70ರ ಹರೆಯದ ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಏನಾದ್ರೂ ಇದ್ದಿದ್ದರೆ!
ರಾಜ್ಯದ ಮಾಸ್ ಲೀಡರುಗಳಲ್ಲಿ ಹಾಲಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಒಬ್ಬರು. ಕಾಲಿಗೆ ಚಕ್ರಕಟ್ಟಿಕೊಂಡಂತೆ ರಾಜ್ಯಾದ್ಯಂತ ಸುತ್ತಾಡಿ ಬಿಜೆಪಿಯನ್ನು ಅಧಿಕಾರಕ್ಕೂ ತಂದಿದ್ದ ಯಡಿಯೂರಪ್ಪ ಅವರನ್ನು ಈಗ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಸುವಲ್ಲಿ ಸ್ವಪಕ್ಷೀಯರ ಪಾಲೂ ಇಲ್ಲದಿಲ್ಲ.
ಪ್ರಮುಖವಾಗಿ ಲಿಂಗಾಯಿತ ಸಮುದಾಯದ ಅತ್ಯಂತ ಪ್ರಭಾವಿ ನಾಯಕರಾಗಿರುವ ಬಿಎಸ್ವೈ ಅವರನ್ನು ಇತ್ತೀಚೆಗೆ ಪಕ್ಷ ನಡೆಸಿಕೊಳ್ಳುತ್ತಿರುವ ರೀತಿಗೆ ಅವರ ಹಿಂಬಾಲಕರಿಂದ ಆದಿಯಾಗಿ ಪಕ್ಷದ ಪ್ರಮುಖ ಮುಖಂಡರಲ್ಲೂ ಅಸಮಾಧಾನವಿದೆ.
ಆದರೆ ಪಕ್ಷದಲ್ಲಿ ಮೋದಿ ಮತ್ತು ಅಮಿತ್ ಶಾ ಅವರ ಹಿಡಿತ ಹೆಚ್ಚಾಗಿರುವುದರಿಂದ ಬಹಿರಂಗವಾಗಿ ತಮ್ಮ ನೋವನ್ನು ವ್ಯಕ್ತ ಪಡಿಸುತ್ತಿಲ್ಲ ಅಷ್ಟೇ..
ರಾಜ್ಯದಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿದ್ದರೂ ಸಿದ್ದರಾಮಯ್ಯ ಸರಕಾರದ ವಿರುದ್ದ ಜೆಡಿಎಸ್ ನಡೆಸುತ್ತಿರುವ ಹೋರಾಟ, ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷ ಯಾವುದು ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡಿಸದೇ ಇರುವುದಿಲ್ಲ.
ಸಿದ್ದರಾಮಯ್ಯ ಸರಕಾರದ ಎರಡು ವರ್ಷದ ಆಡಳಿತದ ಅವಧಿಯಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಸರಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ವಿಫಲವಾಗಿದೆ. ಕಾಟಾಚಾರಕ್ಕೆ ಬಿಜೆಪಿಯದ್ದು ಒಂದು ಪ್ರತಿಭಟನೆ ಒಂದಷ್ಟು ಸಭಾತ್ಯಾಗ ಎನ್ನುವಂತಾಗಿದೆ.
ಒಂದು ವೇಳೆ ಯಡಿಯೂರಪ್ಪ ಏನಾದರೂ ಶಾಸಕರಾಗಿದ್ದರೆ ಬಿಜೆಪಿಯ ಹೋರಾಟದ ಕಥೆಯೇ ಬೇರೆ ಇರುತ್ತಿತ್ತು ಎನ್ನುವ ಮಾತು ಸ್ವಪಕ್ಷೀಯರಿಂದಲೇ ಕೇಳಿ ಬರುತ್ತಿದೆ.
ಸದನದಲ್ಲಿ ಬಿಜೆಪಿಯವರು ಮಾಡಬೇಕಾಗಿದ್ದ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ದಾಖಲೆ ಸಮೇತ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಕುಮಾರಸ್ವಾಮಿ, ಯಡಿಯೂರಪ್ಪನವರು ಸಂಸದರಾಗಿರುವ ಲಾಭವನ್ನು ಅಸೆಂಬ್ಲಿಯಲ್ಲಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಇದಲ್ಲದೇ, ಕಳೆದ ಬೆಳಗಾವಿ ಅಧಿವೇಶನಕ್ಕೆ ಮುನ್ನ ಕುಮಾರಸ್ವಾಮಿಯವರ ಪಾದಯಾತ್ರೆ ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗಿರುವುದೂ ಎಲ್ಲರಿಗೂ ತಿಳಿದಿರುವ ವಿಚಾರ. ಸಿದ್ದು ಸರಕಾರದ ವೈಫಲ್ಯವನ್ನು ಬಿಜೆಪಿ ಎತ್ತಿ ತೋರಿಸುವಲ್ಲಿ ವಿಫಲವಾದ ಕೆಲವು ಘಟನೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಪ್ರಲ್ಹಾದ್ ಜೋಷಿ ತರಾಟೆಗೆ
ಬಿಜೆಪಿಯ ಹೋರಾಟದ ಶಕ್ತಿ ಎಲ್ಲಿ ಹೋಯಿತು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಏನು ಮಾಡುತ್ತಿದ್ದೀರಾ, ಇಷ್ಟು ರೈತರು ಸಾವನ್ನಪ್ಪುತ್ತಿದ್ದರೆ ಒಬ್ಬರ ಮನೆಗಾದರೂ ತೆರಳಿ ಸಾಂತ್ವನ ಹೇಳುವ ಕೆಲಸ ಆಗಿದೆಯಾ ಎಂದು ಯಡಿಯೂರಪ್ಪನವರ ಪ್ರಶ್ನೆಗೆ ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಷಿಯವರ ಬಳಿ ಉತ್ತರವಿರಲಿಲ್ಲ.

ಸಮಿತಿಯಲ್ಲಿ ಬಿಎಸ್ವೈಗೆ ಖೊಕ್
ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡ ನಂತರ ಎಚ್ಚೆತ್ತು ಕೊಂಡ ರಾಜ್ಯ ಬಿಜೆಪಿ, ರೈತರಿಗೆ ಸಾಂತ್ವನ ಹೇಳಲು ಆರು ತಂಡಗಳನ್ನು ರಚಿಸಿ ಜುಲೈ 25 ಮತ್ತು 26ಕ್ಕೆ ರಾಜ್ಯ ಪ್ರವಾಸ ಕೈಗೊಳ್ಳುವ ನಿರ್ಧಾರಕ್ಕೆ ಬಂತು. ಆದರೆ ಆರು ತಂಡಗಳಲ್ಲಿ ಯಡಿಯೂರಪ್ಪನವರ ಹೆಸರಿಲ್ಲ ಎನ್ನುವುದು ಇಲ್ಲಿ ಪ್ರಮುಖಾಂಶ.

ಡಿ ಕೆ ರವಿ ಕೇಸ್
ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಜಿಲ್ಲಾಧಿಕಾರಿ ಡಿ ಕೆ ರವಿ ಸಾವಿನ ನಿಗೂಢತೆಯಲ್ಲಿ ಸಿಬಿಐಗೆ ವಹಿಸುವ ಹೋರಾಟದಲ್ಲೂ ಬಿಜೆಪಿ ಪಾತ್ರ ನಿರ್ಣಾಯಕವಾಗಿರಲಿಲ್ಲ. ಜೆಡಿಎಸ್ ಪ್ರತಿಭಟನೆ, ಸಾರ್ವಜನಿಕರ ಆಕ್ರೋಶದಿಂದ ಬಚಾವ್ ಆಗಲು ಸರಕಾರ ಕೇಸಿನ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

ಲೋಕಾಯುಕ್ತ ಹಗರಣ
ಮುಖ್ಯ ಲೋಕಾಯುಕ್ತ ಭಾಸ್ಕರ್ ರಾವ್ ಮೇಲಿನ ಆರೋಪದ ವಿಚಾರದಲ್ಲೂ ಬಿಜೆಪಿ ಸರಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ದಯನೀಯ ವೈಫಲ್ಯ ಕಂಡಿತು. ಸದನದೊಳಗೆ ಮತ್ತು ಹೊರಗೆ ಬಿಜೆಪಿಯ ಪ್ರತಿಭಟನೆ ಸಿದ್ದು ಸರಕಾರಕ್ಕೆ ಯಾವುದೇ ರೀತಿಯಲ್ಲಿ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಲಿಲ್ಲ.

ಅನ್ನದಾತರ ಸಾವು
ಕಳೆದ ಎರಡು ತಿಂಗಳಲ್ಲಿ ಸುಮಾರು ಎಂಬತ್ತಕ್ಕೂ ಹೆಚ್ಚು ರೈತರು ಸಾವನ್ನಪ್ಪಿರುವುದು ಅತ್ಯಂತ ದುರಂತ. ಈ ವಿಚಾರದಲ್ಲಂತೂ ಬಿಜೆಪಿಯ ಪ್ರತಿಭಟನೆ ಕೇವಲ ಕಾಟಾಚಾರದಂತಿತ್ತು, ಅತ್ಯಂತ ಗಂಭೀರ ವಿಚಾರವೊಂದನ್ನು ಬಿಜೆಪಿ ನಾಯಕರು ಸೀರಿಯಸ್ ಆಗಿ ತೆಗೆದುಕೊಳ್ಳದೇ ಇದ್ದಿದ್ದು ರಾಜ್ಯದಲ್ಲಿ ಬಿಜೆಪಿಯಲ್ಲಿ ಸಮರ್ಥ ನಾಯಕ ಇಲ್ಲ, ಇದ್ದರೂ ಅವರು ಏನೂ ಮಾಡುವಂತಿಲ್ಲ ಎನ್ನುವುದನ್ನು ಎತ್ತಿ ಎತ್ತಿ ತೋರಿಸುವಂತಿದೆ.

ಹಾವೇರಿ ಘಟನೆ, ರಾಷ್ಟ್ರೀಯ ಮಾಧ್ಯಮಗಳು
ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಹಾವೇರಿಯಲ್ಲಿ ರೈತನ ಮೇಲೆ ನಡೆದ ಗೋಲಿಬಾರ್ ಘಟನೆ ಬಿಜೆಪಿ ಸರಕಾರವನ್ನು ಎಷ್ಟರ ಮಟ್ಟಿಗೆ ಮುಜುಗರಕ್ಕೀಡುಮಾಡಿತ್ತು. ರಾಷ್ಟ್ರೀಯ ಮಾಧ್ಯಮಗಳು ಅದನ್ನು ಹೇಗೆ ಬಿಂಬಿಸಿದ್ದವು. ಆದರೆ ಈಗ ಸಾಲು ಸಾಲು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಬಿಜೆಪಿ, ಸರಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ವ್ಯವಸ್ಥಿತವಾಗಿ ವಿಫಲವಾಗಿದೆಯೇ? Again ಇಲ್ಲಿ ಕಾಣಿಸಿ ಕೊಳ್ಳುತ್ತಿರುವುದು ಸಮರ್ಥ ನಾಯಕತ್ವದ ವೈಫಲ್ಯ.

ಸಿಂಗಲ್ ನಂಬರ್ ಲಾಟರಿ, ಕ್ರಿಕೆಟ್ ಬೆಟ್ಟಿಂಗ್
ಸಿದ್ದರಾಮಯ್ಯ ಸರಕಾರಕ್ಕೆ ಭಾರೀ ಮುಜುಗರಕ್ಕೀಡು ಮಾಡಿದ ಘಟನೆ ಸಿಂಗಲ್ ನಂಬರ್ ಲಾಟರಿ ಹಗರಣ. ಉಪ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರ ಹೆಸರು ನೇರವಾಗಿ ಕೇಳಿ ಬಂದ ಹಿನ್ನಲೆಯಲ್ಲಿ ಅವರನ್ನು ಸೇವೆಯಿಂದ ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಿದ್ದ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದು ಕುಮಾರಸ್ವಾಮಿ ಹೊರತು ಬಿಜೆಪಿಯಲ್ಲ.

ಗ್ರಾಮ ಪಂಚಾಯತಿ ಚುನಾವಣೆ
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಿದ್ದು ಸರಕಾರದ ವೈಫಲ್ಯವನ್ನು ಮತದಾರರಿಗೆ ಮನದಟ್ಟು ಮಾಡುವಲ್ಲೂ ಬಿಜೆಪಿ ವಿಫಲವಾಯಿತು. ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಪಂಚಾಯತಿಯಲ್ಲಿ ಗೆದ್ದಿತು. ಯಡಿಯೂರಪ್ಪ ಅವರಿಗೆ ಪಕ್ಷದ ಪರ ಪ್ರಚಾರಕ್ಕೂ ಪ್ರಾಮುಖ್ಯತೆ ನೀಡಲಿಲ್ಲ.

ಜಾತಿಗಣತಿ
ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ ಜಾತಿಗಣತಿ ಸರಿಯೋ ಅಥವಾ ತಪ್ಪೋ ಎನ್ನುವುದನ್ನು ಮನದಟ್ಟು ಮಾಡುವಲ್ಲೂ ಬಿಜೆಪಿ ವಿಫಲವಾಯಿತು. ಸರಕಾರ ಜಾತಿಗಣನೆ ಮೂಲಕ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಸ್ವಲ್ಪ ಮಟ್ಟಿಗಾದರೂ ಸಾರ್ವಜನಿಕವಾಗಿ ಪ್ರಸ್ತಾವ ಮಾಡಿದ್ದು ಕುಮಾರಸ್ವಾಮಿ.

ಹಿಂದೂ ವಿರೋಧಿ ನೀತಿ
ಸಿದ್ದರಾಮಯ್ಯ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ಮುಖಂಡರು ಅಲ್ಲೊಮ್ಮೆ, ಇಲ್ಲೊಮ್ಮೆ ಹೇಳಿಕೆ ಪ್ರತಿಭಟನೆ ನಡೆಸಿ ಸುಮ್ಮನಾಗಿದ್ದಾರೇ ಹೊರತು ಅದನ್ನು ಸರಕಾರಕ್ಕಾಗಲಿ, ಸಾರ್ವಜನಿಕರಿಗಾಗಲಿ ಮನದಟ್ಟು ಮಾಡುವಲ್ಲಿ ವಿಫಲರಾದರು..












Click it and Unblock the Notifications