ಬಿಟ್ ಕಾಯಿನ್ ಹಗರಣ: ಡಿವೈಎಸ್‌ಪಿ ಶ್ರೀಧರ್ ಪೂಜಾರ್‌ಗೆ ಬಿಗ್ ರಿಲೀಫ್
ಬೆಂಗಳೂರು, ಮೇ 03: ಕರ್ನಾಟಕಲ್ಲಿ ಭಾರೀ ಸದ್ದು ಮಾಡಿರುವ ಬಿಟ್ ಕಾಯಿನ್ ಪ್ರಕರಣದಲ್ಲಿ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್‌ಗೆ ದೊಡ್ಡ ರಿಲೀಫ್ ಸಿಕ್ಕಿದೆ. ಅವರು ಬಂಧನ ಭೀತಿಯಿಂದ ಪಾರಾಗುವ ಜತೆಗೆ ಘೋಷಿತ ಅಪರಾಧಿ ಪಟ್ಟದಿಂದಲೂ ಹೊರಬಂದಿದ್ದಾರೆ.
ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಶ್ರೀಧರ್ ಕೆ. ಪೂಜಾರ್ ಅವರ ವಿರುದ್ಧ ಘೋಷಿತ ಆರೋಪಿ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.

ಹಾಗಾಗಿ ಅವರು ಇನ್ನು ನಿರುಮ್ಮಳವಾಗಿರಬಹುದು. ಅಲ್ಲದೆ, ಮೇ 8ರಂದು ಬೆಳಗ್ಗೆ 9 ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕು. ನಂತರ 2 ಲಕ್ಷ ರೂ. ಬಾಂಡ್ ಪಡೆದು ಬಿಡುಗಡೆ ಮಾಡಬೇಕು. ಪೊಲೀಸರ ತನಿಖೆಗೆ ಆರೋಪಿ ಶ್ರೀಧರ್ ಕೆ. ಪೂಜಾರ್ ಸಹಕರಿಸಬೇಕು. ಜಾಮೀನು ಅರ್ಜಿ ಸಲ್ಲಿಸಿದ್ದರೆ ಪೊಲೀಸರು ಆಕ್ಷೇಪಿಸಬಾರದು ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಎ.ಐ.ಆರ್ ಹಾಗೂ ವಿಚಾರಣಾ ನ್ಯಾಯಾಲಯ ಘೋಷಿತ ಆರೋಪಿ ಎಂದು ವಾರಂಟ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀಷಾನಂದ ಅವರ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.
ಶ್ರೀಧರ್ ಕೆ. ಪೂಜಾರ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಅರ್ಜಿದಾರರು ದೇಶದಲ್ಲಿ ಕಾನೂನು ಪಾಲಿಸುವ ನಾಗರಿಕರಾಗಿದ್ದು, ಉನ್ನತ ಹುದ್ದೆಯಲ್ಲಿದ್ದಾರೆ. ಅವರು ಯಾವುದೇ ಅಪರಾಧ ಮಾಡಿಲ್ಲ. ಆದರೆ ಇಲ್ಲಿ ರಾಜಕೀಯ ಉದ್ದೇಶಕ್ಕಾಗಿ ಅವರ ವೃತ್ತಿಪರ ಘನತೆಯನ್ನು ಹಾಳು ಮಾಡುವ ಸಲುವಾಗಿ ಪ್ರಕರಣದಲ್ಲಿ ಅವರನ್ನು ಆರೋಪಿ ಎಂಬಂತೆ ಬಿಂಬಿಸಲಾಗಿದೆ.
ಮಧ್ಯಂತರ ಆದೇಶದ ಮೇರೆಗೆ ಅರ್ಜಿದಾರರು ವಿಚಾರಣೆಗೆ ಹಾಜರಾಗಿದ್ದು ತನಿಖೆಗೂ ಸಹಕರಿಸಿದ್ದಾರೆ. ಆದರೆ ಪ್ರತಿವಾದಿಗಳು ಅವರು ತನಿಖೆಗೆ ಹಾಜರಾಗಿಲ್ಲ ಎಂದಿರುವುದು ಆಧಾರ ರಹಿತ ಆಪಾದನೆ. ಜತೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ನೀಡದೆ ವಾರೆಂಟ್ ಜಾರಿಗೊಳಿಸಿದ್ದು ಕಾನೂನಿಗೆ ವಿರುದ್ಧವಾದ ನಡೆ. ಭಾರತದ ಸಂವಿಧಾನದ 19 ಮತ್ತು 21 ನೇ ವಿಧಿಯ ಅಡಿಯಲ್ಲಿ ಅರ್ಜಿದಾರರು ಇದು ನ್ಯಾಯ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಖಾತರಿಪಡಿಸುತ್ತದೆ. ಹಾಗಾಗಿ ಅರ್ಜಿದಾರರ ವಿರುದ್ಧ ಪ್ರಕರಣಗಳನ್ನು ರದ್ದುಗೊಳಿಸುವಂತೆ ನ್ಯಾಯಪೀಠವನ್ನು ಮನವಿ ಮಾಡಿದ್ದು, ಮುಂದಿನ ಎಲ್ಲ ಹಂತದ ತನಿಖೆಗೂ ಆರೋಪಿಗಳು ಸಹಕರಿಸುವಂತೆ ಭರವಸೆ ನೀಡಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್ ಅರ್ಜಿದಾರರು ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದರು. ಅವರು ವಿಚಾರಣೆಗೆ ಹಾಜರಾಗಿಲ್ಲ ಎಂದಿರುವ ಬಗ್ಗೆ ಅಸಮಾಧಾನ ಹೊರಹಾಕಿದರು ಅದಕ್ಕೆ ನ್ಯಾಯಪೀಠ,'ನಿನ್ನೆ ತಪ್ಪುಗಳೇ ನಾಳಿನ ಪಾಠಗಳು' ಪ್ರಾಸಿಕೂಷನ್ ಏಜೆನ್ಸಿ ಚಿಂತನೆ ಬದಲಾಗಬೇಕಾಗಿದೆ. ಇಲ್ಲಿ ಅಧಿಕಾರಿಗಳು ಆರೋಪಿಗಳನ್ನು ದೇಶ ವಿರೋಧಿಗಳು ಎಂದು ಭಾವಿಸುವುದರ ಬದಲಿಗೆ ಯಾರೋ ಓರ್ವ ಪ್ರಜೆ ಸಮಾಜಕ್ಕೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾನೆ. ಆ ವ್ಯಕ್ತಿಯನ್ನು ಹೇಗೆ ಕಾನೂನಿನ ಚೌಕಟ್ಟಿನಲ್ಲಿ ತಂದು ನಿಲ್ಲಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಮೌಖಿಕವಾಗಿ ಸಲಹೆ ನೀಡಿತು.
ಪ್ರಕರಣದ ಹಿನ್ನೆಲೆ: ಬಿಟ್ ಕಾಯಿನ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾಗ ತಂಡದಲ್ಲಿ ಶ್ರೀಧರ್ ಪೂಜಾರಿ ಕೂಡ ಇದ್ದರು. ಈ ವೇಳೆ ಅಕ್ರಮ ಎಸಗಿರುವ ಆರೋಪ ಕೇಳಿಬಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಎಸ್‌ಐಟಿ ಫೆ. 17 ರಂದು ಶ್ರೀಧರ್ ಪೂಜಾರಿ ಬಂಧನಕ್ಕೆ ಮುಂದಾಗಿತ್ತು. ಈ ವೇಳೆ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿ ಶ್ರೀಧರ್ ಪೂಜಾರಿ ಪರಾರಿಯಾಗಿದ್ದರು.












Click it and Unblock the Notifications