ಬಿಜೆಪಿಯ ಬ್ಯಾಂಕ್ ಬ್ಯಾಲೆನ್ಸ್ ರಿವೀಲ್ ಮಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ: ಇಷ್ಟು ಕೋಟಿ ರೂ. ಹಣ ಕೊಟ್ಟವರು ಯಾರು?
ಬಿಜೆಪಿಯ ಬ್ಯಾಂಕ್ ಬ್ಯಾಲೆನ್ಸ್ ವಿಚಾರದ ಬಗ್ಗೆ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಿವೀಲ್ ಮಾಡಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಭರ್ಜರಿ ಗುಡ್‌ನ್ಯೂಸ್ ಸಹ ಕೊಟ್ಟಿದ್ದಾರೆ.
ದೇಶದ ಕೋಟ್ಯಂತರ ಜನರ ಮೇಲೆ E20 ಇಂಧನದ ಪ್ರಯೋಗ ನಡೆಸಿ, ಜನರ ವಾಹನಗಳ ಕಾರ್ಯಕ್ಷಮತೆ ಕುಸಿಯುವಂತೆ ಮಾಡುವುದು ಯಾವ ರೀತಿಯ ಆಡಳಿತ? ಪ್ರಜಾಪ್ರಭುತ್ವದಲ್ಲಿ ದೇಶದ ಜನರನ್ನೇ ಪ್ರಯೋಗದ ಭಾಗವಾಗಿಸಿದ ಸ್ವತಂತ್ರ ಭಾರತದ ಅತ್ಯಂತ ಭ್ರಷ್ಟ ಸರ್ಕಾರ ಎಂದರೆ ಅದು ಕೇಂದ್ರದ ಬಿಜೆಪಿ ಸರ್ಕಾರ.

ಒಂದೆಡೆ, ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ₹6,000 ಕೋಟಿಗೂ ಹೆಚ್ಚು ಹಣ ಸಂಗ್ರಹ, ಇನ್ನೊಂದೆಡೆ, ₹10,000 ಕೋಟಿಗೆ ತಲುಪಿರುವ ಬಿಜೆಪಿಯ ಬ್ಯಾಂಕ್ ಬ್ಯಾಲೆನ್ಸ್. ಸರ್ಕಾರದಲ್ಲೇ ಕುಳಿತು ತಮ್ಮ ಆಪ್ತರ ಉದ್ಯಮಗಳು ಮತ್ತು ಕುಟುಂಬಗಳ ಹಿತಾಸಕ್ತಿಗಳನ್ನು ಬೆಳೆಸಲು ದೇಶದ ಜನರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ವ್ಯವಸ್ಥೆಯ ನಿಜವಾದ ಫಲಾನುಭವಿಗಳು ಯಾರು ಎಂದು ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ.
ಪೊಲೀಸ್ ಸಂಚಾರ ವ್ಯವಸ್ಥೆ ಆಧುನೀಕರಣ
ಇನ್ನು ಪೊಲೀಸ್ ಸಂಚಾರ ವ್ಯವಸ್ಥೆಯ ಅಧುನೀಕರಣದ ಬಗ್ಗೆಯೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದಾರೆ. ಪೊಲೀಸ್ ಸಂಚಾರ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಹಾಗೂ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಕುರಿತು ಕರ್ನಾಟಕ ಪೊಲೀಸ್ ಇಲಾಖೆಯ ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಾಹನಗಳನ್ನು ನೇರವಾಗಿ ಖರೀದಿಸುವ ಬದಲಿಗೆ ಗುತ್ತಿಗೆ ಆಧಾರದ ಮೇಲೆ ಪಡೆಯುವ 'Fleet-as-a-Service' ಮಾದರಿಯನ್ನು ವಿವರವಾಗಿ ಮೌಲ್ಯಮಾಪನ ಮಾಡಿದೆವು. ಈ ವ್ಯವಸ್ಥೆಯಲ್ಲಿ ವಾಹನದ ನಿರ್ವಹಣೆ, ದುರಸ್ತಿ, ವಿಮೆ ಮತ್ತು 24/7 ರಸ್ತೆ ಬದಿಯ ನೆರವು ಒಂದೇ ಒಪ್ಪಂದದಡಿ ಲಭ್ಯವಾಗಲಿದೆ. ಅಲ್ಲದೆ, ಸೂಕ್ತವಾದ ಪೊಲೀಸ್ ಅಗತ್ಯಗಳಿಗಾಗಿ ಹಂತ-ಹಂತವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ಬಗ್ಗೆ ಚರ್ಚಿಸಿದೆವು, ಇದರಿಂದ ನಿರ್ವಹಣಾ ವೆಚ್ಚ ಹಾಗೂ ಮಾಲಿನ್ಯದ ಪ್ರಮಾಣ ಕಡಿಮೆಯಾಗಲಿದೆ.
ಬಂಡವಾಳ ವೆಚ್ಚವನ್ನು ಕಡಿಮೆ ಮಾಡುವುದು, ವಾಹನಗಳ ಲಭ್ಯತೆಯನ್ನು ಹೆಚ್ಚಿಸುವುದು, ವಾಹನಗಳು ಕೆಟ್ಟು ನಿಲ್ಲುವ ಸಮಯವನ್ನು ತಗ್ಗಿಸುವುದು ಮತ್ತು ಸಾರ್ವಜನಿಕರಿಗೆ ಪರಿಣಾಮಕಾರಿ ಸೇವೆ ತಲುಪಿಸಲು ನಮ್ಮ ಪೊಲೀಸ್ ಸಿಬ್ಬಂದಿಗೆ ನಂಬಿಕಸ್ಥ ಸಂಚಾರ ವ್ಯವಸ್ಥೆ ಹಾಗೂ ಬೆಂಬಲವನ್ನು ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದಿದ್ದಾರೆ.
ಕಲಬುರಗಿ ಬಗ್ಗೆ ಭರ್ಜರಿ ಗುಡ್‌ನ್ಯೂಸ್
ಕಲಬುರಗಿ ನಗರದ ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಯೋಜನೆ ರೂಪಿಸಲಾಗಿದೆ. ನಗರದಾದ್ಯಂತ ಪ್ರಮುಖ ರಸ್ತೆಗಳಲ್ಲಿ ಭೂಗತ ವಿದ್ಯುತ್ ಸಂಪರ್ಕ ಜಾಲವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಮೇಲ್ಮಟ್ಟದ ಕಂಬಗಳ ರಹಿತವಾದ ಈ ಯೋಜನೆಯಿಂದ ವಿದ್ಯುತ್ ಅವಘಡಗಳನ್ನು ನಿಯಂತ್ರಿಸುವುದಕ್ಕೆ, ನಗರದ ಸೌಂದರ್ಯ ಹೆಚ್ಚುವುದಕ್ಕೆ ಸಂಚಾರ ಸಮಸ್ಯೆ ಕಡಿಮೆಗೊಳಿಸುವುದಕ್ಕೆ ಹಾಗೂ ಇನ್ನಿತರ ಅಡೆತಡೆಗಳನ್ನು ನಿಯಂತ್ರಿಸುವುದಕ್ಕೆ ಸಹಕಾರಿಯಾಗಲಿದೆ. ಈ ಯೋಜನೆಯ ರೂಪುರೇಷೆಯ ಕುರಿತು ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ಹಾಗೂ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿರುವುದಾಗಿ ಹೇಳಿದ್ದಾರೆ.
ಇನ್ನು ಕಲ್ಯಾಣ ಕರ್ನಾಟಕದಾದ್ಯಂತ ಕೃಷಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿರುವ, ಕಲಬುರಗಿಯಲ್ಲಿರುವ ನಮ್ಮ ಐಟಿ-ಬಿಟಿ ಇಲಾಖೆಯ ಶ್ರೇಷ್ಠತಾ ಕೇಂದ್ರವನ್ನು ನಿರ್ವಹಿಸುತ್ತಿರುವ 'ಕೃಷಿ ಕಲ್ಪ' ಸಂಸ್ಥೆಯ ತಂಡವನ್ನು ಭೇಟಿ ಮಾಡಿದೆ. ಆರಕ್ಕಿಂತ ಕಡಿಮೆ ತಿಂಗಳುಗಳಲ್ಲಿ, ಅವರು 32 ಸ್ಟಾರ್ಟಪ್'ಗಳಿಗೆ ಬೆಂಬಲ ನೀಡಿದ್ದಾರೆ, 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದ್ದಾರೆ ಮತ್ತು 100ಕ್ಕೂ ಹೆಚ್ಚು ರೈತರು ಹಾಗೂ ರೈತ ಉತ್ಪಾದಕ ಸಂಸ್ಥೆಗಳನ್ನುತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ವಿವಿಧ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಬೆಳೆಸಿಕೊಂಡಿದ್ದಾರೆ.
ಕಲಬುರಗಿಯಲ್ಲಿ ಅವರ ಹೊಸ ಸೌಲಭ್ಯವು ಪೂರ್ಣಗೊಳ್ಳುವ ಹಂತದಲ್ಲಿದ್ದು, ಸರ್ಕಾರದ ಬೆಂಬಲದೊಂದಿಗೆ ಪ್ರತ್ಯೇಕ ಪ್ರಯೋಗಾಲಯವನ್ನು ಯೋಜಿಸುವುದರೊಂದಿಗೆ ಮುಂದಿನ ಹಂತವು ರೂಪುಗೊಳ್ಳುತ್ತಿದೆ. ರೈತರು ಮತ್ತು ಪ್ರಾದೇಶಿಕ ಉದ್ಯಮಿಗಳನ್ನು ಹೂಡಿಕೆದಾರರು ಹಾಗೂ ಸರ್ಕಾರದ ಸಂಗ್ರಹಣಾ ಅವಕಾಶಗಳೊಂದಿಗೆ ಜೋಡಿಸಲು ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ. ಇದು ಅವರು ಹೊಸ ಮಾರುಕಟ್ಟೆಗಳನ್ನು ತಲುಪಲು, ತಮ್ಮ ವ್ಯವಹಾರಗಳನ್ನು ಬೆಳೆಸಿಕೊಳ್ಳಲು ಮತ್ತು ಹೆಚ್ಚಿನ ಗ್ರಾಮೀಣ ಉದ್ಯೋಗಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.


Click it and Unblock the Notifications
