BESCOM: ರಾಜ್ಯದ 20 ಪಟ್ಟಣಗಳಲ್ಲಿ 2 ದಿನ ಬೆಸ್ಕಾಂ ಆನ್‌ಲೈನ್ ಸೇವೆ ಸ್ಥಗಿತ: ಈ ಲಿಸ್ಟ್‌ನಲ್ಲಿ ನಿಮ್ಮೂರು ಇದ್ಯಾ?
BESCOM Big Alert: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಆದರೆ ಇದೀಗ ಬೆಸ್ಕಾಂ ತಂತ್ರಾಂಶ ಉನ್ನತೀಕರಣ ಕಾರ್ಯ ಹಿನ್ನೆಲೆ ಸೆಪ್ಟೆಂಬರ್ 16 ಹಾಗೂ 17ರಂದು ವಿವಿಧ ಜಿಲ್ಲೆಗಳ 20 ಪಟ್ಟಣಗಳಲ್ಲಿ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ತಿಳಿಸಿದೆ. ಹಾಗಾದ್ರೆ ಯಾವ ಸೇವೆ ಸ್ಥಗಿತ ಹಾಗೂ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ತಂತ್ರಾಂಶ ಉನ್ನತೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಆನ್‌ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ. ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 17ರ ಮಧ್ಯರಾತ್ರಿಯವರೆಗೆ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವೆಲ್ಲಾ ಸೇವೆಗಳು ಸ್ಥಗಿತ?
* ಈ ಎರಡು ದಿನಗಳ ಅವಧಿಯಲ್ಲಿ ಗ್ರಾಹಕರಿಗೆ ಕೆಳಕಂಡ ಪ್ರಮುಖ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ.
* ವೆಬ್‌ಸೈಟ್ ಅಥವಾ ಯುಪಿಐ ಆ್ಯಪ್‌ಗಳ ಮೂಲಕ ವಿದ್ಯುತ್ ಬಿಲ್ ಪಾವತಿ ಸೌಲಭ್ಯ ಇರುವುದಿಲ್ಲ.
* ನೂತನ ಗೃಹ ಅಥವಾ ವಾಣಿಜ್ಯ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ.
* ಮೀಟರ್ ಮಾಲೀಕತ್ವದ ಹೆಸರು ಬದಲಾವಣೆ ಪ್ರಕ್ರಿಯೆ.
* ಹೆಚ್ಚುವರಿ ಲೋಡ್ ಮಂಜೂರಾತಿ ಅಥವಾ ಲೋಡ್ ಬದಲಾವಣೆ ಸೇವೆಗಳು.
* ಬೆಸ್ಕಾಂ ಪೋರ್ಟಲ್ ಮೂಲಕ ಇರುವ ಇತರ ನಾಗರಿಕ ಆನ್‌ಲೈನ್ ಸೇವೆಗಳು.
ಎಲ್ಲೆಲ್ಲಿ ಆನ್‌ಲೈನ್ ಸೇವೆ ಸ್ಥಗಿತ?
ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ, ತುರುವೇಕೆರೆಯಲ್ಲಿ ಬೆಸ್ಕಾಂ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಬೆಸ್ಕಾಂ ಆನ್‌ಲೈನ್ ಸೇವೆ ಸ್ಥಗಿತದ ಉದ್ದೇಶ ಏನು?
ಕೇಂದ್ರ ಸರ್ಕಾರದ ನೆರವಿನ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ಮತ್ತಷ್ಟು ವೇಗದ ಮತ್ತು ಅತ್ಯಾಧುನಿಕ ಡಿಜಿಟಲ್ ಸೇವೆಗಳನ್ನು ಕಲ್ಪಿಸಲು ಹೊಸ ಐಟಿ ಅಪ್ಲಿಕೇಶನ್ ಅನ್ನು ಅಳವಡಿಕೆ ಮಾಡಲಾಗುತ್ತಿದೆ. ಪ್ರಸ್ತುತ ಬಳಕೆಯಲ್ಲಿರುವ ಸಾಫ್ಟ್‌ವೇರ್ ಅನ್ನು ಅಪ್‌ಗ್ರೇಡ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ವರ್ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರು ಈ ತಾಂತ್ರಿಕ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು ಸಹಕರಿಸಬೇಕು ಹಾಗೂ ಆನ್‌ಲೈನ್ ಸೇವೆಗಳಿಗಾಗಿ ಸೆಪ್ಟೆಂಬರ್ 18ರ ನಂತರ ಪ್ರಯತ್ನಿಸಬೇಕು ಎಂದು ಬೆಸ್ಕಾಂ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಅಧಿಕೃತ ವೆಬ್‌ಸೈಟ್‌ನ ಸೇವೆ ಲಭ್ಯ ಇರುವುದಿಲ್ಲ ಅಂತಲೂ ತಿಳಿಸಿದೆ.


Click it and Unblock the Notifications
