ಸಂಸದ ಡಿ.ಕೆ. ಸುರೇಶ್ ವಿರುದ್ಧ ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ರಾಮನಗರ, ಜನವರಿ 4: ರಾಮನಗರದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿಯೇ ಸಂಸದ ಡಿ.ಕೆ. ಸುರೇಶ್ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಮಧ್ಯೆ ನಡೆದ ವಾಗ್ವಾದ ಪ್ರಕರಣ ಸಂಬಂಧಿಸಿದಂತೆ ರಾಜ್ಯದಾದ್ಯಂತ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿದೆ.

ಬೆಂಗಳೂರಿನ ಸದಾಶಿವನಗರದಲ್ಲಿ ರಸ್ತೆ ತಡೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಸುರೇಶ್ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಅಲ್ಲದೆ ಸಂಸದ ಡಿ.ಕೆ. ಸುರೇಶ್ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಬ್ಯಾರಿಕೇಡ್ ಅಳವಡಿಸಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಪ್ರತಿಭಟನಾನಿರತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ, ಡಿಕೆ ಸಹೋದರರ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ್ದು, ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಲ್ನಡಿಗೆ ಮೂಲಕ ಬಿಜೆಪಿ ಪ್ರತಿಭಟನೆ
ಮತ್ತೊಂದೆಡೆ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಘಟಕದಿಂದಲೂ ಪ್ರತಿಭಟನೆ ನಡೆಯುತ್ತಿದೆ. ಸಂಸದ ಡಿ.ಕೆ. ಸುರೇಶ್, ಎಂಎಲ್‌ಸಿ ಎಸ್. ರವಿ ವಿರುದ್ಧ ಧಿಕ್ಕಾರ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಕಾಲ್ನಡಿಗೆಯಲ್ಲಿ ಹೊರಟ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

BJP Activists Protest Against MP DK Suresh in All over Karnataka

ರಾಮನಗರದಲ್ಲಿ ಬಿಜೆಪಿ ಪ್ರತಿಭಟನೆ
ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಬಂಧನಕ್ಕೆ ಆಗ್ರಹಿಸಿ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಕಾರ್ಯಕರ್ತರು ಡಿ.ಕೆ. ಸುರೇಶ್ ವಿರುದ್ಧ ಘೋಷಣೆ ಕೂಗಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆದು‌ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ರಾಮನಗರ ಜಿಲ್ಲಾ ಎಸ್ಪಿ ಭೇಟಿ ನೀಡಿದ್ದಾರೆ. ಈ ವೇಳೆ ಪೊಲೀಸರ ಜತೆ ಪ್ರತಿಭಟನಾಕಾರರ ಮಾತಿನ ಚಕಮಕಿ ನಡೆದಿದ್ದು ಜಿಲ್ಲಾಧಿಕಾರಿ ಕಚೇರಿ ಎದುರು ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

BJP Activists Protest Against MP DK Suresh in All over Karnataka

ಹಾಸನದಲ್ಲಿ ಪ್ರೀತಂಗೌಡ ನೇತೃತ್ವದಲ್ಲಿ ಪ್ರತಿಭಟನೆ
ಡಿ.ಕೆ. ಸುರೇಶ್ ಹಾಗೂ ಅಶ್ವತ್ಥ ನಾರಾಯಣ ನಡುವಿನ ಗಲಾಟೆ ವಿಚಾರವಾಗಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಹಾಸನ ಶಾಸಕ ಪ್ರೀತಂಗೌಡ, ಸಂಸದ‌ ಡಿ.ಕೆ. ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು. ಕ್ಯಾಬಿನೆಟ್ ಮಂತ್ರಿ ಭಾಷಣ ಮಾಡುವಾಗ ಪಾಳೇಗಾರರ ಸಂಸ್ಕೃತಿಯಲ್ಲಿ ಜಗಳಕ್ಕೆ ಹೋಗಿದ್ದಾರೆ. ಸಂಸದ ಡಿ.ಕೆ. ಸುರೇಶ್ ನಡವಳಿಕೆಯನ್ನು ಇಡೀ ರಾಜ್ಯದ ಜನತೆ ಖಂಡಿಸುತ್ತಿದ್ದಾರೆ ಎಂದರು.

ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ, ಅಲ್ಲಿ ಪಾಳೇಗಾರರ ಸಂಸ್ಕೃತಿ ನಡೆಯುತ್ತಿಲ್ಲ. ಇನ್ಮುಂದೆ ಅವರ ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ಇಡೀ ರಾಜಕಾರಣಿಗಳು ತಲೆ ತಗ್ಗಿಸುವ ಕೆಲಸವನ್ನು ನಿನ್ನೆ ರಾಮನಗರದಲ್ಲಿ ಮಾಡಿದ್ದಾರೆ. ಇಂದು ರಾಜ್ಯಾದ್ಯಂತ ಅಶ್ವಥ್ ನಾರಾಯಣ ಅವರನ್ನು ಬೆಂಬಲಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

BJP Activists Protest Against MP DK Suresh in All over Karnataka


ವಿಜಯಪುರದಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ
ಕಾಂಗ್ರೆಸ್ ಮುಖಂಡರ ಗೂಂಡಾವರ್ತನೆ ಖಂಡಿಸಿ ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ರವಿ ಗೂಂಡಾವರ್ತನೆ ಖಂಡಿಸಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ನಗರದ ಬಿಜೆಪಿ ಕಾರ್ಯಾಲಯದಿಂದ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ಮೂಲಕ ಕಾಂಗ್ರೆಸ್ ಕಚೇರಿವರೆಗೂ ಆಗಮಿಸಿ ಮುತ್ತಿಗೆ ಹಾಕಲು ಯತ್ನಿಸಿದ್ದು, ಇದೇ ವೇಳೆಯಲ್ಲಿ ಸಂಸದ ಡಿ.ಕೆ. ಸುರೇಶ್ ಹಾಗೂ ಎಂಎಲ್‌ಸಿ ಎಸ್. ರವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+