ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ತನಿಖೆ ಎಸಿಬಿಗೆ: ಕೋಟಾ ಶ್ರೀನಿವಾಸ ಪೂಜಾರಿ
ಬೆಂಗಳೂರು, ಮಾ.7: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರಗಳನ್ನು ಸಮಗ್ರ ತನಿಖೆ ನಡೆಸಲು ಭ್ರಷ್ಟಚಾರ ನಿಗ್ರಹ ದಳದಿಂದ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಸುನೀಲ್ ವಲ್ಯಾಪುರೆ ನಿಯಮ 72ರ ಅಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ದೂರುಗಳ ಬಂದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ನಡೆಸಲಾಗಿದೆ. ಮೇಲ್ನೋಟಕ್ಕೆ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು, ನಿಗಮದ ಪ್ರಧಾನ ವ್ಯವಸ್ಥಾಪಕರು, ನಿಗಮದ ಕಚೇರಿ ಅಧಿಕ್ಷಕರು ಸೇರಿ ಮೂರು ಜನರನ್ನು ತಾವು ಸಚಿವರಾದ ಮೇಲೆ ಅಮಾನತು ಮಾಡಿದ್ದಾಗಿ ತಿಳಿಸಿದರು.
ಅಮಾನತಾದವರು ಕೆಎಟಿಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ, ಅದನ್ನು ತೆರವು ಮಾಡಲು ಪ್ರಯತ್ನಿಸಲಾಗುತ್ತಿದೆ. ಅಮಾನತಾದ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನಿಗಮದಲ್ಲಿ ನಡೆದಿರುವ ಅವ್ಯವಾಹರಗಳನ್ನು ಸಮಗ್ರ ತನಿಖೆ ನಡೆಸಲು ಎಸಿಬಿ ವಹಿಸಲಾಗಿದೆ. ಕಚೇರಿ ಸ್ಥಳಾಂತರ ಸೇರಿ ಎಲ್ಲವನ್ನು ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ನಿಗಮದಲ್ಲಿ ಖರ್ಚಾಗದೆ ಉಳಿದ ಬಾಕಿ ಇರುವ ಅನುದಾನವನ್ನು ಮುಂದಿನ ಮೂರು ತಿಂಗಳಲ್ಲಿ ಖರ್ಚು ಮಾಡುವುದಾಗಿ ಭರವಸೆ ನೀಡಿದರು.












Click it and Unblock the Notifications