Bihar Results: ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿಗೆ ಅಭಿನಂದನೆಗಳು!
ಬೆಂಗಳೂರು, ನವೆಂಬರ್ 14: ಬಿಹಾರಕ್ಕೆ ಇಂದು ನಿರ್ಣಾಯಕ ದಿನ, ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಎನ್‌ಡಿಎ ಹಲವು ಕ್ಷೇತ್ರಗಳಲ್ಲಿ ಮುನ್ನಡೆಯನ್ನ ಸಾಧಿಸಿದೆ. ಈ ಬಗ್ಗೆ ಕರ್ನಾಟಕದ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು ಟ್ವೀಟ್ ಮಾಡಿದ್ದು, ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳನ್ನ ತಿಳಿಸಿದ್ದಾರೆ.
ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿಬಿಡಬಹುದೇನೋ ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನ ಎಷ್ಟು ಚುನಾವಣೆಗಳಲ್ಲಿ ಸೋಲಿಸಿದ್ದಾರೆ ಎನ್ನುವುದನ್ನು ಲೆಕ್ಕ ಮಾಡುವುದು ಕಷ್ಟ. ಸುಶಾಸನ, ಭ್ರಷ್ಟಾಚಾರ ಮುಕ್ತ ಆಡಳಿತ, ಅಭಿವೃದ್ಧಿ ರಾಜಕಾರಣದಿಂದಾಗಿ ಜನಮನ್ನಣೆ ಗಳಿಸಿರುವ ಸನ್ಮಾನ್ಯ ಶ್ರೀ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಸರ್ಕಾರದ ಮುಂದೆ ಜಂಗಲ್ ರಾಜ್ ಕುಖ್ಯಾತಿಯ ಆರ್ ಜೆಡಿ - ಕಾಂಗ್ರೆಸ್ ಮಹಾಘಟಬಂಧನ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಪಕ್ಕಕ್ಕೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ರಾಹುಲ್ ಗಾಂಧಿ ಅವರು ಮುಖಭಂಗ ತಪ್ಪಿಸಿಕೊಳ್ಳಲು ವೋಟ್ ಚೋರಿ ಎಂಬ ಕಟ್ಟುಕಥೆ ಮೂಲಕ ಜನರನ್ನ ದಿಕ್ಕು ತಪ್ಪಿಸಲು ಹೊರಟಿದ್ದು.

ಆದರೆ ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ "ವೋಟ್ ಚೋರಿ" ಪ್ರಹಸನವ್ನ ಸಾರಾಸಗಟಾಗಿ ತಿರಸ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಸ್ಪಷ್ಟ ಜನಾದೇಶ ನೀಡಿದ್ದಾರೆ. ಹರಿಯಾಣ, ಮಹಾರಾಷ್ಟ್ರ, ಬಿಹಾರದಲ್ಲಿ ಬಂದಿರುವ ಸ್ಥಿತಿಯೇ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲೂ ಬರುವ ದಿನ ಬಹಳ ದೂರವಿಲ್ಲ. ಈಗಾಗಲೇ ಜನಮನ್ನಣೆ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲೂ ಧೂಳೀಪಟ ಆಗುವುದು ನೂರಕ್ಕೆ ನೂರು ಗ್ಯಾರೆಂಟಿ. NDA ಗೆಲುವಿಗೆ ಕಾರಣೀಭೂತರಾದ ಬಿಜೆಪಿ ಸೇರಿದಂತೆ ಮೈತ್ರಿಕೂಟದ ಎಲ್ಲ ನಾಯಕರು, ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಆರ್ ಅಶೋಕ್ ತಿಳಿಸಿದ್ದಾರೆ.
ಇನ್ನೂ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರೈತರು ವರ್ಷವಿಡೀ ಬೆವರು ಸುರಿಸಿ ಬೆಳೆದ ನೂರಾರು ಟನ್ ಕಬ್ಬು, ಲಕ್ಷಾಂತರ ರೂಪಾಯಿ ಬೆಳೆಬಾಳುವ 50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಬೆಂಕಿಗೆ ಆಹುತಿ ಆಗುತ್ತಿರುವ ಹೃದಯವಿದ್ರಾವಕ ದೃಶ್ಯಾವಳಿಗಳು ದಿಗ್ಭ್ರಮೆ ಮೂಡಿಸಿದೆ. ರಾಜ್ಯದ ಕಬ್ಬು ಬೆಳೆಗಾರರ ಇಂದಿನ ಈ ದಾರುಣ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿ, ಸಮಾಧಾನದಿಂದ ಅವರ ಸಮಸ್ಯೆ ಕೇಳಿ, ಅವರಿಗೆ ಧೈರ್ಯ ತುಂಬಿ, ಒಮ್ಮತವಾದ ಒಂದು ಬೆಲೆ ನಿಗದಿ ಮಾಡಿ, ಕೂಡಲೇ ರೈತರಿಗೆ ಹಣ ತಲುಪಿಸುವುದು ಬಿಟ್ಟು, ಬೆಂಗಳೂರಿನ ಎಸಿ ಕಚೇರಿಗಳಲ್ಲಿ ಕಾಟಾಚಾರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಸಭೆ ನಡೆಸಿ ಕೈತೊಳೆದುಕೊಂಡ ಸಿಎಂ ಸಿದ್ದರಾಮಯ್ಯ ಸರ್ಕಾರ, ಇವತ್ತು ರೈತರು ನಡುಬೀದಿಯಲ್ಲಿ ಕಣ್ಣೀರಿಡುವ ದುಸ್ಥಿತಿಗೆ ತಂದಿಟ್ಟಿದೆ.
ಭೂತಾಯಿಯನ್ನೇ ನಂಬಿ ಬದುಕುವ ರೈತನಿಗೆ, ಮಣ್ಣನ್ನೇ ನಂಬಿ ಬದುಕುವ ರೈತನಿಗೆ ಆತ ಬೆಳೆದ ಬೆಳೆ ತನ್ನ ಹೆತ್ತ ಮಗುವಿನ ಸಮಾನ. ತನ್ನ ಕಣ್ಣು ಮುಂದೆಯೇ ಆತ ವರ್ಷವಿಡೀ ಕಷ್ಟ ಪಟ್ಟು ಬೆಳೆದ ಬೆಳೆ ಸುಟ್ಟು ಭಸ್ಮವಾಗುವುದನ್ನು ನೋಡಬೇಕಾದರೆ ಆ ರೈತ ಎಷ್ಟು ಸಂಕಟ ಪಟ್ಟಿರಬೇಡ, ಅನ್ನದಾತನ ಹೊಟ್ಟೆ ಎಷ್ಟು ಉರಿದಿರಬೇಡ.
ಕಾಂಗ್ರೆಸ್ ಸರ್ಕಾರ ಇನ್ನಾದರೂ ಈ ನಿರ್ಲಕ್ಷ್ಯ ಧೋರಣೆ ಬಿಟ್ಟು ಕಬ್ಬು ಬೆಳೆಗಾರರ ಸಮಸ್ಯೆಯನ್ನ ಗಂಬೀರವಾಗಿ ಪರಿಗಣಿಸಬೇಕು. ಇವತ್ತಿನ ಘಟನೆಯಿಂದ ರೈತರಿಗೆ ಉಂಟಾಗಿರುವ ನಷ್ಟವನ್ನ ಸರ್ಕಾರ ಸೂಕ್ತ ಪರಿಹಾರದ ಮೂಲಕ ರೈತರಿಗೆ ತುಂಬಿಕೊಡಬೇಕು. ಮುಖ್ಯಮಂತ್ರಿಗಳೇ ಸ್ವತಃ ರೈತರನ್ನು ಭೇಟಿ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ನಾಡಿನ ಅನ್ನದಾತರ ಈ ಹೋರಾಟದಲ್ಲಿ ಬಿಜೆಪಿ ಹೆಗಲಿಗೆ ಹೆಗಲು ಕೊಟ್ಟು ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.












Click it and Unblock the Notifications