನಪ್ಪ ನಾಯಕ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ಮಂಗಳವಾರವಷ್ಟೇ ಬಿಜೆಪಿ ಸೇರಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ನಾಯಕ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿ.ವಿ.ನಾಯಕ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದರು, ಮಾನ್ವಿಯಿಂದ ಟಿಕೆಟ್ ಬಯಸಿದ್ದ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಹುಬ್ಬಳ್ಳಿಗೆ ತೆರಳಿ ಬಿಜೆಪಿ ಪ್ರಮುಖರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಮಾಜಿ ಸಂಸದರೂ ಆದ ಬಿ.ವಿ. ನಾಯಕ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷಕ್ಕೆ ಸ್ವಾಗತಿಸಿದ್ದರು. ಈಗ ಪಕ್ಷದಿಂದ ಟಿಕೆಟ್ ನೀಡಲಾಗಿದೆ.












Click it and Unblock the Notifications