ನಿರಂತರ ನಷ್ಟದಲ್ಲಿದ್ದ ಭದ್ರಾವತಿಯ VISLಗೆ ಲಾಭದ ಟರ್ನ್; 3 ತಿಂಗಳಲ್ಲಿ ₹4 ಕೋಟಿ ನಿವ್ವಳ ಲಾಭ
ಶಿವಮೊಗ್ಗ: ನಿರಂತರ ನಷ್ಟದ ಸುಳಿಗೆ ಸಿಲುಕಿದ್ದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL) ಇದೀಗ ಚೇತರಿಕೆಯ ಹಾದಿಗೆ ಮರಳಿದೆ. ಕೇಂದ್ರ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ಸುಧಾರಣಾ ಕ್ರಮಗಳು ಮತ್ತು ಪರಿಶೀಲನೆಗಳ ನಡುವೆಯೇ ಘಟಕವು ಸತತ ಮೂರು ತಿಂಗಳು ನಿವ್ವಳ ಲಾಭ ದಾಖಲಿಸಿದೆ.
2026ರ ಜುಲೈನಲ್ಲಿ ₹0.33 ಕೋಟಿ, ಆಗಸ್ಟ್‌ನಲ್ಲಿ ₹1.71 ಕೋಟಿ ಹಾಗೂ ಸೆಪ್ಟೆಂಬರ್‌ನಲ್ಲಿ ₹1.96 ಕೋಟಿ ನಿವ್ವಳ ಲಾಭವನ್ನು VISL ದಾಖಲಿಸಿದೆ. ಈ ಮೂಲಕ ಮೂರು ತಿಂಗಳಲ್ಲಿ ಒಟ್ಟು ಸುಮಾರು ₹4 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಾರ್ಮಿಕರ ನಿರಂತರ ಪ್ರಯತ್ನ, ಬದ್ಧತೆ
ಈ ಬೆಳವಣಿಗೆ ಕುರಿತು ಸಂತಸ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕಾರ್ಖಾನೆಯ ಸುಧಾರಿತ ಆರ್ಥಿಕ ಕಾರ್ಯಕ್ಷಮತೆಯು ಅಲ್ಲಿನ ಕಾರ್ಮಿಕರ ನಿರಂತರ ಪ್ರಯತ್ನ, ಬದ್ಧತೆ ಮತ್ತು ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಉಕ್ಕು ವಲಯ ಹಾಗೂ ಅದರ ಸಂಸ್ಥೆಗಳನ್ನು ಬಲಪಡಿಸುವತ್ತ ಕೇಂದ್ರ ಸರ್ಕಾರ ಗಮನಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ VISLನ ಇತ್ತೀಚಿನ ಕಾರ್ಯಕ್ಷಮತೆ ಉತ್ತೇಜನಕಾರಿ ಬೆಳವಣಿಗೆಯಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಭರ್ಜರಿ ಸುಧಾರಣೆ
VISLನ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸೆಪ್ಟೆಂಬರ್ ತಿಂಗಳ ಬೆಳವಣಿಗೆ ಗಮನಾರ್ಹವಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ₹27.48 ಕೋಟಿ ಇದ್ದ ನಿವ್ವಳ ಆದಾಯವು 2026ರ ಸೆಪ್ಟೆಂಬರ್‌ನಲ್ಲಿ ₹51.87 ಕೋಟಿಗೆ ಏರಿಕೆಯಾಗಿದೆ.
ಅದೇ ಅವಧಿಯಲ್ಲಿ 2025ರ ಸೆಪ್ಟೆಂಬರ್‌ನಲ್ಲಿ ₹3.78 ಕೋಟಿ ನಷ್ಟ ದಾಖಲಿಸಿದ್ದ ಕಾರ್ಖಾನೆ, 2026ರ ಸೆಪ್ಟೆಂಬರ್‌ನಲ್ಲಿ ₹1.96 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಹೀಗಾಗಿ ಆದಾಯದಲ್ಲಿ ಗಣನೀಯ ಏರಿಕೆಯಾಗಿರುವುದರ ಜೊತೆಗೆ ನಷ್ಟದಿಂದ ಲಾಭದತ್ತ ಘಟಕ ತಿರುಗಿರುವುದು ಮಹತ್ವದ ಬೆಳವಣಿಗೆಯಾಗಿದೆ.
Bhadravati VISL: ₹20 ಕೋಟಿಗೂ ಹೆಚ್ಚು ನಷ್ಟ ಕಡಿತ
ಕಾರ್ಖಾನೆಯ ಒಟ್ಟಾರೆ ಆರ್ಥಿಕ ಸ್ಥಿತಿಯಲ್ಲಿಯೂ ಸುಧಾರಣೆ ಕಂಡುಬಂದಿದೆ. 2026ರ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ VISLನ ನಿವ್ವಳ ನಷ್ಟ ₹2.03 ಕೋಟಿ ಗೆ ಇಳಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನಿವ್ವಳ ನಷ್ಟ ₹22.77 ಕೋಟಿ ಇತ್ತು. ಅಂದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹20 ಕೋಟಿಗೂ ಹೆಚ್ಚಿನ ಸುಧಾರಣೆ ಕಂಡುಬಂದಿದೆ.
Bhadravati VISL: ಕಾರ್ಮಿಕರಿಗೆ ಅಭಿನಂದನೆ
ಕಾರ್ಖಾನೆಯ ಕಾರ್ಯಕ್ಷಮತೆ ಸುಧಾರಿಸುವಲ್ಲಿ ಕಾರ್ಮಿಕರು ಮತ್ತು ಸಂಪೂರ್ಣ ತಂಡ ತೋರಿದ ಬದ್ಧತೆ, ಶಿಸ್ತು ಹಾಗೂ ನಿರಂತರ ಪರಿಶ್ರಮವನ್ನು ಕುಮಾರಸ್ವಾಮಿ ಶ್ಲಾಘಿಸಿದ್ದಾರೆ.
ಕಾರ್ಖಾನೆಯಲ್ಲಿ ಕಂಡುಬಂದಿರುವ ಪ್ರಗತಿಯು ಕಾರ್ಯಪಡೆಯ ಬದ್ಧತೆ ಮತ್ತು ಕಠಿಣ ಪರಿಶ್ರಮದ ಪ್ರತಿಬಿಂಬವಾಗಿದೆ. ಈ ಉತ್ತೇಜಕ ಕಾರ್ಯಕ್ಷಮತೆಗಾಗಿ ಕಾರ್ಮಿಕರು ಹಾಗೂ ಕಾರ್ಖಾನೆಯ ತಂಡವನ್ನು ಅಭಿನಂದಿಸುವುದಾಗಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. VISLನ ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸಿ, ಘಟಕದ ಭವಿಷ್ಯವನ್ನು ಹೆಚ್ಚು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಇದೇ ಸಕಾರಾತ್ಮಕ ವೇಗವನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ.


Click it and Unblock the Notifications
