ಪರಿಷತ್ ಉಪ ಚುನಾವಣೆ; ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಸೋಲು
ಬೆಂಗಳೂರು, ಫೆಬ್ರವರಿ 20; ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ-2024ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದರು. ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗೆ ಸೋಲಾಗಿದೆ.
ಮಂಗಳವಾರ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ-2024ರ ಮತ ಎಣಿಕೆ ನಡೆಯಿತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ 1506 ಮತಗಳ ಅಂತರದಲ್ಲಿ ಗೆಲುವು ಕಂಡರು.

ಮೈತ್ರಿ ಮಾಡಿಕೊಂಡು ಬಿಜೆಪಿ-ಜೆಡಿಎಸ್ ಚುನಾವಣೆ ಎದುರಿಸಿತ್ತು. ಬಿಜೆಪಿ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಮೈತ್ರಿಕೂಟದ ಅಭ್ಯರ್ಥಿಯಾಗಿ ಎ. ಪಿ. ರಂಗನಾಥ್ ಕಣಕ್ಕಿಳಿದಿದ್ದರು.
ಮೈತ್ರಿಕೂಟಕ್ಕೆ ಸೋಲು: ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಯಲ್ಲಿ 15 ಸಾವಿರಕ್ಕೂ ಅಧಿಕ ಮತದಾರರು ಇದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ ಮೊದಲ ಸುತ್ತಿನಲ್ಲಿಯೇ 963 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರು. ಬಳಿಕ ಅವರು ಮುನ್ನಡೆ ಪಡೆಯುತ್ತಲೇ ಹೋದರು. ಅಂತಿಮವಾಗಿ 1506 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಪುಟ್ಟಣ್ಣ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. 2023ರ ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ಅವರ ಪರಿಷತ್ ಸದಸ್ಯತ್ವದ ಅವಧಿ ಇನ್ನೂ ಬಾಕಿ ಇರುವಾಗಲೇ ಅವರು ಪರಿಷತ್ ಸದಸ್ಯತ್ವ ಮತ್ತು ಬಿಜೆಪಿಗೆ ರಾಜೀನಾಮೆ ನೀಡಿದ್ದರು.
ಬಿಜೆಪಿ ಮತ್ತು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಪುಟ್ಟಣ್ಣ ಕಾಂಗ್ರೆಸ್ ಸೇರಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅವರನ್ನು ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಕ್ಷೇತ್ರದಲ್ಲಿ ಪುಟ್ಟಣ್ಣ 50564 ಮತಗಳನ್ನು ಪಡೆದು, ಬಿಜೆಪಿಯ ಅಭ್ಯರ್ಥಿ ಎಸ್. ಸುರೇಶ್ ಕುಮಾರ್ ವಿರುದ್ಧ ಸೋಲು ಕಂಡರು.
ಅವರ ರಾಜೀನಾಮೆಯಿಂದ ತೆರವಾದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಪುಟ್ಟಣ್ಣಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಈಗ ಉಪ ಚುನಾವಣೆಯಲ್ಲಿ ಅವರು ಗೆಲ್ಲುವ ಮೂಲಕ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ರಚನೆಯಾದ ಬಳಿಕ ನಡೆದ ಮೊದಲ ಚುನಾವಣೆ ಇದು. ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಸೋಲು ಉಂಟಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸುವ ಮೂಲಕ ಕಾಂಗ್ರೆಸ್ ನಾಯಕರ ಲೋಕಸಭೆ ಚುನಾವಣೆ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ.
ಜೆಡಿಎಸ್ ಮೂಲಕ ರಾಜಕೀಯ ಆರಂಭಿಸಿದ ಪುಟ್ಟಣ್ಣ ಬಳಿಕ ಬಿಜೆಪಿ ಸೇರಿದರು. ಜೆಡಿಎಸ್‌ನಿಂದ ಮೂರು ಬಾರಿ ಪರಿಷತ್‌ಗೆ ಆಯ್ಕೆಯಾದ ಅವರು, ಒಂದು ಬಾರಿ ಬಿಜೆಪಿಯಿಂದ ಆಯ್ಕೆಗೊಂಡರು. ಈಗ ಕಾಂಗ್ರೆಸ್‌ನಿಂದ ಪರಿಷತ್ ಪ್ರವೇಶ ಮಾಡಿದ್ದಾರೆ.
ಪುಟ್ಟಣ್ಣ ಜೆಡಿಎಸ್ ಪಕ್ಷದಲ್ಲಿ ಇದ್ದಾಗ ವಿಧಾನ ಪರಿಷತ್ ಉಪ ಸಭಾಪತಿಯಾಗಿಯೂ ಕೆಲಸ ಮಾಡಿದ್ದರು. ಅವರು ಏಕೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದರು? ಎಂಬುದು ಹಲವರ ಪ್ರಶ್ನೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟ ಸೇರಲು ಅವರು ಬಿಜೆಪಿ ಸೇರಿದರು ಎಂಬ ಮಾತಿದೆ.












Click it and Unblock the Notifications