Karnataka Fisherman alert: ಕರಾವಳಿಗೆ ಭಾರಿ ಮಳೆ, ಮೀನುಗಾರರಿಗೆ IMDಎಚ್ಚರಿಕೆ
ಬೆಂಗಳೂರು, ಜೂನ್ 11: ಬಿಪರ್‌ಜಾಯ್ ಚಂಡಮಾರುತ ಪ್ರಭಾವದಿಂದಾಗಿ ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ವ್ಯಾಪಕ ಮಳೆಯಾಗಲಿಲಿದೆ. ಈ ಸಂಬಂಧ ಯೆಲ್ಲೋ ಅಲರ್ಟ್ ನೀಡಿದ್ದ ಭಾರತೀಯ ಹವಾಮಾನ ಇಲಾಖೆ ಇದೀಗ ಮೀನುಗಾರರಿಗೂ ಎಚ್ಚರಿಕೆ ಸಹ ನೀಡಿದೆ.
ವಿಶೇಷವೆಂದರೆ ಕರ್ನಾಟಕದಲ್ಲಿ ಕೆಲವೆಡೆ ಜೋರು ಮಳೆ ಮುನ್ಸೂಚನೆ ಇದ್ದರೆ, ಇನ್ನೂ ಹಲವು ಕಡೆಗಳಲ್ಲಿ ಉಷ್ಣಾಂಶದಲ್ಲಿ ಏರಿಕೆ ಕಂಡು ಬರಲಿದೆ. ರಾಜ್ಯ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಬರಲಿದೆ. ಹೀಗಾಗಿ ಸೋಮವಾರ ಒಂದು ದಿನ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಈ ಕರಾವಳಿ ಭಾಗದಲ್ಲಿ ಗಾಳಿಯ ಬೀಸುವಿಕೆ ಪ್ರಮಾಣ ಪ್ರತಿ ಗಂಟೆಗೆ 45-50 ಕಿಲೋ ಮೀಟರ್ ವರೆಗೂ ಬೀಸಲಿದೆ. ಈಗಾಗಲೇ ಅರಬ್ಬಿ ಸಮುದ್ರದಲ್ಲಿನ ಚಂಡಮಾರುತವು ಗುಜರಾತ್ ಸೌರಾಷ್ಟ್ರ ಮಾರ್ಗವಾಗಿ ಬೀಸಿದೆ. ಹೀಗಾಗಿ ಕರ್ನಾಟಕಕ್ಕೆ ಸೈಕ್ಲೋನ್ ದುಷ್ಪರಿಣಾಮ ಇಲ್ಲ ಎಂದು ಹವಾಮಾನ ಇಲಾಖೆ ಖಚಿತ ಪಡಿಸಿದೆ.
ಗಾಳಿಯ ವೇಗ ಪ್ರತಿ ಗಂಟೆಗೆ 55 ಕಿ.ಮೀ
ಹೀಗಿದ್ದರೂ ಸೈಕ್ಲೋನ್ ಗಾಳಿಯ ತೀವ್ರತೆ ತುಸು ಕಂಡು ಬರಲಿದೆ. ಕೆಲವೊಮ್ಮೆ ಗಾಳಿಯ ವೇಳೆಗೆ ಗಾಳಿಯ ವೇಗ 55 ಕಿಲೋ ಮೀಟರ್ ನಷ್ಟಕ್ಕೆ ಬದಲಾಗುವ ಸಾಧ್ಯತೆ ಯೂ ಇದೆ. ಆದ್ದರಿಂದ ರಾಜ್ಯದ ಕರಾವಳಿಯ ಮೀನುಗಾರರು ಮೀನುಗಾರಿಕೆಗೆ ಇಳಿಯದಂತೆ ಐಎಂಡಿ ಸೂಚನೆ ನೀಡಲಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಪ್ರದೇಶದ ಉಳಿದ ಜಿಲ್ಲೆಗಳಲ್ಲಿ ಅತಿ ಹಗುರದಿಂದ ಕೆಲವೊಮ್ಮೆ ಲಘು ಮಳೆಯಾಗಲಿದೆ.

ಮಳೆನಾಡು-ಉತ್ತರ ಒಳನಾಡಿನಲ್ಲೂ ಮಳೆ
ಮಲೆನಾಡಿನ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಒಂದಲ್ಲ ಒಂದು ಕಡೆ ಭಾರೀ ಮಳೆಯಾಗುವ ಸಂಭವವಿದ್ದು, ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಅಂದಾಜಿಸಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅತೀ ಕಡಿಮೆ ಮಳೆ ಬೀಳುವ ನಿರೀಕ್ಷೆ ಇದೆ. ಬಹುತೇಕ ಕಡೆಗಳಲ್ಲಿ ಒಣ ಹವೆ ಅಧಿಕ ತಾಪಮಾನ ಮುಂದುವರಿಯುವ ಲಕ್ಷಣಗಳು ಇವೆ.
ಸದ್ಯ ಬಿಪರ್‌ಜಾಯ್ ಚಂಡಮಾರುತವು ತೀವ್ರತೆ ಪಡೆದುಕೊಂಡಿದೆ. ಆದರೆ ಅದೃಷ್ಟವಶಾತ್ ಕರ್ನಾಟಕದತ್ತ ಸಾಗಿ ಬಂದಿಲ್ಲ. ಬದಲಾಗಿ ಗುಜರಾತ್, ಪಾಕಿಸ್ತಾನ ಕರಾವಳಿ ಭಾಗದತ್ತ ಸಾಗಿದೆ. ಗಾಳಿ ತೀವ್ರತೆ ಹೆಚ್ಚಿಸಿಕೊಂಡಿರುವ ಸೈಕ್ಲೋನ್ ಆ ಭಾಗದಲ್ಲಿ ಅಧಿಕ ಹಾನಿ ಉಂಟು ಮಾಡುವ ನಿರೀಕ್ಷೆ ಇದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಜೂನ್ 15ರವರೆಗೆ ಈ ಚಂಡಮಾರುತದ ಅಬ್ಬರ ಕಂಡು ಬರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.












Click it and Unblock the Notifications